ಪಡುಬಿದ್ರಿ: ‘ಹೆಜಮಾಡಿ’ ಉಡುಪಿ ಜಿಲ್ಲೆಯ ದಕ್ಷಿಣ ಭಾಗದ ಕಟ್ಟಕಡೆಯ ಗ್ರಾಮ. ಮೀನುಗಾರರು, ರೈತಾಪಿ ವರ್ಗವೇ ಹೆಚ್ಚಾಗಿರುವ ಈ ಗ್ರಾಮದಲ್ಲಿನ ಪ್ರಮುಖ ಬೆಳೆ ಭತ್ತ ಹಾಗೂ ತೆಂಗು, ಅಡಿಕೆ. ರೈತರೇ ಈ ದೇಶದ ಬೆನ್ನೆಲುಬು ಎಂದು ಘೋಷಿಸುವ ನಾಯಕರಲ್ಲಿ ಹೆಜಮಾಡಿ ಭಾಗದಲ್ಲಿ ನದಿ ಕೊರೆತದಿಂದಾಗಿ ನದಿ ಪಾಲಾದ ರೈತರ ಭೂಮಿಯ ಬಗ್ಗೆ ಅಂಕಿ ಅಂಶಗಳಿಲ್ಲ. ಹಲವು ವರ್ಷಗಳಿಂದ ನದಿ ಕೊರೆತದಿಂದ ಶಾಂಭವೀ ನದಿ ಪಾಲಾಗುತ್ತಿರುವ ಕೃಷಿ ಭೂಮಿಯನ್ನು ಈಗಲಾದರೂ ಉಳಿಸಬೇಕಿದೆ.
ಹೆಜಮಾಡಿ ಗ್ರಾಮದ ನಡಿಕುದ್ರು, ಕೊಕ್ರಾಣಿ, ಕೊಪ್ಪಲ, ಪರಪಟ್ಟದಿಂದ ಕಡವಿನ ಬಾಗಿಲವರೆಗೂ ಶಾಂಭವಿ ನದಿ ಕೊರೆತವು ಅವ್ಯಾಹತವಾಗಿ ನಡೆದಿದೆ. ನದಿ ತಡೆಗೋಡೆ ನಿರ್ಮಾಣಕ್ಕಾಗಿ ಶಾಸಕರಲ್ಲಿ ಮನವಿಯನ್ನೂ ಮಾಡಲಾಗಿದೆ.
ದ.ಕ. ಜಿಲ್ಲೆಯ ಮೂಲ್ಕಿ ನ.ಪಂ.ಗೆ ಸೇರಿದ ಬಪ್ಪನಾಡು ಬಡಗಹಿತ್ಲು, ಚಂದ್ರಶಯನ ಕುದ್ರುವಿನ ಒಂದು ಭಾಗದಲ್ಲಿ ತಡೆಗೋಡೆಗಳನ್ನು ರಚಿಸಲಾಗಿದೆ. ಹಾಗಾಗಿ ಹೆಜಮಾಡಿಯ ಭಾಗವೇ ನದಿ ನೀರಿನ ಕೊರೆತಕ್ಕೆ ಅತೀ ಹೆಚ್ಚು ಗುರಿಯಾಗಿದೆ. ನದಿ ಪಾತ್ರದ “ಕಟ್ಟಪುಣಿ’ಗಳು, “ಮೂಂಡು’ ಈಗ ಕಾಣ ಸಿಗುತ್ತಲೇ ಇಲ್ಲ.
