Advertisement

ಪಾಕ್‌ ನಂಟು ಹೊಂದಿದ್ದವರಿಗೆ ಪೇದೆ ನೆರವು

12:57 PM May 31, 2017 | Team Udayavani |

ಬೆಂಗಳೂರು: ಪಾಕ್‌ ಪ್ರಜೆಗಳಿಗೆ ನೆರವು ನೀಡಿದ ಆರೋಪದ ಮೇಲೆ ಕುಮಾರಸ್ವಾಮಿ ಲೇಔಟ್‌ ಠಾಣೆ ಪೇದೆ ಇರ್ಫಾನ್‌ ಮತ್ತು ಜ್ಯೂಸ್‌ ಅಂಗಡಿಯಲ್ಲಿ ಕೆಲಸ ಮಾಡುವ ರೆಹಮಾನ್‌ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈಗ ಪೊಲೀಸರು ವಶಕ್ಕೆ ಪಡೆದಿರುವ ಈ ಇಬ್ಬರೂ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಶಿಹಾಬ್‌ನ ಸ್ನೇಹಿತರು ಎನ್ನಲಾಗಿದೆ. 

Advertisement

ಜ್ಯೂಸ್‌ ಅಂಗಡಿಯಲ್ಲಿ ಕೆಲಸ ಮಾಡುವ ರೆಹಮಾನ್‌ ಬಾಡಿಗೆ ಮನೆ ಕೊಡಿಸುವ ಮಧ್ಯವರ್ತಿಯಾಗಿಯೂ ಕೆಲಸ ಮಾಡುತ್ತಿದ್ದ. ದುಬೈನಿಂದ ಬಂದ ಶಿಹಾಬ್‌ಗ ಕುಮಾರಸ್ವಾಮಿ ಲೇಔಟ್‌ನಲ್ಲಿ ಬಾಡಿಗೆ ಮನೆ ಮಾಡಿಕೊಳ್ಳಲು ರೆಹಮಾನ್‌ ನೆರವಾಗಿದ್ದ. ಅಲ್ಲದೇ ಒಂದೆರೆಡು ಬಾರಿ ಆರ್ಥಿಕ ನೆರವನ್ನೂ ನೀಡಿದ್ದ. ಇದರೊಂದಿಗೆ ಶಿಹಾಬ್‌ಗ ಸ್ವಿಫ್ಟ್ ಕಾರು ಕೊಡಿಸಿದ್ದ ಕುಮಾರಸ್ವಾಮಿ ಲೇಔಟ್‌ ಠಾಣೆ ಪೇದೆ ಇರ್ಫಾನ್‌ನನ್ನು ಕೂಡ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಾರಿನ ದಾಖಲೆ ಸರಿಯಿಲ್ಲ: ಕುಮಾರಸ್ವಾಮಿ ಲೇಔಟ್‌ ಠಾಣೆ ಪೇದೆ ಇರ್ಫಾನ್‌ ತನ್ನ ಪರಿಚಿತ ಹರಿಪ್ರಸಾದ್‌ ಎಂಬುವವರಿಗೆ ಸೇರಿದ್ದ ಸ್ವಿಫ್ಟ್ ಕಾರನ್ನು 20 ಸಾವಿರ ರೂ.ಗೆ ಶಿಹಾಬ್‌ಗ  ಕೊಡಿಸಿದ್ದ. ಇದರ ದಾಖಲೆಗಳನ್ನು ಪರಿಶೀಲಿಸಿದಾಗ ಕಾರಿನ ನೊಂದಣಿ ದಾಖಲೆಯಲ್ಲಿರುವ ಎಂಜಿನ್‌ ಸಂಖ್ಯೆಗೂ ಕಾರಿನ ಎಂಜಿನ್‌ ಮೇಲಿರುವ ಸಂಖ್ಯೆಗೂ ತಾಳೆಯಾಗುತ್ತಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಕಾರು ತಮಿಳುನಾಡು ನೊಂದಣಿ ಹೊಂದಿದೆ. ಬಹುಶಃ ಅಲ್ಲಿಂದ ಅದನ್ನು ಕದ್ದು ತಂದಿರುವ ಸಾಧ್ಯತೆಗಳಿವೆ ಎಂದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಸಂಬಂಧ ಪೇದೆ ಇರ್ಫಾನ್‌ನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ “ರಾ’: ಕೇಂದ್ರದ ತನಿಖಾ ಸಂಸ್ಥೆಗಳಾದ ಐಬಿ, ರಾಜ್ಯ ಗುಪ್ತಚರ, ರಾ, ಎಸ್‌ಪಿಬಿ, ಆಂತರಿಕ ಭದ್ರತಾ ದಳ, ಮಿಲಿಟರಿ ಗುಪ್ತಚರಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆರೋಪಿಗಳು ಬೆಂಗಳೂರಿಗೆ ಬಂದ ಬಳಿಕ ಪಾಕಿಸ್ತಾನದ ಕೆಲ ವ್ಯಕ್ತಿಗಳ ಜತೆ ಸುಮಾರು 25ಕ್ಕೂ ಅಧಿಕ ಬಾರಿ ಫೋನ್‌ ಕರೆ ಮಾಡಿ ಮಾತನಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ಸಂಭಾಷಣೆ ನಡೆಸಿದ ವ್ಯಕ್ತಿಗಳ ವಿಳಾಸ ಪಡೆದಿರುವ “ರಾ’ ಅಧಿಕಾರಿಗಳು ಪಾಕಿಸ್ತಾನದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಾಹಿತಿ ಕೊಟ್ಟಿದ್ದು ಮಾಂಸದಂಗಡಿಯವ: ಪಾಕಿಸ್ತಾನ ಮೂಲದ ಮೂವರು ಸೇರಿದಂತೆ ನಾಲ್ವರು ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಬಗ್ಗೆ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

