Advertisement

MUDA ಮತ್ತು ವಾಲ್ಮೀಕಿ ನಿಗಮದ ಹಗರಣದ ತನಿಖೆ ಸಿಬಿಐಗೆ ವಹಿಸಬೇಕು: ಡಾ| ಜಿ.ಎಂ.ಸಿದ್ದೇಶ್ವರ

06:25 PM Jul 12, 2024 | Team Udayavani |

ದಾವಣಗೆರೆ: ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣದ ತನಿಖೆಯನ್ನು ಕೂಡಲೇ ಸಿಬಿಐಗೆ ವಹಿಸಬೇಕು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಒತ್ತಾಯಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಸಿದ್ದರಾಮಯ್ಯ ಅವರ ಪತ್ನಿ ಅವರ 3.16 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿರುವುದಕ್ಕೆ ಬದಲಿಯಾಗಿ ಕಾನೂನು ಪ್ರಕಾರ1-2 ನಿವೇಶನ ನೀಡಬೇಕು. ಆದರೆ, ಮೈಸೂರಿನ ಮಧ್ಯ ಭಾಗದಲ್ಲಿ ಅತಿ ಹೆಚ್ಚು ಬೆಲೆ ಬಾಳುವ 14 ನಿವೇಶನಗಳ ಪಡೆದಿರುವುದೇ ಭ್ರಷ್ಟಾಚಾರ ಎಂದು ದೂರಿದರು.

1992 ರಲ್ಲಿ ಮುಡಾ ಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ಸಿದ್ದರಾಮಯ್ಯ ಅವರ ಪತ್ನಿಯ ಸಹೋದರ ಖರೀದಿ ಮಾಡಿ, ಪಾರ್ವತಿ ಅವರಿಗೆ ಗಿಫ್ಟ್ ಡೀಡ್ ನೀಡಲು ಹೇಗೆ ಸಾಧ್ಯ. ಕಾನೂನು ಪ್ರಕಾರ 1 ಎಕರೆ ಜಮೀನು ಸ್ವಾಧೀನಪಡಿಸಿಕೊಂಡರೆ 40-60 ಅಡಿ ಸುತ್ತಳತೆಯ ಜಾಗ ಬದಲಿಯಾಗಿ ನೀಡಬಹುದು. 3 ಎಕರೆಗೆ 14 ನಿವೇಶನ ಕೊಟ್ಟಿರುವುದು ಕಾನೂನು ಪ್ರಕಾರ ಮಹಾಪರಾಧ ಎಂದು ದೂರಿದರು.

ಮುಡಾ ಹಗರಣದ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಬಡವರಿಗೆ ನೀಡಬೇಕಾಗಿರುವ ನಿವೇಶನವನ್ನ ಅವರೇ ತೆಗೆದುಕೊಂಡಿರುವುದು ದೊಡ್ಡ ತಪ್ಪು. ವಾಸ್ತವವಾಗಿ ಸ್ವಾಧೀನ ಪಡಿಸಿ ಕೊಂಡಿರುವಂತಹ ಜಮೀನಿಗೆ 62 ಕೋಟಿ ಆಗುತ್ತದೆ.18 ಕೋಟಿ ತೆಗೆದುಕೊಂಡಿದ್ದೇವೆ ಎಂಬ ಉಡಾಫೆ ಉತ್ತರ ನೀಡಿರುವಂತಹ ಸಿದ್ದರಾಮಯ್ಯ ತತ್ ಕ್ಷಣವೇ ರಾಜೀನಾಮೆ ನೀಡಬೇಕು ಮತ್ತು ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಮುಡಾ ದಂತೆ ರಾಜ್ಯದ ಇತರೆ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲೂ ನಿವೇಶನ ಹಂಚಿಕೆ ಇತರೆ ಅವ್ಯವಹಾರ ನಡೆದಿ ರಬಹುದಾದ ಸಾಧ್ಯತೆ ಇರುವುದಿಂದ ಎಲ್ಲವನ್ನೂ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸ ಬೇಕು. ಬಿಜೆಪಿಯವರೋ, ಕಾಂಗ್ರೆಸ್‌ನವರೋ ಯಾರೇ ತಪ್ಪು ಮಾಡಿರಲಿ. ಅಂತಹವರ ವಿರುದ್ಧ ಶಿಕ್ಷೆ ತೆಗೆದು ಕೊಳ್ಳಲಿ ಎಂದು ಒತ್ತಾಯಿಸಿದರು.