ನದಿ ಕೊರೆತಕ್ಕೆ ಈ ಭಾಗದಲ್ಲಿದ್ದ ಮುಟ್ಟಳಿವೆ ಗ್ರಾಮದ ದಕ್ಷಿಣ ತುದಿಗೆ ಸರಿದಿರುವುದೂ ಒಂದು ಪ್ರಮುಖ ಕಾರಣ. ನಡಿಕುದ್ರು ಸಂಪರ್ಕ ರಸ್ತೆ ನಿರ್ಮಾಣದ ವೇಳೆಯೇ ಪರಪಟ್ಟದ ಜನತೆ ನಡಿಕುದ್ರುವಿಗೆ ಸೇತುವೆ ನಿರ್ಮಿಸುವಂತೆ ಕೋರಿದ್ದರು. ಅಂದಿನ ಭಾರೀ ಮಳೆಯೊಂದಕ್ಕೆ ನಡಿಕುದ್ರು ಸಂಪರ್ಕ ರಸ್ತೆ ಕೊಚ್ಚಿಹೋಗಿತ್ತು. ಅಲ್ಲಿನ ಮಣ್ಣರಾಶಿ ಪದ್ಮನಾಭ ಸುವರ್ಣರ ಪರಪಟ್ಟ ಭಾಗದಲ್ಲಿ ಸೇರಿಕೊಂಡಿದ್ದು ಈಗಲೂ ಸುಮಾರು 5 ಎಕ್ರೆ ಪ್ರದೇಶವು ಕೃಷಿಗೆ ಯೋಗ್ಯವಾಗಿಲ್ಲ.
ಇನ್ನು ನಡಿಕುದ್ರುವಿನ ಸೇತುವೆ ನಿರ್ಮಾಣದ ವೇಳೆ ನದಿಗಡ್ಡವಾಗಿ ಹಾಕಲಾದ ಕೆಲ ಬೃಹತ್ ಬಂಡೆಕಲ್ಲುಗಳು ಅಲ್ಲಿಯೇ ಇವೆ. ಹೆದ್ದಾರಿ ಚತುಃಷ್ಪಥ ಕಾಮಗಾರಿಯ ವೇಳೆ ಶಾಂಭವಿ ನದಿಗಡ್ಡವಾಗಿ ನಿರ್ಮಾಣವಾದ ಸೇತುವೆಯ ಅಡಿ ಹಾಕಲಾದ ಬಂಡೆಗಲ್ಲುಗಳು, ಮಣ್ಣಿನ ರಾಶಿಯನ್ನು ನವಯುಗ ಕಂಪೆನಿಯವರು ತೆರವುಗೊಳಿಸಿಲ್ಲ. ಇವೆಲ್ಲವೂ ನದಿಯ ನೀರಿನ ಹರಿವಿಗೆ ತಡೆಯೊಡ್ಡಿದೆ.
ಈ ಮಧ್ಯೆ ಮೂಲ್ಕಿಯ ಭಾಗದಲ್ಲಿ ನದಿ ತಡೆಗೋಡೆಗಳ ನಿರ್ಮಾಣವಾದ ಕಾರಣ ನದಿಯ ನೀರು ಮಳೆಗಾಲದಲ್ಲಿ ಹೆಜಮಾಡಿಯ ಭಾಗಗಳಿಗೆ ನುಗ್ಗಿ ನೆರೆ ಪರಿಸ್ಥಿತಿ ಸೃಷ್ಟಿಸುತ್ತಿದೆ. ಇದರಿಂದಲೇ ನದಿ ಪಾತ್ರದ ಕೊರೆತ ಹೆಚ್ಚಳಕ್ಕೂ ಕಾರಣವಾಗುತ್ತಿದೆ ಎನ್ನುತ್ತಾರೆ ಹೆಜಮಾಡಿ ಗ್ರಾ. ಪಂ. ಮಾಜಿ ಅಧ್ಯಕ್ಷರೂ ಆದ ಪ್ರಾಣೇಶ್ ಹೆಜಮಾಡಿ.
ಹೆಜಮಾಡಿ ಗ್ರಾಮದ ಕಡವಿನ ಬಾಗಿಲಿನಿಂದ ಹೆಜಮಾಡಿ ಕೋಡಿ ಪರಪಟ್ಟದವರೆಗೆ, ನಡಿಕುದ್ರುವಿನ ಸುತ್ತಲೂ, ಕೊಕ್ರಾಣಿ, ಕೊಪ್ಪಲ ಪ್ರದೇಶಗಳಲ್ಲೂ ಹಾಗೂ ಕಡವಿನ ಬಾಗಿಲು ಬಳಿಯಿಂದ ನಡಿಕುದ್ರು ಸೇತುವೆವರೆಗೆ ನದಿ ದಂಡೆ ರಚನೆಗಳು ಆಗಲೇಬೇಕಿದೆ.
