Advertisement

ಹಿಮೋಫಿಲಿಯ ತಡೆಗೆ ಸಂಶೋಧನೆಗಳಾಗಲಿ

09:11 PM Apr 20, 2019 | Lakshmi GovindaRaju |

ಮೈಸೂರು: ವೈದ್ಯರು, ವಿಜ್ಞಾನಿಗಳಿಗೆ ಹಿಮೋಫಿಲಿಯ ಕಾಯಿಲೆ ಸವಾಲಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕಿದೆ ಎಂದು ಶಾಸಕ ಎಸ್‌.ಎ.ರಾಮದಾಸ್‌ ಹೇಳಿದರು.

Advertisement

ನಗರದ ಜೆ.ಕೆ.ಮೈದಾನದಲ್ಲಿರುವ ಮೈಸೂರು ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಹಿಮೋಫಿಲಿಯ ಸೊಸೈಟಿ ಮೈಸೂರು ಚಾಪ್ಟರ್‌, ಕೆ.ಆರ್‌.ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ್ದ “ವಿಶ್ವ ಹಿಮೋಫಿಲಿಯ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅನುವಂಶಿಯ ಕಾಯಿಲೆ: ಗಾಯವಾದಾಗ ರಕ್ತ ಹೆಪ್ಪುಗಟ್ಟದೆ, ನಂತರ ಅದು ರಕ್ತಸ್ರಾವವಾಗುವುದೇ ಹಿಮೋಫಿಲಿಯ ಕಾಯಿಲೆ. ದೇಹಕ್ಕೆ ಪೆಟ್ಟಾದಾಗ ಕೇವಲ ದೇಹದ ಹೊರಗೆ ಮಾತ್ರವಲ್ಲದೇ, ದೇಹದ ಒಳಗಡೆಯೂ ರಕ್ತಸ್ರಾವ ಉಂಟಾಗುತ್ತದೆ. ಹಿಮೋಫಿಲಿಯವು ಅನುವಂಶಿಯ ಕಾಯಿಲೆಯಾಗಿದ್ದು, ಔಷಧಗಳಿಗಾಗಿ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ ಎಂದು ಹೇಳಿದರು.

ಯೋಗಕ್ಕೆ ವಿಶೇಷ ಶಕ್ತಿ: ಈ ಕಾಯಿಲೆಯು ಪುರುಷರಲ್ಲಿಯೇ ಜಾಸ್ತಿ ಕಂಡು ಬರುತ್ತಿದ್ದು, ದೇಹದೊಳಗೆ ರಕ್ತಸ್ರಾವವಾದಾಗ ದೇಹದ ಮೂಳೆಗಳು ಸಂಧಿಸಿದ ಭಾಗಗಳಲ್ಲಿ ಊದಿಕೊಳ್ಳುವುದಲ್ಲದೇ, ನೋವು ಕಾಣಿಸಿಕೊಳ್ಳುತ್ತದೆ.

ಜೀನ್ಸ್‌ ಸಮಸ್ಯೆಯಿಂದ ಈ ರೀತಿಯ ಕಾಯಿಲೆಗೆ ತುತ್ತಾಗುತ್ತಾರೆ. ಅಗ್ನಿಹೋತ್ರ ಹಾಗೂ ಯೋಗಕ್ಕೆ ವಿಶೇಷ ಶಕ್ತಿಯಿದೆ. ಅವುಗಳನ್ನು ನಿರಂತರವಾಗಿ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆರೋಗ್ಯವಂತರಾಗಿ ಜೀವನ ನಡೆಸಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

Advertisement

ರೋಗ ನಿರೋಧಕ ಶಕ್ತಿ: ವೈದ್ಯಕೀಯ ಸಚಿವನಾಗಿದ್ದ ಸಂದರ್ಭ ಈ ಕಾಯಿಲೆಯ ಬಗ್ಗೆ ತಿಳಿದು 2 ಕೋಟಿ ರೂ. ವೆಚ್ಚದಲ್ಲಿ ಹಿಮೋಫಿಲಿಯ ಸೊಸೈಟಿ ತೆರೆದು ಹಿಮೋಪಿಲಿಯ ಕಾಯಿಲೆಗೆ ತುತ್ತಾದ ಮಕ್ಕಳು,ವಯಸ್ಕರಿಗೆ ಸೌಲಭ್ಯ ಒದಗಿಸಲಾಯಿತು.

