Advertisement

ಹೈಟೆಕ್‌ ಮಟ್ಕಾ: ಚೀಟಿ ಬದಲು ಮೊಬೈಲ್‌ ಬಳಕೆ

10:47 AM Jan 14, 2019 | |

ಲಿಂಗಸುಗೂರು: ಚಿನ್ನ ಉತ್ಪಾದನೆಗೆ ಹೆಸರುವಾಸಿಯಾದ ತಾಲೂಕಿನಲ್ಲಿ ಈಗೀಗ ಮಟ್ಕಾ ಹಾವಳಿಗೆ ಜನತೆ ಹೈರಾಣಾಗಿದ್ದಾರೆ. ಮೊದಲೆಲ್ಲ ಚೀಟಿ ಬರೆದುಕೊಡುತ್ತಿದ್ದ ಮಟ್ಕಾ ಬುಕ್ಕಿಗಳು ಕೂಡ ಹೈಟೆಕ್‌ ಆಗಿದ್ದಾರೆ. ಈಗೆಲ್ಲ ಮೊಬೈಲ್‌ ಮೂಲಕವೇ ಮಟ್ಕಾ ದಂಧೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್‌ ಇಲಾಖೆ ಪಣ ತೊಟ್ಟಿದೆ.

Advertisement

ಇಡೀ ರಾಷ್ಟ್ರಕ್ಕೆ ಚಿನ್ನ ಪೂರೈಕೆ ಮಾಡುವ ತಾಲೂಕಿನಲ್ಲಿ ಸಮಾಜಘಾತುಕ ಚಟುವಟಿಕೆಯಾದ ಮಟ್ಕಾ ದಂಧೆ ಅವ್ಯಾಹತವಾಗಿ ನಡೆದುಕೊಂಡು ಬಂದಿದ್ದರಿಂದ ತಾಲೂಕು ಅಪಖ್ಯಾತಿಗೆ ಕಾರಣವಾಗಿದೆ. ಇದನ್ನು ತಡೆಗಟ್ಟಲು ಪೊಲೀಸ್‌ ಇಲಾಖೆ ಹರಸಾಹಸ ಪಡುವಂತಾಗಿದೆ. ಚೀಟಿಯಲ್ಲಿ ನಡೆಯುತ್ತಿದ್ದ ದಂಧೆ ಈಗ ಮೊಬೈಲ್‌ ಮೂಲಕ ನಡೆಯುತ್ತಿದೆ. ಹೀಗಾಗಿ ಪೊಲೀಸರಿಗೆ ದಂಧೆಕೋರರನ್ನು ಹಿಡಿಯುವುದು ಹೊಸ ಸವಾಲಾಗಿತ್ತು. ಮೊದಲು ಚೀಟಿ ಬರೆದು ಕೊಡುವಾಗ ಪೊಲೀಸರ ಕೈಗೆ ಸುಲಭವಾಗಿ ಸಿಕ್ಕಿಕೊಳ್ಳುವ ಸಂಭವವಿತ್ತು. ಈಗ ಮೊಬೈಲ್‌ನಲ್ಲಿ ನಂಬರ್‌ಗಳನ್ನು ಪಡೆದು ಪಟ್ಟಿ ತೆಗೆದುಕೊಳ್ಳಲಾಗುತ್ತಿದೆ.

ಬೀದಿಪಾಲಾದ ಕುಟಂಬಗಳು: ಮಟ್ಕಾದಿಂದ ಅನೇಕ ಕುಟಂಬಗಳು ಬೀದಿ ಪಾಲಾದರೆ, ಕೆಲ ಯುವಕರು ಹಣ ಕಳೆದುಕೊಂಡು ಊರು ಬಿಟ್ಟು ಹೋಗಿರುವ ಉದಾಹರಣೆಗಳು ಇವೆ. ಮಟ್ಕಾ ನಡೆಸುವ ಬುಕ್ಕಿಗಳ ಮೇಲೆ ಪೊಲೀಸರು ಕಡಿವಾಣ ಹಾಕದ ಪರಿಣಾಮ ಇಂದು ಮಟ್ಕಾ ಬುಕ್ಕಿಗಳು ಕೋಟ್ಯಂತರ ರೂ.ಗಳ ಒಡೆಯರಾಗಿದ್ದಾರೆ. ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸುವ ಕೆಟ್ಟ ಆಲೋಚನೆಯಿಂದಾಗಿ ಮಟ್ಕಾ ದಂಧೆಗೆ ಯುವಜನರು ಬಲಿಯಾಗಿ ತಮ್ಮ ಭವಿಷ್ಯದ ಜೀವವನ್ನು ಕತ್ತಲು ಮಾಡಿಕೊಳ್ಳಲು ಹೊರಟಿದ್ದಾರೆ. ಮಟ್ಕಾ ಜೂಜಾಟದ ಹಿಂದೆ ಬಿದ್ದು ಯಾರೂ ಶ್ರೀಮಂತರಾದ ಉದಾಹರಣೆಗಳು ಇಲ್ಲ, ಅದನ್ನು ನಡೆಸುವ ಬುಕ್ಕಿಗಳು ಮಾತ್ರ ಶ್ರೀಮಂತರಾಗಿದ್ದಾರೆ. ಈ ನಿಟ್ಟಿನಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗುವ ಯುವಕರು ಆಲೋಚಿಸಬೇಕಾಗಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಮಟ್ಕಾ ಅಡ್ಡೆ: ಪಟ್ಟಣದ ಶಾದಿ ಮಹಲ್‌ ಹತ್ತಿರ, ಗೌಳಿಪುರ, ಸೇರಿ ತಾಲೂಕಿನ ಹಟ್ಟಿ, ಇನ್ನಿತರ ಗ್ರಾಮಗಳಲ್ಲಿ ಮಟ್ಕಾ ದಂಧೆ ಹೆಚ್ಚಾಗಿ ನಡೆಯುತ್ತಿದೆ. ಇತ್ತೀಚೆ ನಡೆಸಿದ ದಾಳಿಯ ಸಂದರ್ಭದಲ್ಲಿ ಮಟ್ಕಾ ದಂಧೆಕೋರರ ಮೇಲೆ ಹಲವಾರು ಪ್ರಕರಣ ದಾಖಲು ಮಾಡಿರುವುದು ವಿಶೇಷವಾಗಿದೆ.

