Advertisement

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ

12:40 AM Sep 29, 2024 | Team Udayavani |

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸುತ್ತಿರುವ ವಿಜಯಪುರ ಶಾಸಕ, ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಗೋಕಾಕ್‌ ಶಾಸಕ ರಮೇಶ ಜಾರಕಿಹೊಳಿ ಸೆ.29 (ರವಿವಾರ)ರಂದು ನಗರಕ್ಕೆ ಆಗಮಿಸುತ್ತಿದ್ದು ಇಬ್ಬರ ಭೇಟಿಯೂ ತೀವ್ರ ಕುತೂಹಲ ಕೆರಳಿಸಿದೆ.

Advertisement

ಪಕ್ಷ ಸಂಘಟನೆ ಹೆಸರಲ್ಲಿ ದಾವಣಗೆರೆಗೆ ಭೇಟಿ ನೀಡುತ್ತಿರುವ ಈ‌ ಮುಖಂಡರು, ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ ಅವರ ಜಿಎಂಐಟಿ ಅತಿಥಿಗೃಹದಲ್ಲಿ ಮಹತ್ವದ ಸಭೆ ನಡೆಸಿ ತಮ್ಮ ಮುಂದಿನ ನಡೆಯ ನಿರ್ಧರಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಖಚಿತ ಪಡಿಸಿವೆ. ಒಂದು ಕಾಲದಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಆಪ್ತರಾಗಿದ್ದ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತಿರುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ.

ಸಭೆಯಲ್ಲಿ ಕೆಲವು ಮಾಜಿ, ಹಾಲಿ ಶಾಸಕರು ಭಾಗವಹಿಸುವ ನಿರೀಕ್ಷೆ ಇದ್ದು ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ, ಇಲ್ಲಿಂದಲೇ ಪಕ್ಷದ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ಸಾರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮುಖಂಡರ ಈ ಸಭೆಯು ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಮೊದಲಿನಿಂದಲೂ  ಯತ್ನಾಳ್‌ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಹಾಗೆಯೇ ಅಥಣಿಯಲ್ಲಿ ಮಾತನಾಡಿ ಶಾಸಕ ರಮೇಶ್‌ ಜಾರಕಿಹೊಳಿ ಕೂಡ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವುದು ಎಂದೂ ಒಪ್ಪುವುದಿಲ್ಲ ಎಂದು ಹೇಳಿದ್ದರು.

ಎರಡನೇ ಪಾದಯಾತ್ರೆ ವಿಚಾರ?
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಮೈಸೂರು ಚಲೋ ಪಾದಯಾತ್ರೆ ವೇಳೆ ಯತ್ನಾಳ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಪಾದಯಾತ್ರೆಯಿಂದ ದೂರ ಉಳಿದರು. ಆ ಬಳಿಕ ಮತ್ತೊಂದು ಪಾದಯಾತ್ರೆ ನಡೆಸುವುದಾಗಿ ಸಭೆಗಳ ನಡೆಸಿದರು. ಈ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದು, ಹೈಕಮಾಂಡ್ ಮಧ್ಯಪ್ರವೇಶಿಸಿ ಸದ್ಯಕ್ಕೆ ಎರಡನೇ ಪಾದಯಾತ್ರೆಗೆ ತಡೆ ಹಾಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next