Advertisement

ಸ್ಮಾರ್ಟ್‌ಸಿಟಿಗೆ ಹೈಟೆಕ್‌ ಬಸ್‌ ನಿಲ್ದಾಣ

08:47 AM Mar 11, 2019 | Team Udayavani |

ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ದೇಶದಲ್ಲೇ ಪ್ರಪ್ರಥಮವಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಹೈಟೆಕ್‌ ಬಸ್‌ ನಿಲ್ದಾಣ ಇನ್ನು 3 ತಿಂಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿವೆ!.

Advertisement

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿತ ಸ್ಮಾರ್ಟ್‌ಸಿಟಿ ಯೋಜನೆಗೆ ಪ್ರಥಮ ಹಂತದಲ್ಲೇ ಆಯ್ಕೆಯಾಗಿರುವ ದಾವಣಗೆರೆಯಲ್ಲಿ ಬಹುತೇಕ ಕಾಮಗಾರಿ ಎಲ್ಲಾ ನಗರಕ್ಕಿಂತಲೂ ಮುಂಚೆಯೇ ಪ್ರಾರಂಭವಾಗಿವೆ ಎಂಬ ಹೆಗ್ಗಳಿಕೆಗೆ ಮತ್ತೂಂದು ಸೇರ್ಪಡೆ ಹೈಟೆಕ್‌ ಬಸ್‌ ನಿಲ್ದಾಣ. 

ದಾವಣಗೆರೆಯ ವಿದ್ಯಾನಗರದ ಮುಖ್ಯ ರಸ್ತೆಯ ರವೀಂದ್ರನಾಥ್‌ ಉದ್ಯಾನವನ, ಶಾಮನೂರು ರಸ್ತೆಯ ಕಾಸಲ್‌ ಶ್ರೀನಿವಾಸ್‌ ಶ್ರೇಷ್ಠಿ ಪಾರ್ಕ್‌, ಎಸ್‌. ನಿಜಲಿಂಗಪ್ಪ ಬಡಾವಣೆಯ ಪಾರ್ಕ್‌ ಒಳಗೊಂಡಂತೆ ಒಟ್ಟು 9 ಪಾರ್ಕಗಳಲ್ಲಿ ಅತ್ಯಾಧುನಿಕ ಹೈಟೆಕ್‌ ಶೌಚಾಲಯ ಪ್ರಾರಂಭವಾಗಿರುವುದು ಸ್ಮಾರ್ಟ್‌ಸಿಟಿ ಯೋಜನೆಯಡಿ ಆಯ್ಕೆಯಾಗಿರುವ ಎಲ್ಲಾ ನಗರಗಳಿಗಿಂತಲೂ ದಾವಣಗೆರೆಯಲ್ಲೇ ಪ್ರಥಮ ಎನ್ನುವುದು ವಿಶೇಷ. ಅದರ ಜೊತೆಗೆ ಈಗ ಒಟ್ಟು 3.53 ಕೋಟಿ ಅನುದಾನದಲ್ಲಿ 52 ಹೈಟೆಕ್‌ ಬಸ್‌ ನಿಲ್ದಾಣ ಕಾಮಗಾರಿಗೆ ಭಾನುವಾರ ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದ್ದಾರೆ. 

ಹೈಟೆಕ್‌ ನಿಲ್ದಾಣ ವಿಶೇಷಗಳು: ಸ್ಮಾರ್ಟ್‌ಸಿಟಿ ಯೋಜನೆಗೆ ತಕ್ಕಂತೆಯೇ ನಗರ ಬಸ್‌ ನಿಲ್ದಾಣಗಳು ಸಹ ಆಧುನಿಕ ಸೌಲಭ್ಯಗಳೊಂದಿಗೆ ಸ್ಮಾರ್ಟ್‌ ಆಗಿರಲಿವೆ. ಸರ್ಕಾರ-ಸಾರ್ವಜನಿಕ ಸಹಭಾಗಿತ್ವ(ಪಿ.ಪಿ.ಪಿ) ಮಾದರಿಯಲ್ಲಿ ಪ್ರತಿ ಬಸ್‌ ನಿಲ್ದಾಣ 7.5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿವೆ.

