Advertisement

ಡಿಕೆಶಿ-ಸುಧಾಕರ್‌ ನಡುವೆ “ಮೆಡಿಕಲ್‌ ಕಾಲೇಜು’ಕದನ

10:06 PM Feb 12, 2023 | Team Udayavani |

ಕನಕಪುರ: ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜು ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ನಡುವೆ ಕೆಲಕಾಲ ಚರ್ಚೆ ನಡೆದು, ನಂತರ ಸಚಿವರು ಈ ಸಂಬಂಧ ಸ್ಪಷ್ಟನೆ ನೀಡಿದ ಬೆಳವಣಿಗೆ ನಡೆಯಿತು.

Advertisement

ಇಲ್ಲಿನ ತಾಲೂಕು ಕಚೇರಿ ಪಕ್ಕದಲ್ಲಿ ಇನ್ಫೋಸಿಸ್‌ ಸಂಸ್ಥೆಯಿಂದ ನೂತನವಾಗಿ ನಿರ್ಮಿಸಿರುವ ತಾಯಿ ಮಗು ಹೈಟೆಕ್‌ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಸಚಿವ ಸುಧಾಕರ್‌, ಸಂಸದರು ನಮ್ಮ ಮೆಡಿಕಲ್‌ ಕಾಲೇಜು ಕಿತ್ತುಕೊಂಡರು ಎಂದು ಹೇಳುತ್ತಿದ್ದಾರೆ.

ಕನಕಪುರಕ್ಕೆ ಮಂಜೂರಾಗಿದ್ದ ಕಾಲೇಜು ಕೊಡುವಂತೆ ನಾನೆಂದೂ ಕೇಳಲಿಲ್ಲ. ಸಿದ್ದರಾಮಯ್ಯನವರ ಆಯವ್ಯಯದಲ್ಲಿ ಮೊದಲು ಚಿಕ್ಕಬಳ್ಳಾಪುರಕ್ಕೆ ಕೊಟ್ಟಿದ್ದರು. ಆದರೆ ಅನುದಾನ ಬಂದಿರಲಿಲ್ಲ. ಹಾಗಾಗಿ ಯಡಿಯೂರಪ್ಪನವರು ಅನುದಾನ ಬಿಡುಗಡೆ ಮಾಡಿದ್ದಾರೆ ಅಷ್ಟೆ. ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ತಾಲೂಕಿಗೂ ಮೇಡಿಕಲ್‌ ಕಾಲೇಜು ಮಂಜೂರು ಮಾಡಿಕೊಡುವುದಾಗಿ ಹೇಳಿದರು.

ನರೇಗಾ ಯೋಜನೆ ಬಳಸಿಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಗ್ರಾಮೀಣಾಭಿವೃದ್ಧಿಯಲ್ಲಿ ಕ್ರಾಂತಿ ಮಾಡಿದ್ದಾರೆ. ಹಾಗಾಗಿ ಪ್ರತಿ ಚುನಾವಣೆಯಲ್ಲೂ ಸಾಕಷ್ಟು ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್‌, ಈ ಹಿಂದೆ ಸಚಿವನಾಗಿದ್ದ ಸಂದರ್ಭದಲ್ಲಿ ಬಜೆಟ್‌ನಲ್ಲಿ ಮೆಡಿಕಲ್‌ ಕಾಲೇಜಿಗೆ ಪಾಸ್‌ ಮಾಡಿಸಿದ್ದೆ . ಟೆಂಡರ್‌ ಕೂಡ ಆಗಿತ್ತು. ಆದರೆ ಗುದ್ದಲಿ ಪೂಜೆ ಮಾಡಬೇಕು ಎನ್ನುವಷ್ಟರಲ್ಲಿ ಹಿಂಪಡೆದರು. ಆ ನೋವು ಮರೆಯಲಾಗುತ್ತಿಲ್ಲ. ಅಧಿಕಾರ ಯಾರಿಗೂ ಶಾಶ್ವತವಲ್ಲ.

Advertisement

ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮೆಡಿಕಲ್‌ ಕಾಲೇಜ್‌ ಮಂಜೂರು ಮಾಡಿಸುವುದಾಗಿ ಮಾತುಕೊಟ್ಟು ತಪ್ಪಿದ್ದಾರೆ ಎಂದರು.

ನೀವು ಅಧಿಕಾರದಲ್ಲಿ ಎಷ್ಟು ದಿನ ಇರುತ್ತೀರೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಅಧಿಕಾರ ಮತ್ತು ಸಹಾಯ ಮಾಡುವ ಸ್ಥಾನದಲ್ಲಿ ನೀವು ಇರುವುದಿಲ್ಲ. ಹಾಗಾಗಿ ಅಧಿಕಾರ ಇ¨ªಾಗ ಶಾಶ್ವತವಾಗಿ ಉಳಿಯುವ ಕೆಲಸ ಮಾಡಿ. ಮುಂದಿನ ಬಜೆಟ್‌ನಲ್ಲಿ ನಮ್ಮ ತಾಲೂಕಿಗೆ ಹಿಂಪಡೆದಿರುವ ಮೆಡಿಕಲ್‌ ಕಾಲೇಜನ್ನು ಮಂಜೂರು ಮಾಡುವಂತೆ ಮನವಿ ಮಾಡಿದ ಡಿ.ಕೆ.ಶಿವಕುಮಾರ್‌, ನಾನು ಕನಕಪುರದಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಹೊರತುಪಡಿಸಿ ಯಾರ ಜತೆಗೂ ವೇದಿಕೆ ಹಂಚಿಕೊಂಡಿಲ್ಲ. ಈ ಹಿಂದೆ ಕುಮಾರಸ್ವಾಮಿ ಅವರ ಜೊತೆ ವೇದಿಕೆ ಹಂಚಿಕೊಂಡಾಗ ರಣರಂಗವಾಗಿತ್ತು. ನಿಮ್ಮೊಂದಿಗೆ ವೇದಿಕೆ ಹಂಚಿಕೊಂಡಿದ್ದೇನೆ ಎಂದರೆ ಅದು ನಿಮ್ಮ ಮೇಲಿರುವ ವಿಶ್ವಾಸ. ನಾನು ಇಲ್ಲದಿದ್ದರೂ ಮೆಡಿಕಲ್‌ ಕಾಲೇಜು ತಾಲೂಕಿಗೆ ಬಂದೇ ಬರುತ್ತದೆ. ಮಂತ್ರಿಯಾಗಿ ನೀವು ಮಾತು ಕೊಟ್ಟಂತೆ ನಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ. ಸುರೇಶ್‌, ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next