Advertisement

ಕೇರಳ ಮೂಲದ ಮೊಹಮದ್‌ ಶಿಹಾಬ್‌ 8 ತಿಂಗಳ ಹಿಂದೆ ಪಾಕಿಸ್ತಾನ ಮೂಲದ ತನ್ನ ಪತ್ನಿ ನಜ್ಮಾ ಸೇರಿದಂತೆ ಮೂವರನ್ನು ನಗರಕ್ಕೆ ಕರೆ ತಂದಿದ್ದ. ಇವರು ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದರು. ಆಗಾಗ್ಗೆ ಮನೆಯಿಂದ ಹೊರಬರುತ್ತಿದ್ದ ನಾಲ್ವರು ಕೆಲವೇ ಹೊತ್ತು ಹೊರಗಡೆ ಕಳೆಯುತ್ತಿದ್ದರು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಆ ವ್ಯಕ್ತಿ ಸಿಸಿಬಿ ಡಿಸಿಪಿ ಆನಂದ್‌ ಕುಮಾರ್‌ಗೆ ಮಾಹಿತಿ ನೀಡಿದ್ದರು. ಕೂಡಲೇ ತಮ್ಮ ಇಬ್ಬರು ಸಿಬ್ಬಂದಿ ಕಳುಹಿಸಿ ಪರಿಶೀಲನೆ ನಡೆಸಿದ್ದರು. ನಂತರ ಇನ್‌ಸ್ಪೆಕ್ಟರ್‌ವೊಬ್ಬರನ್ನು ಕಳುಹಿಸಿ ಮಾಹಿತಿ ಖಚಿತ ಪಡಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಾಳಿ ವೇಳೆ ಮೊಹಮದ್‌ ಶಿಹಾಬ್‌ ಕೇರಳ ಮೂಲದವನೆಂದು ಹೇಳಿದ್ದು, ಈತನ ಪತ್ನಿ  ಪಾಕಿಸ್ತಾನದ ನಜ್ಮಾ, ಈಕೆಯ ಸಂಬಂಧಿ ಮೊಹಮ್ಮದ್‌ ಖಾಸಿಫ್ ಹಾಗೂ ಈತನ ಪತ್ನಿ ಝೈನಬ್‌ ರಾಜಸ್ಥಾನ ಮೂಲದವರು ಎಂದು ಹೇಳಿಕೊಂಡಿದ್ದರು. ಅನುಮಾನಗೊಂಡ ಪೊಲೀಸರು, ರಾಜಸ್ಥಾನದ ವ್ಯಕ್ತಿಯನ್ನು ಕರೆಸಿ ಆರೋಪಿಗಳ ಜತೆ ಮಾತನಾಡಿಸಿದಾಗ ಇವರೆಲ್ಲರೂ ರಾಜಸ್ಥಾನದವರಲ್ಲ ಪಾಕಿಸ್ತಾನದವರು ಎಂದು ತಿಳಿದು ಬಂದಿದೆ.