ಎಲ್ಲಾ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಅಲ್ಲದೆ ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌ ಸಹ ಇರುತ್ತದೆ. ಬಸ್‌ಗಾಗಿ ಕಾಯುವ ಪ್ರಯಾಣಿಕರ ಅನುಕೂಲಕ್ಕೆ ಅತ್ಯಾಧುನಿಕ ಆಸನಗಳಿರುತ್ತವೆ. ವಿಕಲ ಚೇತನರ ಅನುಕೂಲಕ್ಕಾಗಿ ರ್‍ಯಾಂಪ್‌ ಜೊತೆಗೆ ಸುಲಲಿತವಾಗಿ ಬಸ್‌ ಹತ್ತಲು ಮತ್ತು ಇಳಿಯುವಂತಾಗಲಿಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬಸ್‌ ನಿಲ್ದಾಣದಲ್ಲಿ ಜಾಹೀರಾತು ಫಲಕ ಅಳವಡಿಸುವ ಅನುಕೂಲ ಮಾಡಿಕೊಡಲಾಗುತ್ತದೆ.

Advertisement

ಬಸ್‌ ನಿಲ್ದಾಣಗಳಲ್ಲಿ ಸ್ವತ್ಛತೆ ಕಾಪಾಡುವುದಕ್ಕಾಗಿಯೇ ಅಲ್ಲಲ್ಲಿ ಕಸದ ಬುಟ್ಟಿ(ಡಸ್ಟ್‌ ಬಿನ್‌) ಇರಲಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಸಂಬಂಧಿತ ನಿಲ್ದಾಣಕ್ಕೆ ಬಸ್‌ ನಿಖರವಾಗಿ ತಲುಪುವ ಸಮಯವನ್ನ ಡಿಜಿಟಲ್‌ ಬೋರ್ಡ್‌ ಮೂಲಕ ತೋರಿಸಲಾಗುತ್ತದೆ. ಎಲ್ಲಾ ನಗರ ಸಾರಿಗೆ ಬಸ್‌ಗಳಿಗೆ ಜಿಪಿಎಸ್‌ ವ್ಯವಸ್ಥೆ ಅಳವಡಿಸುವುದರಿಂದ ಬಸ್‌ ಯಾವ ಸ್ಥಳದಲ್ಲಿದೆ, ಯಾವ ಸಮಯಕ್ಕೆ ನಿಲ್ದಾಣಕ್ಕೆ ಬರುತ್ತದೆ ಎಂಬುದನ್ನು ತಿಳಿಸುವ ವ್ಯವಸ್ಥೆ ಇರುವುದರಿಂದ ಬಸ್‌ಗಾಗಿ ಚಡಿಪಡಿಸುವ ಅಗತ್ಯವೇ ಬೀಳದು. ಇನ್ನು ಬಸ್‌ ಯಾವ ಮಾರ್ಗದಲ್ಲಿ ಸಂಚರಿಸುತ್ತದೆ. ಮುಂದಿನ ನಿಲ್ದಾಣ ಯಾವುದು ಎಂಬ ಮಾಹಿತಿ ನೀಡುವ ವ್ಯವಸ್ಥೆ ಇದೆ. ಪ್ರತಿ ನಿಲ್ದಾಣದಲ್ಲಿ ರೂಟ್‌ ಮ್ಯಾಪ್‌(ಮಾರ್ಗಸೂಚಿ) ಇರಲಿದೆ.

52 ಹೈಟೆಕ್‌ ಬಸ್‌ ನಿಲ್ದಾಣ: ದಾವಣಗೆರೆಯಲ್ಲಿ ಒಟ್ಟು 52 ಹೈಟೆಕ್‌ ಬಸ್‌ ನಿಲ್ದಾಣ ತಲೆ ಎತ್ತಲಿವೆ. ಪಿ.ಜೆ. ಬಡಾವಣೆಯ ಸಮೀಪದ ಪಿಜೆ ಹೋಟೆಲ್‌, ಎವಿಕೆ ಕಾಲೇಜು, ವಿಜಯಾ ಹೋಟೆಲ್‌, ಗುಂಡಿ ಮಹಾ ದೇವಪ್ಪ ವೃತ್ತ, ಯುಬಿಡಿಟಿ ಕಾಲೇಜು, ವಿದ್ಯಾನಗರ 2ನೇ ಬಸ್‌ ನಿಲ್ದಾಣ, ಕಾಸಲ್‌ ಶ್ರೀನಿವಾಸ್‌ ಶ್ರೇಷ್ಠಿ ಪಾರ್ಕ್‌, ಬಿಐಇಟಿ ಮುಂಭಾಗ, ವಿದ್ಯಾರ್ಥಿ ಭವನ ವೃತ್ತ, ಜಿಲ್ಲಾ ಕ್ರೀಡಾಂಗಣ, ಹದಡಿ ರಸ್ತೆಯ ಐಟಿಐ ಕಾಲೇಜು, ಲೋಕಿಕೆರೆ ರೋಡ್‌ ಜಂಕ್ಷನ್‌, ಜಿಲ್ಲಾ ನ್ಯಾಯಾಲಯ, ಎಚ್‌.ಕೆ.ಆರ್‌. ವೃತ್ತ… ಒಳಗೊಂಡಂತೆ
25 ಸ್ಥಳಗಳಲ್ಲಿ ಹೊಸದಾಗಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣವಾಗಲಿವೆ.

