ಮೈಸೂರು: ಭಾರೀ ಮಳೆಯಿಂದಾಗಿ ಕಬಿನಿ ಹಾಗೂ ಹಾರಂಗಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು, ಅಪಾರ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಗುತ್ತಿದೆ. 2284 ಅಡಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯದ ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ಒಳ ಹರಿವು ಬರುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟವನ್ನು 83 ಅಡಿಗಳಿಗೆ ಕಾದಿರಿಸಿ ಕೊಳ್ಳಲಾಗಿದೆ.
ಆದರೆ, ಶುಕ್ರವಾರದಿಂದ ಕೇರಳದ ವೈನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.
ಒಳ ಹರಿವು ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹೊರ ಹರಿವಿನ ಪ್ರಮಾಣ ಕೂಡ ಹೆಚ್ಚಾಗಬಹುದು, ಹೀಗಾಗಿ ತಗ್ಗು ಪ್ರದೇಶದ ಜನರು ಮುನ್ನೆಚ್ಚರಿಕೆವಹಿಸಬೇಕೆಂದು ಕಬಿನಿ ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುಟ್ಟಶೇಷಗಿರಿ ತಿಳಿಸಿದ್ದಾರೆ.
ಭರ್ತಿಯತ್ತ ಹಾರಂಗಿ: ಕಾವೇರಿ ಕಣಿವೆಯ ಅತಿ ಚಿಕ್ಕ ಜಲಾಶಯವಾದ 2859 ಅಡಿ ಗರಿಷ್ಠ ನೀರು ಸಂಗ್ರಹಣ ಸಾಮರ್ಥ್ಯದ ಹಾರಂಗಿ ಜಲಾಶಯಕ್ಕೆ ಭಾರೀ ಮಳೆಯ ಪರಿಣಾಮ 25 ಸಾವಿರ ಕ್ಯೂಸೆಕ್ ಒಳ ಹರಿವು ಬರುತ್ತಿದ್ದು, ಜಲಾಶಯದ ಮಟ್ಟ 56.46 ಅಡಿ ತಲುಪಿದ್ದು, ಭರ್ತಿಗೆ ಇನ್ನು 2 ಅಡಿಗಳಷ್ಟೇ ಬಾಕಿ ಇರುವುದರಿಂದ 2250 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಜನಜೀವನ ಅಸ್ತವ್ಯಸ್ತ: ಶನಿವಾರ ಮುಂಜಾನೆಯಿಂದಲೇ ಜಿಲ್ಲಾದ್ಯಂತ ಭಾರೀ ಮಳೆ ಸುರಿದ ಪರಿಣಾಮ ಜನ ಜೀವನ ಅಸ್ತವ್ಯಸ್ತವಾಗಿತ್ತು. ಶನಿವಾರವಾದ್ದರಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ, ನೌಕರರು ಕಚೇರಿಗೆ ತೆರಳಲು ಪ್ರಯಾಸ ಪಡಬೇಕಾಯಿತು.