ಈ ವರೆಗೆ ಕುಕೃತ್ಯ ಬಯಲಾಗಿಲ್ಲ: ಕೇಂದ್ರ ತನಿಖಾ ತಂಡಗಳ ಮೂಲಗಳ ಪ್ರಕಾರ ಬಂಧಿತರ ವಿಚಾರಣೆ ವೇಳೆ ಯಾವುದೇ ವಿಧ್ವಂಸಕ ಕೃತ್ಯದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ, ಎರಡು ಪ್ರಮುಖ ಅನುಮಾನಗಳು ಪೊಲೀಸರನ್ನು ಕಾಡುತ್ತಿವೆ. ಉಗ್ರ ಸಂಘಟನೆಗಳು ಇವರನ್ನು ಗಡಿ ದಾಟಿಸಿ ಕಳುಹಿಸಿರುವ ಶಂಕೆಯಿದೆ. ಮತ್ತೂಂದು, ಕೆಲ ವರ್ಷಗಳು ನಗರದಲ್ಲಿ ಯಾವುದೇ ಅಡೆತಡೆಗಳಿಲ್ಲದೇ ನೆಲೆಸಿದ ಬಳಿಕ ಇವರನ್ನು ಸ್ಲಿಪರ್‌ಸೆಲ್‌ಗ‌ಳಾಗಿ ಬಳಸಿಕೊಳ್ಳವ ಸಾಧ್ಯತೆಗಳಿರುವ ಬಗ್ಗೆ ಅನುಮಾನ ಮೂಡಿದೆ. ಹೀಗಾಗಿ ಪ್ರಕರಣ ಸಂಬಂಧ ಇದುವರೆಗೂ 100ಕ್ಕೂ  ಅಧಿಕ ಮಂದಿಯ ವಿಚಾರಣೆ ನಡೆಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಕತಾರ್‌ನಲ್ಲಿ ಸಚಿವರ ಕಾರು ಚಾಲಕರಾಗಿದ್ದ ಶಿಹಾಬ್‌ ತಂದೆ 
ಶಿಹಾಬ್‌ನ ತಂದೆ ಕತಾರ್‌ನಲ್ಲಿ ಸಚಿವ ಅಲ್‌ ಮುಬಾರಕ್‌ ಅವರ ಕಾರು ಚಾಲಕರಾಗಿದ್ದರು. ಶಿಹಾಬ್‌ನನ್ನು ಕತಾರ್‌ಗೆ ಕರೆಸಿಕೊಂಡಿದ್ದ ಅವರು, ಪಾಸ್‌ ಪೋರ್ಟ್‌ ಸಂಸ್ಥೆಯೊಂದರಲ್ಲಿ ಕೆಲಸ ಕೊಡಿಸಿದ್ದರು. ಅಲ್ಲಿಯೇ ಕೆಲಸ ಮಾಡುತ್ತಿದ್ದ ಶಿಹಾಬ್‌, ಪಾಕ್‌ ಮೂಲದ ನಜ್ಮಾಳನ್ನು ಪ್ರೀತಿಸಿ ವಿವಾಹವಾಗಿದ್ದ. ಇದನ್ನು ವಿರೋಧಿಸಿದ ನಜ್ಮಾಳ ಸಹೋದರರು, ಆಕೆಯನ್ನು ಪಾಕಿಸ್ತಾನಕ್ಕೆ ಕರೆದೊಯ್ದಿದ್ದರು.

ಬಳಿಕ ಅಲ್ಲಿಂದ ಭಾರತಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದ ಶಿಹಾಬ್‌, ಪಾಸ್‌ ಪೋರ್ಟ್‌ ವೀಸಾ ಮಾಡಿಸಿಕೊಳ್ಳಲು ನಜ್ಮಾಳ ಖಾತೆಗೆ ವೆಸ್ಟ್ರನ್‌ ಯೂನಿಯನ್‌ ಮನಿ ಟ್ರಾನ್ಸ್‌ಫ‌ರ್‌ ಮೂಲಕ ಹಣ ಹಾಕಿದ್ದ. ಕೊನೆಗೆ ಪಾಕ್‌ ಮತ್ತು ಕತಾರ್‌ನ ಗಡಿದಾಟಿ ಬೆಂಗಳೂರಿಗೆ ಬಂದು ಕೆಲ ದಿನಗಳ ಕಾಲ ಲಕ್ಕಸಂದ್ರದ ಹೋಟೆಲ್‌ವೊಂದರಲ್ಲಿ ತಂಗಿದ್ದರು. ಬಳಿಕ ಕೆ.ಎಸ್‌. ಲೇಔಟ್‌ನಲ್ಲಿ 60 ಸಾವಿರ ಮುಂಗಡ ಹಣ ಮತ್ತು 10 ಸಾವಿರ ಬಾಡಿಗೆ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next