ರಬಕವಿ-ಬನಹಟ್ಟಿ: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಸಮೀಪದ ಹಿಪ್ಪರಗಿ ಜಲಾಶಯಕ್ಕೆ ಗುರುವಾರ ಬೆಳಗ್ಗೆ 7 ಗಂಟೆಗೆ 168565 ಕ್ಯೂಸೆಕ್ ಒಳ ಹರಿವು ಇದ್ದು, 167815 ಹೊರ ಹರಿವು ದಾಖಲಾಗಿದೆ.
ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಬನಹಟ್ಟಿ ಸಮೀಪದಲ್ಲಿ ಕೃಷ್ಣಾ ನದಿ ಭೋರ್ಗರೆಯುತ್ತಿದೆ. ಈ ಹಿನ್ನಲೆಯಲ್ಲಿ ತಾಲೂಕಿನ ತಮದಡ್ಡಿ, ಹಳಿಂಗಳಿ, ಮದನಮಟ್ಟಿ, ಅಸ್ಕಿ, ಸೇರಿದಂತೆ ಕೃಷ್ಣಾ ತೀರದ ಅನೇಕ ಗ್ರಾಮಗಳ ಗ್ರಾಮಸ್ಥರಲ್ಲಿ ಪ್ರವಾಹ ಬೀತಿ ಎದುರಾಗಿದೆ.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾ: 163 ಮಿ.ಮೀ, ನವುಜಾ: 237 ಮಿ.ಮೀ, ಮಹಾಬಳೇಶ್ವರ: 307 ಮಿ.ಮೀ, ಮಳೆಯಾದ ವರದಿಯಾಗಿದೆ.
ಜಲಾಶಯದ ಹೊರ ಹರಿವು ಮುಕ್ತವಾಗಿದ್ದರೂ ಕೃಷ್ಣಾ ನದಿಯ ಒಳ ಹರಿವು ಏರಿಳಿತವಾಗುತ್ತಿದ್ದು, ಜಲಾಶಯದಲ್ಲಿ ನೀರು ಸಂಗ್ರಹಿಸದೇ ಬಂದಷ್ಟೇ ನೀರನ್ನು ಹೊರಹಾಕುತ್ತಿದ್ದು, ನದಿ ತೀರದ ಜನತೆ ತಮ್ಮ ಜಾಗೃತೆಯಲ್ಲಿರಬೇಕು. ಕೆಲ ಗ್ರಾಮಗಳ ನದಿ ತೀರ ಪ್ರದೇಶದ ನಿವಾಸಿಗಳು ತಮ್ಮ ಸರಂಜಾಮು, ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಸನ್ನದ್ಧರಾಗಿರಬೇಕು. ಎಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ ತಿಳಿಸಿದ್ದಾರೆ.