ವಡೋದರಾ: ಭಾರತದ ಪ್ರವಾಸ ಕೈಗೊಂಡಿರುವ ವೆಸ್ಟ್ ಇಂಡೀಸ್ ವನಿತೆಯರ ವಿರುದ್ದದ ಏಕದಿನ ಸರಣಿಯನ್ನು ಭಾರತೀಯರ ವನಿತೆಯರ ತಂಡವು 3-0 ಅಂತರದಿಂದ ಗೆದ್ದುಕೊಂಡಿದೆ. ಶುಕ್ರವಾರ (ಡಿ.27) ವಡೋದರಾದಲ್ಲಿ ನಡೆದ ಮೂರನೇ ಪಂದ್ಯವನ್ನು ಗೆದ್ದ ಹರ್ಮನ್ ಪಡೆ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿತು.
ವಡೋದರಾದ ಕೋಟಂಬಿ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ 38.5 ಓವರ್ ಗಳಲ್ಲಿ 162 ರನ್ ಗೆ ಆಲೌಟಾಯಿತು. ಗುರಿ ಬೆನ್ನತ್ತಿದ ಭಾರತ ತಂಡವು 28.2 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ವನಿತೆಯರಿಗೆ ಮೊದಲ ಓವರ್ ನಲ್ಲಿಯೇ ರೇಣುಕಾ ಸಿಂಗ್ ಕಾಡಿದರು. ಮೊದಲ ಓವರ್ ಮುಗಿಯವ ಒಳಗೆ ಖ್ವೀನಾ ಜೋಸೆಫ್ ಮತ್ತು ಹೀಲಿ ಮ್ಯಾಥ್ಯೂಸ್ ಔಟಾದರು. ಶೆಮೈನ್ ಕ್ಯಾಂಪ್‌ಬೆಲ್ 46 ರನ್ ಗಳಿಸಿದರೆ, ಶಿನೆಲ್ ಹೆನ್ರಿ 61 ರನ್ ಮಾಡಿದರು. ಇವರಿಬ್ಬರು ನಾಲ್ಕನೇ ವಿಕೆಟ್ ಗೆ 91 ರನ್ ಜೊತೆಯಾಟವಾಡಿದರು.
ಆದರೆ ಬಳಿಕ ದೀಪ್ತಿ ಶರ್ಮಾ ದಾಳಿಗೆ ಸಿಲುಕಿದ ವಿಂಡೀಸ್ ಸತತ ವಿಕೆಟ್ ಕಳೆದುಕೊಂಡಿತು. ದೀಪ್ರಿ ಶರ್ಮಾ ಆರು ವಿಕೆಟ್ ಕಿತ್ತರೆ, ರೇಣುಕಾ ಸಿಂಗ್ ಥಾಕೂರ್ ನಾಲ್ಕು ವಿಕೆಟ್ ಪಡೆದು ಮಿಂಚಿದರು. ವಿಂಡೀಸ್ ತಂಡವು 162 ರನ್ ಗೆ ಆಲೌಟಾಯಿತು.
ಗುರಿ ಬೆನ್ನತ್ತಿದ ಭಾರತ ವನಿತೆಯರು ಆರಂಭದಲ್ಲಿ ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ಹರ್ಮನ್ ಪ್ರೀತ್ 32 ರನ್, ಜೆಮಿಮಾ ರೋಡ್ರಿಗಸ್ 29 ರನ್ ಮಾಡಿದರು. ಕೊನೆಗೆ ದೀಪ್ತಿ ಶರ್ಮಾ ಅಜೇಯ 39 ರನ್ ಮತ್ತು ರಿಚಾ ಘೋಷ್ ಅಜೇಯ 23 ರನ್ ಮಾಡಿದರು. ವಿಂಡೀಸ್ ಬೌಲರ್ ಗಳು 19 ವೈಡ್ ಹಾಕಿ ದುಬಾರಿಯಾದರು.
ದೀಪ್ತಿ ಶರ್ಮಾ ಅವರು ಪಂದ್ಯಶೇಷ್ಠ ಪ್ರಶಸ್ತಿ ಪಡೆದರೆ, ಬೌಲರ್ ರೇಣುಕಾ ಸಿಂಗ್ ಥಾಕೂರ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.