ಉಡುಪಿ: ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಇತ್ತೀಚೆಗಷ್ಟೇ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಗುಡ್ಡ ಕುಸಿದು ಸಂಚಾರ ಬಂದ್ ಆಗಿ ಪ್ರಯಾಣಿಕರು ಪರದಾಡಿದ್ದು ಜನರ ಮನಸ್ಸಿನಲ್ಲಿ ಹಸಿರಾಗಿರುವಾಗಲೇ ಇದೀಗ ಮಲೆನಾಡು ಹಾಗೂ ಕರಾವಳಿ ಕರ್ನಾಟಕವನ್ನು ಸಂಪರ್ಕಿಸುವ ಆಗುಂಬೆ ಘಾಟಿಯ 7ನೇ ತಿರುವಿನಲ್ಲಿ ಗುರುವಾರ ಬೆಳಗ್ಗೆ ಭಾರೀ ಕುಸಿತ ಸಂಭವಿಸಿದ್ದು ವಾಹನ ಸಂಚಾರಕ್ಕೆ ತೀವ್ರ ಅಪಾಯವನ್ನು ತಂದೊಡ್ಡಿದೆ.
ಆಗುಂಬೆ ಘಾಟಿಯ ಕೆಲವೆಡೆ ಮಳೆಯಿಂದಾಗಿ ಕೆಲವೆಡೆ ಗುಡ್ಡ ಕುಸಿತ ಕಂಡಿದೆ. 7ನೇ ತಿರುವಿನಲ್ಲಿ ರಸ್ತೆಯಲ್ಲಿ ಭಾರೀ ಕುಸಿತವಾಗಿದೆ. ಒಂದು ವೇಳೆ ಘನ ಅಥವಾ ಭಾರೀ ತೂಕದ ವಾಹನಗಳು ಆಗುಂಬೆ ಘಾಟಿಯಲ್ಲಿ ಸಂಚರಿಸಿದರೆ 7ನೇ ತಿರುವಿನ ಮುಂಭಾಗ ಪೂರ್ಣ ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೇ ಧಾರಾಕಾರ ಮಳೆ ಮುಂದುವರಿದಲ್ಲಿ 7ನೇ ತಿರುವು ಮತ್ತಷ್ಟು ಕುಸಿತ ಕಾಣುವ ಸಾಧ್ಯತೆ ಹೆಚ್ಚಾಗಿದೆ.
ಅವೈಜ್ಞಾನಿಕ ತಡೆಗೋಡೆ:
ಆಗುಂಬೆ ಘಾಟಿಯಲ್ಲಿ ಕಟ್ಟಿರುವ ತಡೆಗೋಡೆ ಅವೈಜ್ಞಾನಿಕವಾಗಿದೆ. ಈಗಾಗಲೇ ಹಲವು ವಾಹನಗಳು ಘಾಟಿಯಿಂದ ಕೆಳಗೆ ಬಿದ್ದಿರುವ ಉದಾಹರಣೆ ಇದೆ. ಅದೇ ರೀತಿ ಕೆಲವೆಡೆ ಹಾಕಿರುವ ಸ್ಟೀಲ್ ತಡೆಗೋಡೆ ದುರ್ಬಲವಾಗಿದೆ. ಒಂದು ವೇಳೆ ಲಾರಿ, ಬಸ್ಸು, ಕಾರು ಡಿಕ್ಕಿ ಹೊಡೆದರೆ ವಾಹನಗಳು ಕೆಳಗೆ ಉರುಳಿ ಬೀಳುತ್ತದೆ. ಈ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಸ್ತೆಗೆ ಮರ, ಕಲ್ಲುಗಳು ಉರುಳುವ ಭಯ:
ಭಾರೀ ಮಳೆಗೆ ಆಗುಂಬೆ ಘಾಟಿ ರಸ್ತೆಯ ಮೇಲೆ ಮತ್ತಷ್ಟು ಮರಗಳು ಉರುಳಿ ಬೀಳುವ ಸಾಧ್ಯತೆ ಇದೆ. ಈಗಾಗಲೇ ಹಲವು ಮರಗಳ ಸುತ್ತಲಿನ ಮಣ್ಣು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಭಾರೀ ಗಾಳಿ, ಮಳೆ ಬಂದಲ್ಲಿ ಮರಗಳು ರಸ್ತೆ ಮೇಲೆ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂಬುದು ಸ್ಥಳೀಯರ ಆತಂಕ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ, ಪರಿಶೀಲನೆ:
