ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಬ್ಯಾಟರ್ ಹೆನ್ರಿ ನಿಕೋಲ್ಸ್ ವಿಚಿತ್ರ ರೀತಿಯಲ್ಲಿ ಔಟಾಗಿದ್ದಾರೆ. ಇದರ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
56ನೇ ಓವರ್ ನಲ್ಲಿ ಜ್ಯಾಕ್ ಲೀಚ್ ಎಸೆತವನ್ನು ಹೆನ್ರಿ ನಿಕೋಲ್ಸ್ ನೇರವಾಗಿ ಹೊಡೆದರು. ನಿಕೋಲ್ಸ್ ಬಾರಿಸಿದ ಚೆಂಡು ನೇರ ನಾನ್ ಸ್ಟ್ರೈಕರ್ ನಲ್ಲಿದ್ದ ಡ್ಯಾರೆಲ್ ಮಿಚೆಲ್ ಬ್ಯಾಟಿಗೆ ಬಡಿಯಿತು. ಅಲ್ಲಿಂದ ದಿಕ್ಕು ಬದಲಿಸಿದ ಚೆಂಡು ಮಿಡ್ ಆಫ್ ನಲ್ಲಿ ಅಲೆಕ್ಸ್ ಲೀಸ್ ಕೈ ಸೇರಿತು. ಈ ರೀತಿ ವಿಚಿತ್ರವಾಗಿ ಔಟಾದ ನಿಕೋಲ್ಸ್ ಪೆಚ್ಚಮೋರೆ ಹಾಕಿಕೊಂಡು ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಈ ವೇಳೆ ನಿಕೋಲ್ಸ್ 99 ಎಸೆತಗಳಲ್ಲಿ 19 ರನ್ ಗಳಿಸಿದ್ದರು.
ಪಂದ್ಯದ ಬಳಿಕ ಮಾತನಾಡಿದ ಬೌಲರ್ ಜ್ಯಾಕ್ ಲೀಚ್, ನನಗೆ ಇದು ಸರಿಯೇ ಎನ್ನುವುದರ ಕುರಿತು ಗೊತ್ತಿಲ್ಲ. ಆದರೆ ವೈಯಕ್ತಿಕವಾಗಿ ನನಗೆ ಆ ವಿಕೆಟ್ ಇಷ್ಟವಾಗಲಿಲ್ಲ. ಆದರೆ ನಾನು ನಿಕೋಲ್ಸ್ ಗೆ ಸಾಕಷ್ಟು ಚೆನ್ನಾಗಿ ಬೌಲ್ ಮಾಡಿದ್ದೇನೆ ಎಂದು ನನಗೆ ಅನಿಸಿತು. ಇದು ಒಂದು ಸಿಲ್ಲಿ ಆಟ, ಅಲ್ಲವೇ? ಈ ಹಿಂದೆ ಇಂತಹ ಪ್ರಸಂಗ ಯಾವುದನ್ನೂ ನೋಡಿಲ್ಲ. ಇದು ನನ್ನ ಅದೃಷ್ಟ, ಮತ್ತು ನಿಕೋಲ್ಸ್ ದುರದೃಷ್ಟ” ಎಂದರು.
ಇದನ್ನೂ ಓದಿ:‘ಸ್ಪೂಕಿ’ ಟೀಸರ್ ನಲ್ಲಿ ಕಾಲೇಜ್ ಸ್ಟೋರಿ!: ಹಾರರ್-ಥ್ರಿಲ್ಲರ್ ಚಿತ್ರ ತೆರೆಗೆ ಸಿದ್ಧ
ಔಟ್ ತೀರ್ಪಿನ ಕುರಿತ ಚರ್ಚೆಯ ಬಳಿಕ ಕ್ರಿಕೆಟ್ ನಿಯಮಗಳನ್ನು ರೂಪಿಸುವ ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದೆ. ದುರದೃಷ್ಟಕರ? ಹೌದು. ಆದರೆ ಸಂಪೂರ್ಣವಾಗಿ ಕಾನೂನಿನಡಿಯಲ್ಲಿದೆ. 33.2.2.3 ನೀತಿಯು ಫೀಲ್ಡರ್ ಚೆಂಡನ್ನು ವಿಕೆಟ್, ಅಂಪೈರ್, ಇನ್ನೊಬ್ಬ ಫೀಲ್ಡರ್, ರನ್ನರ್ ಅಥವಾ ಇತರ ಬ್ಯಾಟರ್ ಅನ್ನು ಮುಟ್ಟಿದ ನಂತರ ಅದನ್ನು ಹಿಡಿದರೆ ಅದು ಔಟ್ ಆಗುತ್ತದೆ ಎಂದು ಹೇಳುತ್ತದೆ ಎಂದು ಟ್ವೀಟ್ ಮಾಡಿದೆ.