ಆ ನಂತರ ಸರಕಾರ ನಿರಂತರವಾಗಿ ಹಿಮೋಫಿಲಿಯಾ ತುತ್ತಾದವರಿಗೆ ಸೌಲಭ್ಯ ಒದಗಿಸುತ್ತಿದೆ. ವೈದ್ಯರು ಔಷಧೋಪಚರ ನೀಡುತ್ತಾರೆ. ಆದರೆ, ಪೋಷಕರು ರೋಗ ನಿರೋಧಕ ಶಕ್ತಿಗಳನ್ನು ತುಂಬುವಂತಹ ಶಕ್ತಿಯನ್ನು ಮಾಡಬೇಕಿದೆ ಎಂದರು.

ಹಿಮೋಫಿಲಿಯ ಕಾಯಿಲೆಗೆ ತುತ್ತಾದ ಮಕ್ಕಳನ್ನು ಕೇಂದ್ರದ ಬಾಲ ಆರೋಗ್ಯ ಯೋಜನೆಯ ಸೌಲಭ್ಯ ಒದಗಿಸುವಂತೆ ಪ್ರಧಾನ ಮಂತ್ರಿಗಳನ್ನು ಮನವಿ ಮಾಡುತ್ತೇನೆ. ಆಯುಷ್ಮಾನ್‌ ಭಾರತ್‌ ಆರೋಗ್ಯ ಯೋಜನೆಯಲ್ಲಿ ಐದು ಲಕ್ಷ ರೂ. ಸೌಲಭ್ಯವಿದ್ದು,

ಇದರಲ್ಲಿ ಮಕ್ಕಳಿಗಾಗಿಯೇ ಇರುವ ವಿಶೇಷ ಯೋಜನೆಯೊಳಗೆ ಹಿಮೋಫಿಲಿಯಾ ಮಕ್ಕಳಿಗೂ ಹೆಚ್ಚಿನ ಸವಲತ್ತು ಒದಗಿಸುವ ಕಾರ್ಯವಾಗಬೇಕು. ಮಕ್ಕಳಿಗೆ ವಿಶೇಷ ಸ್ಕಾಲರ್‌ಶಿಪ್‌ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.

ಉಚಿತವಾಗಿ ಔಷಧ: ಕೆ.ಆರ್‌.ಆಸ್ಪತ್ರೆ ರಕ್ತ ನಿಧಿ ಮುಖ್ಯಸ್ಥ ಮಂಜುನಾಥ್‌ ಮಾತನಾಡಿ, ರಾಜ್ಯದಲ್ಲಿ 3640 ಮಂದಿ ಹಿಮೋಫಿಲಿಯಾ ಕಾಯಿಲೆಗೆ ತುತ್ತಾಗಿದ್ದಾರೆ. 2007ರಿಂದ ಹಿಮೋಫಿಲಿಯಾ ಕಾಯಿಲೆ ಗುರುತಿಸಲಾಗಿದ್ದು, ಈ ಕಾಯಿಲೆಗೆ ತುತ್ತಾದವರಿಗೆ ಸಾಧ್ಯವಾದಷ್ಟು ಉಚಿತವಾಗಿ ಔಷಧಗಳನ್ನು ಒದಗಿಸಲಾಗುತ್ತಿದೆ.

ಕೆ.ಆರ್‌.ಆಸ್ಪತ್ರೆಯಲ್ಲಿ ಹಿಮೋಫಿಲಿಯಕ್ಕೆ ತುತ್ತಾದ 30 ಮಂದಿ ಮಕ್ಕಳು, 120 ಮಂದಿ ವಯಸ್ಕರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಕೆ.ಆರ್‌.ಆಸ್ಪತ್ರೆ ಅಧೀಕ್ಷಕ ನಂಜುಂಡಸ್ವಾಮಿ, ಅಖೀಲ ಭಾರತ್‌ ಹಿಮೋಫಿಲಿಯ ಫೆಡರೇಷ‌ನ್‌ ಅಧ್ಯಕ್ಷ ವಿಕಾಸ್‌ ಗೋಯಲ್‌, ಕೆ.ಆರ್‌.ಆಸ್ಪತ್ರೆ ನಿವೃತ್ತ ಅಧೀಕ್ಷಕ ಡಾ. ಶ್ರೀನಿವಾಸ್‌, ಹೀಮೋಫಿಲಿಯ ಸೊಸೈಟಿ ಮೈಸೂರು ಚಾಪ್ಟರ್‌ ಅಧ್ಯಕ್ಷ ಡಾ.ಎಸ್‌.ಕೆ.ಮಿಥಲ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next