ಅಡಿಲೇಡ್: ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿಯೇ ಸೋಲು ಕಂಡ ಆತಿಥೇಯ ಆಸ್ಟ್ರೇಲಿಯಾ ಎರಡನೇ ಪಂದ್ಯ ಗೆದ್ದು ಕಮ್ ಬ್ಯಾಕ್ ಮಾಡುವ ಯೋಜನೆಯಲ್ಲಿದೆ. ಎರಡನೇ ಪಂದ್ಯವು ಅಡಿಲೇಡ್ ನಲ್ಲಿ ನಡೆಯಲಿದ್ದು, ಹಗಲು ರಾತ್ರಿಯ ಪಿಂಕ್ ಬಾಲ್ ಪಂದ್ಯಾಟವಾಗಿರಲಿದೆ. ಆದರೆ ತಂಡಕ್ಕೆ ಆಘಾತವೊಂದು ಎದುರಾಗಿದ್ದು, ಪ್ರಮುಖ ವೇಗಿ ತಂಡದಿಂದಲೇ ಔಟಾಗಿದ್ದಾರೆ.
ಪರ್ತ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ವೇಗಿ ಜೋಶ್ ಹೇಜಲ್ವುಡ್ (Josh Hazlewood) ಅವರು ಗಾಯಗೊಂಡಿದ್ದಾರೆ. ಹೀಗಾಗಿ ಅಡಿಲೇಡ್ ಟೆಸ್ಟ್ ನಿಂದ ಅವರು ಹೊರಬಿದ್ದಿದ್ದಾರೆ.
ಇದೀಗ ಆಸ್ಟ್ರೇಲಿಯಾ ತಂಡಕ್ಕೆ ಯುವ ವೇಗಿಗಳಾದ ಸೀನ್ ಅಬಾಟ್ ಮತ್ತು ಬ್ರೆಂಡನ್ ಡಾಗೆಟ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಪರ್ತ್ ಪಂದ್ಯದಲ್ಲಿ ಬೆಂಚ್ ಕಾದಿದ್ದ ವೇಗಿ ಸ್ಕಾಟ್ ಬೊಲ್ಯಾಂಡ್ ಅವರು ಅಡಿಲೇಡ್ ನಲ್ಲಿ ಆಡುವ ಅವಕಾಶ ಪಡೆಯುವ ಸಾಧ್ಯತೆಯಿದೆ. ಬೊಲ್ಯಾಂಡ್ ಅವರು 2023ರ ಜುಲೈನಲ್ಲಿ ಕೊನೆಯ ಬಾರಿಗೆ ಟೆಸ್ಟ್ ನಲ್ಲಿ ಆಡಿದ್ದರು.
ಆಲ್ ರೌಂಡರ್ ಮಿಚೆಲ್ ಮಾರ್ಶ್ ಅವರ ಫಿಟ್ನೆಸ್ ಬಗ್ಗೆಯೂ ಅನುಮಾನಗಳಿವೆ. ಅವರು ಅಡಿಲೇಡ್ ನಲ್ಲಿ ಆಡುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಮಾರ್ಶ್ ಅವರ ಅನಿಶ್ಚಿತತೆಯ ಕಾರಣಕ್ಕೆ ತಂಡಕ್ಕೆ ಬೇ ವೆಬ್ ಸ್ಟರ್ ಅವರನ್ನು ಸೇರಿಸಿಕೊಳ್ಳಲಾಗಿದೆ.