ರಾಜಕೀಯ ಬೆಂಬಲ: ಮಟ್ಕಾ ಬುಕ್ಕಿಗಳಿಗೆ ರಾಜಕೀಯ ಮುಖಂಡರ ಬೆಂಬಲ ಇರುವ ಕಾರಣ ಪೊಲೀಸರು ಈ ದಂಧೆ ತಡೆಯಲು ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಟ್ಕಾ ದಂಧೆ ನಡೆಸುವವರು ಪ್ರಭಾವಿ ರಾಜಕಾರಣಿಗಳ ಹಿಂಬಾಲಕರಾಗಿದ್ದಾರೆ. ಇದರಿಂದ ಬುಕ್ಕಿಗಳ ರಕ್ಷಣೆಗೆ ಟೊಂಕಕಟ್ಟಿ ನಿಂತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

Advertisement

ಕಡಿವಾಣ: ಡಿವೈಎಸ್‌ಪಿ ಎಸ್‌.ಎಚ್. ಸುಬೇದಾರ್‌ ಅವರು ಮಟ್ಕಾ ನಿಯಂತ್ರಣಕ್ಕಾಗಿ ಹಲವು ಕಠಿಣ ಕ್ರಮ ಕೈಗೊಂಡಿದ್ದರಿಂದ ಲಿಂಗಸುಗೂರು ಉಪ ವಿಭಾಗದಲ್ಲಿ 2017ರಲ್ಲಿ 134 ಮಟ್ಕಾ ಪ್ರಕರಣಗಳು, 2018ರಲ್ಲಿ 121 ಮಟ್ಕಾ ಪ್ರಕರಣಗಳು ದಾಖಲಾಗಿದೆ. ಇದಲ್ಲದೆ 2017ರಲ್ಲಿ ಇಸ್ಪೀಟ್ ಜೂಜಾಟದ 67, 2018ರಲ್ಲಿ 59 ಪ್ರಕರಣಗಳು ದಾಖಲಾಗಿವೆ. ಲಿಂಗಸುಗೂರು ಠಾಣೆಯಲ್ಲಿ 2017ರಲ್ಲಿ 26, 2018ರಲ್ಲಿ 33 ಮಟ್ಕಾ ಪ್ರಕರಣಗಳು ದಾಖಲಾಗಿವೆ. ಹಟ್ಟಿ ಠಾಣೆಯಲ್ಲಿ 2017 ಮತ್ತು 2018ರಲ್ಲಿ ತಲಾ 48 ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಹಲವರ ಮೇಲೆ ಗೂಂಡಾ ಕಾಯ್ದೆ ಹಾಗೂ ಗಡಿಪಾರು ಮಾಡಲಾಗಿದೆ. ಕೆಲವರನ್ನು ಗಡಿಪಾರು ಮಾಡಲಾಗಿತ್ತು. ಆದರೆ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ತಡೆಯಾಜ್ಞೆ ತಂದು ರಾಜಾರೋಷವಾಗಿ ಮಟ್ಕಾ ದಂಧೆ ನಡೆಸುತ್ತಾ ಊರಲ್ಲಿ ಆರಾಮವಾಗಿದ್ದಾರೆ. ಇದರಿಂದ ಪೊಲೀಸರು ಪಟ್ಟ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ. ಸರ್ಕಾರವೇ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಲು ಚಿಂತನೆ ನಡೆಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next