ರಾಜ್ಯದಲ್ಲಿ ಕಳೆದೆರಡು ವಾರಗಳಿಂದೀಚೆಗೆ ಎಪಿಎಲ್-ಬಿಪಿಎಲ್ ಕಾರ್ಡ್ ಬಗೆಗಿನ ಗೊಂದಲ ತೀವ್ರ ವಿವಾದಕ್ಕೀಡಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅನರ್ಹರಿಗೆ ನೀಡಲಾಗಿರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಅವರಿಗೆ ಎಪಿಎಲ್ ಕಾರ್ಡ್‌ಗಳನ್ನು ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಜತೆಯಲ್ಲಿ ಸರಕಾರಿ ಮಾನದಂಡಗಳನ್ನು ಉಲ್ಲಂಘಿ ಸಿ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದು ಕೊಂಡಿರುವ ಕುಟುಂಬಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿದೆ. ರಾಜ್ಯ ಸರಕಾರದ ಉದ್ದೇಶ ಸಮರ್ಥನೀಯವಾದುದಾದರೂ ದಿಢೀರನೇ ಇಂತಹ ಪ್ರಕ್ರಿಯೆ ಕೈಗೆತ್ತಿ ಕೊಂಡಿ ರುವುದು ಸರಕಾರದ ನೈಜ ಆಶಯವನ್ನೇ ಬುಡಮೇಲುಗೊಳಿಸಿದೆ. ಸರಕಾರ ಈ ವಿಷಯದಲ್ಲಿ ಸಾಕಷ್ಟು ಪರಾಮರ್ಶೆ ನಡೆಸಿ ವಿವೇಚಾನಾತ್ಮಕ ನಡೆಯನ್ನು ತನ್ನದಾಗಿಸಿಕೊಂಡಿದ್ದರೆ ಸದ್ಯ ಎದ್ದಿರುವ ಗೊಂದಲ, ಇಕ್ಕಟ್ಟು, ವಿವಾದದ ಪರಿಸ್ಥಿತಿಗಳಾವುವೂ ಎದುರಾಗುತ್ತಿರಲಿಲ್ಲ.
ರಾಜ್ಯ ಸರಕಾರದ ಈ ಏಕಾಏಕಿ ಕ್ರಮದಿಂದಾಗಿ ಸಹಸ್ರಾರು ಸಂಖ್ಯೆಯ ಅರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್‌ಗಳು ರದ್ದಾಗಿದ್ದು ಬಡವರನ್ನು ತೀವ್ರ ಆತಂಕಕ್ಕೀಡುಮಾಡಿದೆ. ಅಷ್ಟು ಮಾತ್ರವಲ್ಲದೆ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದ ದಿನದಿಂದ ಅನ್ವಯವಾಗುವಂತೆ ದಂಡ ವಿಧಿಸುತ್ತಿರುವುದು ಕೂಡ ಭಾರೀ ರಾದ್ಧಾಂತಕ್ಕೆ ಕಾರಣವಾಗಿದೆ. ಈ ವಿಷಯವನ್ನು ಮುಂದಿಟ್ಟು ಪಕ್ಷಗಳು ರಾಜಕೀಯ ಕೆಸರೆರಚಾಟದಲ್ಲಿ ನಿರತವಾಗಿದ್ದರೆ, ಮುಖ್ಯಮಂತ್ರಿ ಹಾಗೂ ಮತ್ತವರ ಸಂಪುಟದ ಹಲವು ಸಚಿವರು ದಿನಕ್ಕೊಂದು ಹೇಳಿಕೆಯನ್ನು ನೀಡುವ ಮೂಲಕ ವಿವಾದವನ್ನು ಮತ್ತಷ್ಟು ಗೋಜಲನ್ನಾಗಿಸುತ್ತಿದ್ದಾರೆ.