Advertisement

ವಾಲ್ಮೀಕಿ ಅಭಿವೃದ್ಧಿ ಹಗರಣದಲ್ಲಿ 187 ಕೋಟಿ ಅವ್ಯವಹಾರ ಆಗಿದೆ. ನ್ಯಾಯಸಮ್ಮತವಾದ ತನಿಖೆಗಾಗಿ ಹಣ ಕಾಸು ಇಲಾಖೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದುಳಿದ ವರ್ಗಕ್ಕೆ ಸೇರಿರುವ ನಾನು ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದಕ್ಕೆ ಬಿಜೆಪಿಯವರಿಗೆ ಹೊಟ್ಟೆ ಉರಿ ಎಂದು ಜಾತಿಯ ಬಗ್ಗೆ ಹೇಳಿಕೆ ನೀಡಿರುವುದು ಒಳ್ಳೆಯ ಮಾತಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೋವಿಡ್ ಕಾಲದಲ್ಲಿ ಬಹಳಷ್ಟು ಹಗರಣ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಗುರುವಾರ ಸಭೆಯೊ ಂದರಲ್ಲಿ ಹೇಳಿದ್ದಾರೆ. ಅವರದ್ದೇ ಸರ್ಕಾರ ಇದೆ ತನಿಖೆ ನಡೆಸಲಿ, ಯಾರು ಹಗರಣ ಮಾಡಿದ್ದಾರೆ. ಯಾರು ಪಾಲುದಾರರಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. ಯಾರೇ ತಪ್ಪು ಮಾಡಿರಲಿ ದಯವಿಟ್ಟು ಕ್ರಮ ತೆಗೆದುಕೊಳ್ಳಿ ಎಂದು ಮಾಜಿ ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಒತ್ತಾಯಿಸಿದರು.

ಲೋಕಸಭಾ ಚುನಾವಣೆಯಲ್ಲಿನ ಸೋಲಿಗೆ ಕಾರಣ ಏನು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. 26 ಸಾವಿರ ವೋಟ್‌ನಲ್ಲಿ ಸೋತಿದ್ದೇವೆ. ಸೋಲಿಗೆ ಕಾರಣವನ್ನ ಮತ್ತೆ ಮತ್ತೆ ಹೇಳುವುದರಲ್ಲಿ ಅರ್ಥ ಇಲ್ಲ. ಶಾಸಕ ಹರೀಶ್ ಅವರು ಹೇಳಿಕೆ ನೀಡಿದ್ದಾರೆ ಎಂದರೆ ಅವರಿಗೆ ಸತ್ಯ ಗೊತ್ತಿರಬಹುದು. ಮಾಹಿತಿ ಇರಬಹುದು. ಆ ಕಾರಣಕ್ಕೆ ಹೇಳಿಕೆ ನೀಡಿದ್ದಾರೆ. ನಾನೇ ಎಲೆಕ್ಷನ್‌ನಲ್ಲಿ ನಿಲ್ಲಬೇಕಿತ್ತು ಅನಿಸುತ್ತಿದೆ. ಆದರೆ, ಆಗ ಆರೋಗ್ಯ ಚೆನ್ನಾಗಿರಲಿಲ್ಲ. ಈಗ ರಿಲ್ಯಾಕ್ಸ್ ಆಗಿದ್ದೇನೆ. ಎಲೆಕ್ಷನ್ ಸೋತ ನಂತರ ಮೌನವಾಗಿಲ್ಲ. ಇನ್ನೂ ಆಕ್ಟಿವ್ ಆಗಿದ್ದೇನೆ ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next