ಎರಡು ಕಿಂಡಿ ಅಣೆಕಟ್ಟುಗಳು
ಹೆಜಮಾಡಿ ಗ್ರಾಮದ 5ನೇ ಹಾಗೂ 7ನೇ ವಾರ್ಡಿನಲ್ಲಿ ಎರಡು ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಮಾಜಿ ಸಚಿವ ದಿ| ವಸಂತ ಸಾಲ್ಯಾನ್ ಅವರ ಕಾಲದಲ್ಲೇ ಯೋಜನೆ ಸಿದ್ಧವಾಗಿತ್ತು. ಒಂದು ಲೋಡು ಕಲ್ಲನೂ ತಂದು ಹಾಕಲಾಗಿತ್ತು. ಅದು ಈಗಲೂ ಅಲ್ಲಿ ಇದೆ. ಆದರೆ ಕಿಂಡಿ ಅಣೆಕಟ್ಟು ನಿರ್ಮಾಣವಾಗಲಿಲ್ಲಇಲ್ಲಿ ಅಣೆಕಟ್ಟು ನಿರ್ಮಾಣವಾದರೆ ಪರಪಟ್ಟ ಪ್ರದೇಶದಲ್ಲಿನ ಹಲವು ಎಕ್ರೆ ಕೃಷಿ ಭೂಮಿಗಳಿಗೆ ಉಪ್ಪುನೀರು ಹರಿಯದಂತೆ ತಡೆಯಬಹುದು. ಆಗ ಪ್ರತೀ ಬಾರಿ ರೈತರು ನದಿಯ ಮುಖಕ್ಕೆ ಕೆಂಪು ಮಣ್ಣು ರಾಶಿ ಸುರಿದು ಉಪ್ಪು ನೀರು ತಡೆಯಲು ಪಡುವ ಕಸರತ್ತಿಗೆ ಪರಿಹಾರವಾಗಬಹುದು.
ಪಾದೆಬೆಟ್ಟು ಗ್ರಾಮವು ಪಡುಬಿದ್ರಿಗೆ ಹೊಂದಿಕೊಂಡಂತಿದ್ದು ಇಲ್ಲಿನ ಸುಬ್ರಹ್ಮಣ್ಯ ದ್ವಾರದಿಂದ ಪಾದೆಬೆಟ್ಟು ರಾಘವೇಂದ್ರ ಮಠದವರೆಗೆ ರಸ್ತೆಯನ್ನು ದ್ವಿಪಥಗೊಳಿಸಿ ಅಗಲಗೊಳಿಸಬೇಕೆಂಬ ಬೇಡಿಕೆ ಪಾದೆಬೆಟ್ಟು ಗ್ರಾಮಸ್ಥರದ್ದು. ಇಲ್ಲಿಗೆ ಉಡುಪಿಯಿಂದ ನರ್ಮ್ ಬಸ್ ಸಂಪರ್ಕವನ್ನು ಎಲ್ಲೂರು, ಅದಮಾರು ದಾರಿಯಾಗಿ ಪಡುಬಿದ್ರಿಗೆ ಕಲ್ಪಿಸಿಕೊಡಬೇಕೆಂಬುದು ಗ್ರಾಮಸ್ಥರ ಬೇಡಿಕೆ.
ಇದಲ್ಲದೇ ಪಾದೆಬೆಟ್ಟು ಗ್ರಾಮದಲ್ಲಿ ಸುಸಜ್ಜಿತ ಸಮುದಾಯ ಭವನವೂ ನಿರ್ಮಾಣಗೊಂಡಿದ್ದು ಬಸ್ ವ್ಯವಸ್ಥೆಯಾದಲ್ಲಿ ಅನುಕೂಲವಾಗಲಿದೆ.