ಇನ್ನು ಬಿಪಿಎಲ್ ಕಾರ್ಡ್ ರದ್ದುಗೊಂಡು ಸರಕಾರದಿಂದ ಉಚಿತ ಯಾ ಸಬ್ಸಿಡಿ ಬೆಲೆಯಲ್ಲಿ ಲಭಿಸುತ್ತಿದ್ದ ಪಡಿತರಕ್ಕೂ ಕತ್ತರಿ ಬಿದ್ದಿದ್ದು ಬಡವರು ಸರಕಾರಕ್ಕೆ ಹಿಡಿಶಾಪ ಹಾಕತೊಡಗಿದ್ದಾರೆ. ಈಗ ಮಹಿಳೆಯರೇ ಬೀದಿಗಿಳಿದು ಸರಕಾರದ ವಿರುದ್ಧ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಎಪಿಎಲ್-ಬಿಪಿಎಲ್ ಕಾರ್ಡ್ ಫಲಾನುಭವಿಗಳ ಗುರುತಿಸುವಿಕೆಯ ಮಾನ ದಂಡವೇ ಪ್ರಶ್ನಾರ್ಹವಾಗಿದ್ದು ಈ ವಿಷಯವಾಗಿ ಕಳೆದ ಕೆಲವು ದಶಕಗಳಿಂದ ಚರ್ಚೆ ಗ ಳು ನಡೆಯುತ್ತಲೇ ಬಂದಿವೆ. ವಿವಿಧ ಸರಕಾರಗಳ ಅವಧಿಯಲ್ಲಿ ಈ ಮಾನ ದಂಡವನ್ನು ಪರಿಷ್ಕರಿಸುತ್ತ ಬರಲಾಗಿದ್ದರೂ ಯಾವೊಂದು ಮಾನದಂಡವೂ ಆಯಾಯ ಕಾಲದ ವಾಸ್ತವ ಪರಿಸ್ಥಿತಿಗನುಗುಣವಾಗಿರದೇ ಬರೀ ಅಂಕಿಅಂಶಗಳನ್ನು ಆಧರಿಸಿ ನಿಗದಿಪಡಿಸುತ್ತ ಬರಲಾಗಿದೆ. ಹೀಗಾಗಿ ಬಿಪಿಎಲ್ ಕಾರ್ಡ್ ಫಲಾನು ಭವಿಯಾಗಲು ಯೋಗ್ಯವಾದ ಕುಟುಂಬಗಳೂ ಅದರಿಂದ ವಂಚಿತವಾಗು ವಂತಾಗಿದೆ. ಇನ್ನು ಸರಕಾರದ ಈ ಬೇಕಾಬಿಟ್ಟಿ ಮಾನದಂಡದ ದುರ್ಲಾಭ ಪಡೆದು ಲಕ್ಷಾಂತರ ಸಂಖ್ಯೆಯಲ್ಲಿ ಅನರ್ಹ ಕುಟುಂಬಗಳು ಕೂಡ ಬಿಪಿಎಲ್ ಕಾರ್ಡ್‌ನ ಫಲಾ ನುಭವಿಗಳಾಗಿ ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯು ತ್ತಿರುವುದಂತೂ ಸುಳ್ಳಲ್ಲ. ಇದರ ಹಿಂದೆ ರಾಜಕೀಯ ಹಿತಾಸಕ್ತಿ, ಅಧಿಕಾರಶಾಹಿಯ ಭ್ರಷ್ಟತೆ, ವಶೀಲಿಬಾಜಿಗಳು ಕೆಲಸ ಮಾಡಿವೆ ಎಂಬುದರಲ್ಲಿ ಎರಡು ಮಾತಿಲ್ಲ.
ರಾಜ್ಯ ಸರಕಾರ ಸದ್ಯ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ಪಡಿತರ ಚೀಟಿ ವ್ಯವಸ್ಥೆಯಲ್ಲಿನ ಎಲ್ಲ ಅಪಸವ್ಯಗಳನ್ನು ಮೊದಲು ನಿವಾರಿಸಬೇಕು. ಇಂದಿನ ಕಾಲಕ್ಕನುಗುಣವಾಗಿ ಕುಟುಂಬಗಳ ಆದಾಯ ಮತ್ತು ಜೀವನವೆಚ್ಚ ಇವೆರಡನ್ನೂ ಗಣನೆಗೆ ತೆಗೆದುಕೊಂಡು ಪಡಿತರ ಚೀಟಿ ನೀಡಿಕೆಯ ಮಾನದಂಡವನ್ನು ಆಮೂ ಲಾಗ್ರ ವಾಗಿ ಪರಿಷ್ಕರಿಸಬೇಕು. ಈ ಮಾನದಂಡವನ್ನು ನಿರ್ದಿಷ್ಟ ಅವಧಿಗೊಮ್ಮೆ ಕಡ್ಡಾಯ ವಾಗಿ ಪರಿಷ್ಕರಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಪಡಿತರ ಚೀಟಿ ನೀಡಿಕೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕ, ನ್ಯಾಯಯುತವಾಗಿ ನಡೆಸದೇ ಹೋದಲ್ಲಿ ಸರಕಾರ ಜಾರಿಗೆ ತರುವ ಯಾವ ಸುಧಾರಣ ವ್ಯವಸ್ಥೆಯೂ ನಿರೀಕ್ಷಿತ ಫಲ ತಂದುಕೊಡಲಾರದು. ಹೀಗಾಗಿ ಸರಕಾರ ಬರಿಯ ಹೇಳಿಕೆ, ಭರವಸೆಗಳಿಗೆ ಸೀಮಿತವಾಗದೆ ಎಪಿಎಲ್-ಬಿಪಿಎಲ್ ಕಾರ್ಡ್ ಹಂಚಿಕೆ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಈಗ ಈ ವಿಷಯವಾಗಿ ಎದ್ದಿರುವ ಗೊಂದಲದಿಂದಲಾದರೂ ಸರಕಾರ ಎಚ್ಚೆತ್ತುಕೊಂಡು ಇತ್ತ ಲಕ್ಷ್ಯ ಹರಿಸಬೇಕು.