ಚಿಗಟೇರಿ ಜಿಲ್ಲಾ ಆಸ್ಪತ್ರೆ, ವಿದ್ಯಾನಗರ ಕೊನೆ ಬಸ್‌ ನಿಲ್ದಾಣ, ನಿಟುವಳ್ಳಿ ಪೊಲೀಸ್‌ ನಿಲ್ದಾಣ, ಬಾಪೂಜಿ ಹೈಸ್ಕೂಲ್‌, ರೈಸ್‌ಮಿಲ್‌.. ಬಳಿ ಈಗಾಗಲೇ ಇರುವಂತಹ ಬಸ್‌ ನಿಲ್ದಾಣಗಳನ್ನು ಸಂಪೂರ್ಣವಾಗಿ ಕೆಡವಿ, ಹೈಟೆಕ್‌ ಬಸ್‌ ನಿಲ್ದಾಣ ಕಟ್ಟಲಾಗುತ್ತದೆ.

ಬಾಪೂಜಿ ಸಮುದಾಯ ಭವನ, ಶಾಮನೂರು ಗ್ರಾಮ, ಶಿವಾಲಿ ಚಿತ್ರಮಂದಿರ, ವಿದ್ಯಾನಗರ ಫಸ್ಟ್‌- ಲಾಸ್ಟ್‌ ಬಸ್‌ ಸ್ಟಾಪ್‌, ಗುಂಡಿ ಮಹಾದೇವಪ್ಪ ವೃತ್ತ, ಬಿಐಇಟಿ ಬಾಯ್ಸ ಹಾಸ್ಟೆಲ್‌… ಒಳಗೊಂಡಂತೆ 13 ಕಡೆ ಹಾಲಿ ಇರುವಂತಹ ಬಸ್‌ ನಿಲ್ದಾಣಗಳನ್ನೇ ಪುನರ್‌ ನವೀಕರಣ ಅಂದರೆ ಹೈಟೆಕ್‌ ಬಸ್‌ ನಿಲ್ದಾಣಗಳನ್ನಾಗಿ ಮಾರ್ಪಡಿಸಲಾಗುವುದು.

ಪಿ.ಪಿ.ಪಿ. ಮಾದರಿಯಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣ ಕೈಗೆತ್ತಿಗೊಳ್ಳಲಾಗುತ್ತಿದೆ. ಬಸ್‌ ನಿಲ್ದಾಣ ಕಾಮಗಾರಿ ಗುತ್ತಿಗೆ
ಪಡೆದವರು 20 ವರ್ಷಗಳ ಕಾಲ ನಿರ್ವಹಣೆ ಜವಾಬ್ದಾರಿ ಹೊಂದಿರುತ್ತಾರೆ. ಹೈಟೆಕ್‌ ಬಸ್‌ ನಿರ್ಮಾಣ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರಿಗೆ ಸ್ಮಾರ್ಟ್‌ಸಿಟಿ ಯೋಜನೆ ಕಂಪನಿ ಮೂಲಕ ಮುಂಗಡವಾಗಿ ಶೇ.80 ರಷ್ಟು ಅನುದಾನ ನೀಡಲಾಗುತ್ತದೆ.

ಸಂಬಂಧಿತ ಗುತ್ತಿಗೆದಾರರು ಸ್ಮಾರ್ಟ್‌ಸಿಟಿ ಯೋಜನೆ ಕಂಪನಿಗೆ ವಾರ್ಷಿಕ 30 ಸಾವಿರ ರೂಪಾಯಿ ಸಂದಾಯ ಮಾಡಬೇಕಾಗುತ್ತದೆ. ಒಟ್ಟಾರೆಯಾಗಿ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿರುವ ದಾವಣಗೆರೆಯಲ್ಲಿ ಹಲವು ಪ್ರಥಮ ಕಾಮಗಾರಿ ನಡೆಯುತ್ತಿವೆ. ಕೆಲ ದಿನಗಳಲ್ಲಿ ದಾವಣಗೆರೆ ಸ್ಮಾರ್ಟ್‌ ಆಗಲಿದೆ.

„ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next