Advertisement
ಅಂಗೈಯಲ್ಲೇ ವಿಶ್ವವನ್ನು ಅಡಗಿಸಿಡಬಹುದಾದ ಡಿಜಿಟಲ್ ಯುಗದಲ್ಲಿದ್ದೇವೆ ನಾವು. ಜಗತ್ತಿನ ಯಾವುದೇ ಮೂಲೆಯಲ್ಲಿರುವವರ ಮುಖ ನೋಡಿ ಮಾತಾಡುವಷ್ಟು ತಂತ್ರಜ್ಞಾನ ಬೆಳೆದಿದೆ. ಆದರೆ, ಮನಸ್ಸಿನ ತಲ್ಲಣಗಳನ್ನು, ಎದೆಯಾಳದ ಮಾತುಗಳನ್ನು, ನಿನ್ನೆಯ ರೋಮಾಂಚನವನ್ನು, ನಾಳಿನ ಭಯವನ್ನು ತಮ್ಮ ಪರಮಾಪ್ತರಿಗೆ ರವಾನಿಸಲು ಚಟಪಟಿಸುತ್ತಾ ಕ್ಯೂ ನಿಲ್ಲುವವರ ಕಥೆ ಗೊತ್ತಾ? ಅಮ್ಮನ ಧ್ವನಿಗಾಗಿ ತಪಸ್ಸು ಮಾಡುವುದು, ಅಪ್ಪನ ಸಲಹೆ ಕೇಳಲು ಒಂದೊಪ್ಪತ್ತು ಸರದಿ ಸಾಲಿನಲ್ಲಿ ನಿಲ್ಲಬೇಕಾದವರ ಕಥೆ ಗೊತ್ತಾ ನಿಮ್ಗೆ?
Related Articles
Advertisement
ನೂರಾರು ವಿದ್ಯಾರ್ಥಿಗಳಿರುವ ಹಾಸ್ಟೆಲ್‌ನಲ್ಲಿ ಒಂದೋ, ಎರಡೋ ಕಾಯ್ನ ಬಾಕ್ಸ್ ಇರುತ್ತದೆ. ದಿನದಲ್ಲಿ ಇಂತಿಷ್ಟು ಗಂಟೆ ಬಳಸಬಹುದು, ಇಂತಿಷ್ಟೇ ಕಾಯ್ನ ಬಳಸಬೇಕು ಅಂತ ನಿಯಮಗಳು ಬೇರೆ. ಜಗತ್ತಿನಲ್ಲಿ ಏನು ಬೇಕಾದರೂ ಆಗಲೀ, ನಮ್ಮ ಕಾಯ್ನ ಬಾಕ್ಸ್ ಮಾತ್ರ ಹಾಳಾಗದಿರಲಿ ಎಂಬುದು ಹಾಸ್ಟೆಲ್‌ನಲ್ಲಿರುವ ಹುಡುಗ/ ಹುಡುಗಿಯರ ನಿತ್ಯ ಪ್ರಾರ್ಥನೆ. ಇನ್ನು ನೋಟು ಕೊಟ್ಟು ಒಂದು ರುಪಾಯಿ ಕಾಯ್ನ ಪಡೆಯಲೂ ಕ್ಯೂ ನಿಲ್ಲಬೇಕು. ನಮ್ಮ ದುರದೃಷ್ಟಕ್ಕೆ ಕಾಯ್ನ ಖಾಲಿಯಾದರೆ ಕಥೆ ಮುಗಿದಂತೆ. ಅವರಿವರ ಬಳಿ ಒಂದು ರುಪಾಯಿಗಾಗಿ ಬೇಡುವ ಪರಿಸ್ಥಿತಿ. “ನೂರರ ನೋಟು ಬೇಕಾದರೂ ಕೊಟ್ಟೇವು, ನಾಣ್ಯ ಕೊಡೆವು’ ಎನ್ನುವವರೇ ಹೆಚ್ಚು. ಇನ್ನು, ಕಾಯ್ನ ಬಾಕ್ಸ್ ಬಳಿ ಜನರಿರದಿದ್ದಾಗ ಕೈಯಲ್ಲಿ ಕಾಯ್ನ ಇರುವುದಿಲ್ಲ. ಕೈಯಲ್ಲಿ ಕಾಯ್ನ ಇದ್ದಾಗ ಕ್ಯೂ ಕಿಲೋಮೀಟರ್‌ನಷ್ಟಿರುತ್ತದೆ. ಇದಂತೂ ಹಲ್ಲಿದ್ದವನ ಬಳಿ ಕಡಲೆ ಇಲ್ಲ, ಕಡಲೆ ಇದ್ದವನ ಬಳಿ ಹಲ್ಲಿಲ್ಲ ಎನ್ನುವಂತೆ. ಕಾಲೇಜು ಮುಗಿದ ತಕ್ಷಣ “ಬೇಗ ಬೇಗ ನಡಿಯೇ. ಇಲ್ಲಾಂದ್ರೆ ಕ್ಯೂ ಆಗುತ್ತೆ’ ಎಂದು ಹಾಸ್ಟೆಲ್‌ನತ್ತ ಓಡುವವರ ದಂಡನ್ನೇ ಕಾಣಬಹುದು. ನಂಬಿ. ಹಾಸ್ಟೆಲ್‌ಗಳಲ್ಲಿ ಊಟ- ತಿಂಡಿ ಬಿಟ್ಟು ಅಮ್ಮ- ಅಪ್ಪನ ಧ್ವನಿಗಾಗಿ ಹಾತೊರೆಯುವ ಮನಸ್ಸುಗಳೂ ಇವೆ. ಆ ಧ್ವನಿ ಕೇಳಿದಾಗ, ಅವರೆಲ್ಲ ಹೊಟ್ಟೆ ತುಂಬಿಬಿಡುತ್ತೆ!