ಮೀನುಗಾರಿಕಾ ರಸ್ತೆ
ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್ ಕಿನಾರೆಯನ್ನು ಸಂಪರ್ಕಿಸಬಲ್ಲ ಮೀನುಗಾರಿಕೆಗೆ ಅನುಕೂಲವಾಗುವ ರಸ್ತೆ ಈ ಭಾಗದಲ್ಲಿ ಇನ್ನೂ ಕನಸಾಗಿಯೇ ಉಳಿದಿದೆ. ನಡಾÕಲು ಹಾಗೂ ಹೆಜಮಾಡಿ ಗ್ರಾಮಗಳ ನಡುವಿನ ಮುಟ್ಟಳಿವೆ ಭಾಗದಲ್ಲಿ ಸುಮಾರು 70 ಲಕ್ಷ ರೂ. ವೆಚ್ಚ ಮಾಡಿ ಕಟ್ಟಿದ ಸೇತುವೆ ನಿಷ್ಟ್ರಯೋಜಕವಾಗಿದೆ. ಇದರಲ್ಲಿ ಕಾಮಿನಿ ನದಿಯ ನೀರು ಹರಿಯುತ್ತಿಲ್ಲ. ಅಳಿವೆಯನ್ನು ನಡಾÕಲು ಗ್ರಾಮದ ರೈತರೇ ಮಳೆಗಾಲಕ್ಕೂ ಮುಂಚೆ ಜೆಸಿಬಿ ಮೂಲಕ ಪ್ರತೀ ವರ್ಷವೂ ಮರಳನ್ನೆತ್ತುವ ಮೂಲಕ ತೆರೆಯುತ್ತಾರೆ. ಪಡುಬಿದ್ರಿ ಪಂಚಾಯತ್ ರೈತರಿಗೆ ಕಿಂಚಿತ್ ಸಹಾಯಧನ ನೀಡುತ್ತದೆ. ಆದರೆ ಕಾಪುವಿನಿಂದ ಪಡುಬಿದ್ರಿಯವರೆಗೂ ಸಂಪರ್ಕ ಕಲ್ಪಿಸುವ ಮೀನುಗಾರಿಕ ರಸ್ತೆ ಹೆಜಮಾಡಿಯನ್ನು ಸಂಪರ್ಕಿಸದೇ ಅಪೂರ್ಣವಾಗಿದೆ. ಹೆಜಮಾಡಿ ಬಂದರು ನಿರ್ಮಾಣಕ್ಕೂ ಮುಂಚೆ ಈ ಸಂಪರ್ಕ ರಸ್ತೆ ಆಗಬೇಕೆಂಬುದು ಮೀನುಗಾರರ ಬೇಡಿಕೆ.
ಮೀಸಲು: ನದಿ ತಡೆಗೋಡೆ ರಚನೆಗಳ ಕುರಿತಾಗಿ ವಿವಿಧ ಗ್ರಾಮಸಭೆಗಳಲ್ಲಿಯೂ ಒತ್ತಾಯಿಸಿದ್ದಾರೆ. ಇದು ದೊಡ್ಡ ಮೊತ್ತದ ಕಾಮಗಾರಿಯಾಗಿದ್ದು, ಈಗಾಗಲೇ ಕಾಪು ಕ್ಷೇತ್ರ ಶಾಸಕ ಲಾಲಾಜಿ ಮೆಂಡನ್ ಅವರ ಬಳಿಯೂ ಪ್ರಸ್ತಾವಿಸಲಾಗಿದೆ. ಹಂತ, ಹಂತವಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದಾಗಿ ಶಾಸಕರು ಹೇಳಿದ್ದು, ನಡಿಕುದ್ರು ಭಾಗದಲ್ಲಿನ ನದಿ ದಂಡೆ ರಚನೆಗಾಗಿ 10ಲಕ್ಷ ರೂ.ಗಳನ್ನು ಮೀಸಲಿರಿಸುವುದಾಗಿ ತಿಳಿಸಿದ್ದಾರೆ.
-ಪವಿತ್ರಾ ಗಿರೀಶ್, ಅಧ್ಯಕ್ಷೆ, ಹೆಜಮಾಡಿ ಗ್ರಾ. ಪಂ
– ಆರಾಮ