ಸ್ಥಳಕ್ಕೆ ಮೊದಲು ಭೇಟಿ ನೀಡಿದ್ದ ಉದಯವಾಣಿ ಪ್ರತಿನಿಧಿ ಉದಯ್ ಕುಮಾರ್ ಶೆಟ್ಟಿ ಅವರು ಹೆಬ್ರಿ ಪೊಲೀಸ್ ಠಾಣಾಧಿಕಾರಿ ಮಹಾಬಲ ಶೆಟ್ಟಿಯವರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸ್ ಠಾಣಾಧಿಕಾರಿ ಮಹಾಬಲ ಶೆಟ್ಟಿ ಹಾಗೂ ಶಿವಮೊಗ್ಗ ಪೊಲೀಸ್ ಠಾಣಾಧಿಕಾರಿ , ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಗುಡ್ಡ ಕುಸಿದ ಸ್ಥಳದಲ್ಲಿ ಕೆಂಪು ರಿಬ್ಬನ್ ಪಟ್ಟಿ ಕಟ್ಟಿ ಅಪಾಯದ ಪ್ರದೇಶ ಎಂಬುದಾಗಿ ವಾಹನ ಸವಾರರಿಗೆ ತಿಳಿಯುವಂತೆ ಮಾಡಿದ್ದಾರೆ.
ಅಪಾಯ ಗಮನಿಸಿದ ಕೋಟ ಸತ್ಯನಾರಾಯಣ:
ಗುರುವಾರ ಬೆಳಗ್ಗೆ ಆಗುಂಬೆಯಿಂದ ಶಿವಮೊಗ್ಗದತ್ತ ತೆರಳುತ್ತಿದ್ದ ಕೋಟ ಸತ್ಯನಾರಾಯಣ ಮಧ್ಯಸ್ಥರು 7ನೇ ತಿರುವಿನಲ್ಲಿ ರಸ್ತೆ ಕುಸಿದಿರುವುದನ್ನು ಗಮನಿಸಿ ಉದಯವಾಣಿಯ ಗಮನಕ್ಕೆ ತಂದಿದ್ದರು. ಬಳಿಕ ಈ ವಿಷಯ ಸೋಮೇಶ್ವರ ಸುತ್ತಮುತ್ತಲಿನ ಸ್ಥಳೀಯರಿಗೆ ತಿಳಿದು ಸ್ಥಳಕ್ಕೆ ಆಗಮಿಸಿದ್ದರು. ಅಲ್ಲದೇ ಘನ ವಾಹನ ಸಂಚರಿಸದಂತೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.
ವಾಹನ ಸವಾರರೇ ಎಚ್ಚರ:
7ನೇ ತಿರುವಿನ ರಸ್ತೆ ಕುಸಿದಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ವಾಹನ ಸವಾರರು ಅತೀ ಜಾಗರೂಕತೆಯಿಂದ ಸಂಚರಿಸಬೇಕಾಗಿದೆ. ಮಳೆಯಿಂದಾಗಿ ಲಾರಿ, ಬಸ್ಸು, ಕಾರುಗಳು ರಾತ್ರಿ ವೇಳೆ ಮತ್ತಷ್ಟು ನಿಧಾನವಾಗಿ ಸಂಚರಿಸುವುದು ಉತ್ತಮ. ಯಾವ ಸಮಯದಲ್ಲೂ ಆಗುಂಬೆ ಘಾಟಿಯಲ್ಲಿ ಮರಗಳು ಅಥವಾ ಗುಡ್ಡ ಕುಸಿಯುವ ಅಪಾಯ ಇದೆ.
ವರದಿ: ನಾಗೇಂದ್ರ ತ್ರಾಸಿ
ವಿಡಿಯೋ: ಸುಧೀರ್ ಪರ್ಕಳ