—-
ಒಮ್ಮೆ ಏನಾಯಿತು ಗೊತ್ತೇ?
ನಮ್ಮ ಪಕ್ಕದ ರೂಮಿಗೆ ಮಧ್ಯರಾತ್ರಿ ವೇಳೆಗೆ ಯಾರೋ ಬಂದರು. ಅಷ್ಟೊತ್ತಿನಲ್ಲಿ ಬಂದವರು ಯಾರಿರಬಹುದು ಎಂದು ಎಲ್ಲರಿಗೂ ಕುತೂಹಲ. ಒಬ್ಬ ಹುಡುಗಿಯ ಸಂಬಂಧಿಕರು ರೂಮಿಗೇ ಬಂದು ಆಕೆಯನ್ನು ತಕ್ಷಣ ಮನೆಗೆ ಹೊರಡುವಂತೆ ಹೇಳುತ್ತಿದ್ದಾರೆ. ಅಷ್ಟೊಂದು ಅರ್ಜೆಂಟ್ ಯಾಕೆಂದು ಮಾತ್ರ ಹೇಳುತ್ತಿಲ್ಲ. ಕೇಳಿದ್ದಕ್ಕೆ, “ಮನೆಯಲ್ಲಿ ಅಜ್ಜಿಗೆ ಅನಾರೋಗ್ಯ’ ಎಂದರು. ಇದ್ದರೂ ಇರಬಹುದು. ಆಕೆ ಮನೆಯವರೊಡನೆ ಮಾತಾಡದೇ ಮೂರು ದಿನಗಳಾಗಿತ್ತು. ಕಾಲ್ ಮಾಡಲು ಸರತಿಯಲ್ಲಿ ನಿಂತು ಆಕೆ ದಣಿದಿದ್ದಳೇ ವಿನಃ ಮಾತಾಡಲಾಗಿರಲಿಲ್ಲ. ಅಸಲಿ ವಿಷಯವೇನೆಂದರೆ, ಆಕೆಯ ಅಪ್ಪ ತೀರಿ ಹೋಗಿದ್ದರು. 3 ದಿನದಿಂದ ಆಕೆಯ ತಂದೆ ಮಗಳ ಹೆಸರಲ್ಲಿ ಜಪ ಮಾಡಿದ್ದರು. ಆದರೆ, ಮಗಳೊಡನೆ ಮಾತನಾಡುವ ಅವಕಾಶ ಕೊನೆಗೂ ಅವರಿಗೆ ಸಿಗಲಿಲ್ಲ. ಕೊನೆಯದಾಗಿ ಅಪ್ಪನ ಧ್ವನಿ ಕೇಳುವ ಭಾಗ್ಯ ಇವಳದ್ದಾಗಲಿಲ್ಲ. ಅಪ್ಪನೊಡನೆ ಮಾತಾಡಲು, 3 ದಿನಗಳ ಸುದ್ದಿ ಹೇಳಲು ಮಗಳು ಹಪಹಪಿಸಿ ಭಾನುವಾರದ ರಜೆಯನ್ನೂ ತ್ಯಾಗ ಮಾಡಿ ಸರತಿಯಲ್ಲಿ ನಿಂತಿದ್ದರೂ, ಹಾಸ್ಟೆಲಿನಲ್ಲಿ ಮಾತಾಡುವವರ ಕ್ಯೂ ಕರಗಿರಲಿಲ್ಲ. ಈ ಹುಡುಗಿ – ಛೇ, ಟೈಂ ಆಗೊØàಯ್ತು, ಮಾತಾಡೋಕೆ ಚಾನ್ಸೇ ಸಿಗಲಿಲ್ಲ ಎಂದು ಚಡಪಡಿಸುತ್ತಿದ್ದರೆ, ಅತ್ತ ಅವರ ತಂದೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಈ ಸಂಗತಿ ತಿಳಿಯದ ಈಕೆ ನಾಳೆಯಾದರೂ ಅಪ್ಪನೊಡನೆ ಮಾತಾಡುವ, ಮುಂದಿನ ವಾರದ ರಜೆಯಲ್ಲಿ ಮನೆಗೆ ತೆರಳಿ ಅಪ್ಪನ ಮುಖ ನೋಡುವ ಆಸೆಯಲ್ಲಿದ್ದಳು. ಆದರೆ, ಆ ಎರಡೂ ಆಸೆ ಕೊನೆಗೂ ಈಡೇರಲೇ ಇಲ್ಲ. – ಮಹಿಮಾ ಭಟ್