ಬೆಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಬೆಂಕಿ ಹಚ್ಚುವ ಹೇಳಿಕೆ ಹಾಗೂ ವೈದ್ಯರ ಮೇಲೆ ಹಲ್ಲೆ ನಡೆಸಿದ ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ನಡವಳಿಕೆ ಬಿಜೆಪಿಯ ಮನಸ್ಥಿತಿ ಎಂತಹದ್ದು ಅನ್ನುವುದನ್ನು ಸಾಬೀತುಪಡಿಸಿದೆ ಎಂದು ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಇಬ್ಬರು ಸಂಸದರ ನಡವಳಿಕೆ ಬಗ್ಗೆ ಬಿಜೆಪಿ ಮುಖಂಡರು ಕ್ರಮ ಕೈಗೊಳ್ಳಬೇಕು, ರಾಜ್ಯದ ಜನತೆಗೆ ಸಷ್ಟೀಕರಣ ನೀಡುವುದರ ಜೊತೆಗೆ ಬೇಷರತ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕರಾವಳಿ ಭಾಗ ಕರ್ನಾಟಕದ ಬಿಜೆಪಿಯ ಹೆಬ್ಟಾಗಿಲು ಎಂದು ಆ ಪಕ್ಷದ ಮುಖಂಡರು ಹೇಳುತ್ತಾರೆ. ಹೆಬ್ಟಾಗಿಲು ಪ್ರತಿನಿಧಿಸುವ ಒಬ್ಬ ಸಂಸದರು ಬೆಂಕಿ ಹಚ್ಚುವ ಹೇಳಿಕೆ ನೀಡುವ ಮೂಲಕ ಜನರನ್ನು ಪ್ರಚೋದಿಸಿದರೆ, ಮತ್ತೂಬ್ಬ ಸಂಸದರು ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆಸಿ ಕಾನೂನು ಕೈಗೆತ್ತಿಕೊಂಡಿದ್ದಾರೆ. ಇವರಿಬ್ಬರ ವರ್ತನೆ ನೋಡಿದರೆ ಬಿಜೆಪಿ ಯಾವ ಮನಸ್ಥಿತಿ ಹೊಂದಿದೆ ಅನ್ನುವುದು ಗೊತ್ತಾಗುತ್ತದೆ. ಜನರನ್ನು ಪ್ರಚೋದಿಸಿ, ಕಾನೂನು ಕೈಗೆತ್ತಿಕೊಂಡು ಭಯದ ವಾತಾವರಣ ನಿರ್ಮಾಣ ಮಾಡುವ ಮೂಲಕ ಅಧಿಕಾರ ಹಿಡಿಯಬೇಕು ಎಂಬ ದುರುದ್ದೇಶ ಬಿಜೆಪಿ ಹೊಂದಿದ್ದರೆ, ಅದು ಮೂರ್ಖತನ ಎಂದು ಉಗ್ರಪ್ಪ ಟೀಕಿಸಿದರು.
ನಳಿನ್‌ಕುಮಾರ್ ಕಟೀಲ್ ಹೇಳಿಕೆ ಹಾಗೂ ಅನಂತಕುಮಾರ್ ಹೆಗಡೆ ವರ್ತನೆಯನ್ನು ಬಿಜೆಪಿಯ ಯಾವೊಬ್ಬ ಮುಖಂಡರೂ ಖಂಡಿಸಿಲ್ಲ. ಬದಲಾಗಿ ಈಶ್ವರಪ್ಪನವರು ಕಟೀಲ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮುಖಂಡರಾದ ಜಗದೀಶ್ ಶೆಟ್ಟರ್, ಅನಂತಕುಮಾರ್, ಸದಾನಂದಗೌಡ ಯಾರೂ ಸಹ ಇದರ ಬಗ್ಗೆ ಬಾಯಿ ಬಿಚ್ಚಿಲ್ಲ. ಇವರೆಲ್ಲರ ಧೋರಣೆ, ಇಬ್ಬರು ಸಂಸದರ ವರ್ತನೆಯನ್ನು ಸಮರ್ಥಿಸಿಕೊಳ್ಳುವಂತಿದೆ ಎಂದು ಆರೋಪಿಸಿದ ಉಗ್ರಪ್ಪ, ಇಬ್ಬರು ಸಂಸದರ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.