Advertisement

ಕರಾವಳಿ ಭಾಗದಲ್ಲಿ ಹೈ ಅಲರ್ಟ್‌

11:27 PM Aug 25, 2019 | Team Udayavani |

ಬೆಂಗಳೂರು: ದೇಶಕ್ಕೆ ನುಗ್ಗಿರುವ ಲಷ್ಕರ್‌-ಇ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಆರು ಮಂದಿ ಶಂಕಿತರ ಪೈಕಿ ಒಬ್ಬ ಕರ್ನಾಟಕದ ಕರಾವಳಿ ಭಾಗಕ್ಕೆ ಬಂದಿರುವ ಸಾಧ್ಯತೆ ಇದೆ ಎಂಬ ಅನುಮಾನದ ಮೇರೆಗೆ ರಾಜ್ಯ ಪೊಲೀಸ್‌ ಇಲಾಖೆ, ಕರಾವಳಿ ಭಾಗದಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಿದೆ. ಎಲ್‌ಇಟಿ ಉಗ್ರ ಸಂಘಟನೆಯ ಆರು ಮಂದಿ ತಮಿಳುನಾಡು ಪ್ರವೇಶಿಸಿದ್ದಾರೆ. ಈ ಪೈಕಿ ಒಬ್ಬ ಪಾಕಿಸ್ತಾನ ಪ್ರಜೆಯಾಗಿದ್ದಾನೆ ಎಂದು ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಪೊಲೀಸ್‌ ಇಲಾಖೆಗೆ ಮಾಹಿತಿ ರವಾನಿಸಿತ್ತು.

Advertisement

ಅದರ ಬೆನ್ನಲ್ಲೇ ಕರಾವಳಿ ಕಾವಲು ಪೊಲೀಸ್‌ ಠಾಣೆ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಶಂಕಿತ ವ್ಯಕ್ತಿಯೊಬ್ಬನ ಫೋಟೋ ಹಾಕಿ, ಆತನ ಚಲನವಲನಗಳ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಿಕೊಂಡಿದೆ. ಪ್ರಮುಖವಾಗಿ ಮಂಗಳೂರು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಗಡಿ ಭಾಗ ಸೇರಿ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದ್ದು, ಕರಾವಳಿ ಕಾವಲು ಪಡೆಗಳು ದಿನದ 24 ಗಂಟೆ ಸಹ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು.

ಜತೆಗೆ ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಸಹ ಶಂಕಿತರ ಚಲನವಲನಗಳ ಮೇಲೆ ನಿಗಾ ವಹಿಸಬೇಕು. ಇದರೊಂದಿಗೆ ರಾಜ್ಯದಲ್ಲಿ ಬೀಡು ಬಿಟ್ಟಿರುವ ಎನ್‌ಐಎ, ಕೇಂದ್ರ ಗುಪ್ತಚರ ಇಲಾಖೆ, ರಾ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿರುವಂತೆಯೂ ಸೂಚಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಸುರಕ್ಷಿತ ಅಲ್ಲಎಂದು ಭಾವಿಸಿರುವ ಉಗ್ರ ಸಂಘಟನೆಯ ಸದಸ್ಯರು, ಮಂಗಳೂರು ಸೇರಿ ಕರಾವಳಿ ಭಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ತಮಿಳುನಾಡು ಪ್ರವೇಶಿಸಿರುವ ಶಂಕಿತರು ಜಲಮಾರ್ಗದ ಮೂಲಕವೇ ರಾಜ್ಯ ಪ್ರವೇಶಿಸಿ ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆಯಿದೆ. ಈ ಬಗ್ಗೆ ಖಚಿತತೆ ಇಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಅಲರ್ಟ್‌ ಘೋಷಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ದೇಶಕ್ಕೆ ಒಳ ನುಗ್ಗಿರುವ ಶಂಕಿತರು ಕೇರಳ, ತಮಿಳುನಾಡು ರಾಜ್ಯಗಳ ಪ್ರಮುಖ ಸ್ಥಳಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದಾರೆ. ಆದರೆ, ಕರಾವಳಿ ಮೂಲಕ ರಾಜ್ಯ ಪ್ರವೇಶಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next