Advertisement

High Court ನಿರ್ದೇಶನ: ಕೊಂಬಾರಿನ ರಸ್ತೆ, ಬಿರ್ಮೆರೆಗುಂಡಿ ಸೇತುವೆಗೆ 1.31 ಕೋಟಿ ರೂ.

12:39 PM Sep 19, 2024 | Team Udayavani |

ಕಡಬ: ಕೊಂಬಾರು ಗ್ರಾ.ಪಂ. ವ್ಯಾಪ್ತಿಯ ಮಣಿಭಾಂಡ (ಸಿರಿಬಾಗಿಲು ಸರಕಾರಿ ಶಾಲೆಯಿಂದ), ಪೆರುಂದೋಡಿ (ಮಲೆಮಾಕಿ), ಬಿರ್ಮೆರೆಗುಂಡಿ-ಕಟ್ಟೆ, ಕೋಟೆಗುಡ್ಡ ಸಂಪರ್ಕ ರಸ್ತೆ ಹಾಗೂ ಬಿರ್ಮೆರೆಗುಂಡಿ ಹೊಳೆಗೆ ಸೇತುವೆ ನಿರ್ಮಾಣಕ್ಕೆ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಸರಕಾರದಿಂದ 1 ಕೋಟಿ 31 ಲಕ್ಷದ 50 ಸಾವಿರ ರೂ.ಹಣ ಬಿಡುಗಡೆಯಾಗಿದೆ.

Advertisement

ಕೊಂಬಾರು ಗ್ರಾ.ಪಂ. ವ್ಯಾಪ್ತಿಯ ಸೇತುವೆಗಳ ನಿರ್ಮಾಣಕ್ಕೆ ನ್ಯಾಯಾಲಯದ ನಿರ್ದೇಶನದಲ್ಲಿ ಅನುದಾನ ಬಿಡುಗಡೆಯಾಗಿರುವ ಎರಡನೇ ಪ್ರಕರಣ ಇದಾಗಿದೆ.

ಮಣಿಭಾಂಡ-ಪೆರುಂದೋಡಿ, ಬಿರ್ಮೆರೆಗುಂಡಿ, ಕಟ್ಟೆ, ಕೋಟೆಗುಡ್ಡೆ ಸಂಪರ್ಕ ರಸ್ತೆಗೆ ರೂ. 81.50 ಲಕ್ಷ ರೂ.ಅನುದಾನ ಹಾಗೂ ಬಿರ್ಮೆರೆಗುಂಡಿ ಸೇತುವೆ ರಚನೆಗೆ ರೂ. 50 ಲಕ್ಷ ರೂ.ಅನುದಾನ ಮಂಜೂರುಗೊಂಡಿದೆ. ಈ ಬಗ್ಗೆ ಸ್ಥಳೀಯರಾದ ಗುಣವಂತ ಕಟ್ಟೆ ಹಾಗೂ ಮಂಜುನಾಥ ಕಟ್ಟೆ ಅವರು ಸ್ಥಳೀಯ ನಿವಾಸಿ ಹೈಕೋರ್ಟ್‌ನಲ್ಲಿ ನ್ಯಾಯವಾದಿಯಾಗಿರುವ ಪ್ರವೀಣ್‌ ಕುಮಾರ್‌ ಕಟ್ಟೆ ಅವರ ಮೂಲಕ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಸುಮಾರು 1 ವರ್ಷಗಳ ಕಾನೂನು ಹೋರಾಟದ ಬಳಿಕ ಹೈಕೋರ್ಟ್‌ ಸರಕಾರಕ್ಕೆ ನೋಟಿಸ್‌ ನೀಡಿದ್ದು, ಆ ಹಿನ್ನಲೆಯಲ್ಲಿ ಸರಕಾರ ಕ್ರಿಯಾಯೋಜನೆ ತಯಾರಿಸಿ ಸಮಸ್ಯೆ ನ್ಯಾಯಾಲಯದಲ್ಲಿ ಮುಂದುವರಿಯದಂತೆ ನೋಡಿಕೊಂಡಿದೆ. ಜಿ.ಪಂ. ಎಂಜಿನಿಯರ್‌ ಅಂದಾಜುಪಟ್ಟಿ ತಯಾರಿಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಆ ಪ್ರಕಾರ ಸರಕಾರ ಇದೀಗ ಅನುದಾನ ಮಂಜೂರುಗೊಳಿಸಿದೆ.

ಜನಪ್ರತಿನಿಧಿಗಳಿಂದ ಪ್ರಯೋಜನವಾಗಿಲ್ಲ
ನಾವು ಕಳೆದ ಒಂದು ವರ್ಷದ ಹಿಂದೆ ನ್ಯಾಯಾಲಯದಲ್ಲಿ ನಮ್ಮ ಊರಿನವರಾದ ಹೈಕೋರ್ಟ್‌ ವಕೀಲ ಪ್ರವೀಣ ಕುಮಾರ್‌ ಕಟ್ಟೆ ಅವರ ಮೂಲಕ ದಾವೆ ದಾಖಲಿಸಿದ್ದೆವು. ನಮ್ಮ ಭಾಗದ ಪ್ರಮುಖ ಸಮಸ್ಯೆಯಾಗಿರುವ ರಸ್ತೆ ಹಾಗೂ ಸೇತುವೆಯ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ನಾವು ದಾವೆ ಹೂಡಿದ ಬಳಿಕ ನ್ಯಾಯಾಲಯ ಸರಕಾರಕ್ಕೆ ನೋಟಿಸು ನೀಡಿತ್ತು. ಇದೀಗ ಅನುದಾನ ಮಂಜೂರಾಗಿರುವುದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ.
-ಮಂಜುನಾಥ ಕಟ್ಟೆ ಹಾಗೂ ಗುಣವಂತ ಕಟ್ಟೆ, ಹೋರಾಟಗಾರರು.

ಕೋರ್ಟ್‌ ಮೆಟ್ಟಿಲೇರಿ ಅನುದಾನ: ಎರಡನೇ ಪ್ರಕರಣ
ಈ ಹಿಂದೆ ಕೊಂಬಾರು ಗ್ರಾಮದ ಮೆಟ್ಟುತ್ತಾರು ಎಂಬಲ್ಲಿ ಸೇತುವೆ ನಿರ್ಮಾಣಕ್ಕಾಗಿ ಭುವನೇಶ್ವರ ಅಮೂcರು ಎಂಬವರು ನ್ಯಾಯವಾದಿ ಪ್ರವೀಣ್‌ ಕುಮಾರ್‌ ಕಟ್ಟೆ ಅವರ ಮೂಲಕ ಹೈಕೋರ್ಟ್‌ನಲ್ಲಿ ದಾವೆ ಹೂಡಿ ಸತತ ಹೋರಾಟದ ಮೂಲಕ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮಣಿಭಾಂಡ-ಕೋಟೆಗುಡ್ಡೆ ರಸ್ತೆ ಸಂಪರ್ಕ ರಸ್ತೆ ಹಾಗೂ ಬಿರ್ಮೆರೆಗುಂಡಿ ಸೇತುವೆ ನಿರ್ಮಾಣದ ಬಗ್ಗೆ ಹೈಕೋರ್ಟ್‌ನಲ್ಲಿ ದಾವೆ ಹೂಡಿದ ಬಳಿಕ ಹಣ ಮಂಜೂರಾತಿಯಾಗುತ್ತಿರುವುದು ಗ್ರಾಮದಲ್ಲಿ ಎರಡನೇ ಪ್ರಕರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next