Advertisement

Davanagere ನಾವು ಅಳುವವರಲ್ಲ, ಸೆಡ್ಡು ಹೊಡೆಯುವವರು: ಶಾಮನೂರು

07:32 PM Jul 31, 2024 | Team Udayavani |

ದಾವಣಗೆರೆ: ದಾವಣಗೆರೆಯ ಕಲ್ಲೇಶ್ವರ ರೈಸ್‌ ಮಿಲ್‌ನಲ್ಲಿನ ಜಿಂಕೆ ಕೊಂಬು ಪತ್ತೆ ಪ್ರಕರಣ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಬಳಿ ಅತ್ತಿದ್ದೇನೆ ಎಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ. ನಾವು ಅಳುವವರಲ್ಲ. ಸೆಡ್ಡು ಹೊಡೆಯುವಂತಹವರು ಎಂದು ಹಿರಿಯ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಟಾಂಗ್‌ ನೀಡಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, 93 ವರ್ಷದ ನನಗೆ 72 ವರ್ಷದವನು ಬುದ್ಧಿವಾದ ಹೇಳಲು ಬರುತ್ತಾನೆ. ಇನ್ನು ಮುಂದೆ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ನನ್ನ ಅಳಿಯನಿಗೆ ಎಚ್ಚರಿಕೆ ನೀಡುತ್ತಿದ್ದೇನೆ.

ನಾವು ಅವನಿಗಿಂತಲೂ ಮೊದಲು ಶ್ರೀಮಂತರು. ಭೀಮಸಮುದ್ರದಲ್ಲಿ ಅಡಕೆ ಮಾರಿ, ಲೆಕ್ಕ ಇಲ್ಲದಂತೆ ಸೇಲ್ಸ್‌ ಟ್ಯಾಕ್ಸ್‌ ತಪ್ಪಿಸಿದವನು, ದಾವಣಗೆರೆಯಲ್ಲಿ ಸಂಬಂ ಧಿಕರ ಆಸ್ತಿ ಹೊಡೆದವನು, ಎಂಪಿಯಾಗಿದ್ದಾಗ ಅವರದ್ದೇ ಜಿಎಂಐಟಿಯಿಂದ ಬಸ್‌ ಶೆಲ್ಟರ್‌ಗಳನ್ನು ಮಾಡಿಸಿ ದುಡ್ಡು ಹೊಡೆದವನು ಅವನು. ಭೈರತಿ ಬಸವರಾಜ ಅಂತ ಮಂತ್ರಿಯೊಬ್ಬನಿದ್ದ. ಅವನು ಬೆಳಗ್ಗೆ ದಾವಣಗೆರೆಗೆ ಬಂದು ದುಡ್ಡು ವಸೂಲಿ ಮಾಡ್ತಾ ಇದ್ದ. ಆಮೇಲೆ ಇಬ್ಬರೂ ಹಂಚಿಕೊಳ್ಳುತ್ತಾ ಇದ್ದರು ಎಂದು ಏಕವಚನದಲ್ಲೇ ವಾಗ್ಧಾಳಿ ನಡೆಸಿದರು.

ಎಲೆಕ್ಷನ್‌ನಲ್ಲಿ ಸೋತ ಮೇಲೆ ಅವನು ಏನೋ ಗಂಟು ಕಳೆದುಕೊಂಡನಂತೆ ಅಲ್ಲಿ ಇಲ್ಲಿ ಅಳುತ್ತಾ ಇದ್ದಾನೆ. ಎಲೆಕ್ಷನ್‌ ಅಂದ ಮೇಲೆ ಸೋಲು-ಗೆಲುವು ಸಾಮಾನ್ಯ ಎಂಬುದನ್ನು ಅವನು ತಿಳಿದುಕೊಳ್ಳಬೇಕು. ಅವನು ಮತ್ತು ಅವರಪ್ಪನನ್ನು ಭೀಮಸಮುದ್ರದಿಂದ ದಾವಣಗೆರೆಗೆ ಕರೆದುಕೊಂಡು ಬಂದಿದ್ದು ಯಾರು ಎಂಬುದನ್ನೇ ಮರೆತಿದ್ದಾನೆ.

ನಮ್ಮ ಸೊಸೆ ಚುನಾವಣೆಯಲ್ಲಿ ಗೆದ್ದಿರುವುದು ಹೇಗೆ ಎಂದು ಕೇಸ್‌ ಹಾಕಿಸಿದ್ದಾನೆ. ಒಂದು ವೋಟ್‌ನಲ್ಲಿ, ಎರಡು ಲಕ್ಷ ಮತಗಳಲ್ಲಿ ಗೆದ್ದರೂ ಗೆಲುವೇ ಎಂಬುದನ್ನು ತಿಳಿದುಕೊಳ್ಳಬೇಕು. ಅವನು ಮತ್ತು ಅವರಪ್ಪ ಹೆಂಗೆ ಗೆದ್ದಿದ್ದಾರೆ ಎಂಬುದು ನಮಗೂ ಗೊತ್ತು.

Advertisement

ಎಲೆಕ್ಷನ್‌ಗೆ ದುಡ್ಡಿಲ್ಲ ಅಂತ ದುಡ್ಡು ಇಸ್ಕೊಂಡು ಬಂದಿರುವುದೂ ಗೊತ್ತು. ಕೆಲವು ಗೂಂಡಾಗಳು, ಪೈಲ್ವಾನರ ಜತೆಗೆ ಇಟ್ಟುಕೊಂಡು ಓಡಾಡುತ್ತಿದ್ದಾನೆ. ಗೂಂಡಾಗಳನ್ನು ಸಾಕಿ ಕೊಂಡಿದ್ದಾನೆ. ಅವನು ಏನಾದರೂ ಮಾತನಾಡಬೇಕು ಎಂದರೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಗ್ರಾಮ ಭಾಷೆಯಲ್ಲಿ ಎಚ್ಚರಿಸಿದರು.

ಒಂದು ಕಡೆ ಯಡಿಯೂರಪ್ಪ, ವಿಜಯೇಂದ್ರಗೆ ಬೈಯುತ್ತಾನೆ. ಇನ್ನೊಂದು ಕಡೆ ಬೈದಿಲ್ಲ ಅನ್ನುತ್ತಾನೆ. ಅಲ್ಲೊಂದು ಇಲ್ಲೊಂದು ಮಾತನಾಡುತ್ತಾನೆ. ಅವನು ಮಾತನಾಡಿರುವಂತಹ ಪೇಪರ್‌ ಕಟಿಂಗ್‌ ನನ್ನ ಹತ್ತಿರ ಇವೆ. ನೀವು (ಮಾಧ್ಯಮದವರು) ತೋರಿಸಿ. ಅವನು ಈಗಾಗಲೇ ದಾವಣಗೆರೆಯಲ್ಲಿ ಬಿಜೆಪಿಯನ್ನು ಎರಡು ಮಾಡಿದ್ದಾನೆ. ಮುಂದೆ ನಾಲ್ಕು ಮಾಡುತ್ತಾನೆ. ಸೋತ ಮೇಲೆ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಬೇಕು. ನಾವು ಗೆದ್ದಿರುವುದು ಹೆಂಗೆ ಅಂತ ಕೇಸ್‌ ಹಾಕಿಸಿದ್ದಾನೆ ದೊಡ್ಡ ಮನುಷ್ಯ. ಅವನು ಮಾಡಿದಂತಹ ಕೆಲಸಗಳನ್ನು ನಾವು ಮಾಡುವುದಿಲ್ಲ ಎಂದು ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next