Advertisement

Heavy Rain: ನಿರಂತರ ಮಳೆಗೆ ಸೈದೂರು, ಕಾನ್ಲೆಯಲ್ಲಿ ಕೃಷಿ ಜಮೀನು ಜಲಾವೃತ 

06:21 PM Jul 18, 2024 | Esha Prasanna |

ಸಾಗರ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ತಾಲೂಕಿನ ಹಳ್ಳ-ಕೊಳ್ಳಗಳು ತುಂಬಿ ಪ್ರವಾಹ ಸೃಷ್ಟಿಸಿದೆ. ವಿಶೇಷವಾಗಿ ತಾಳಗುಪ್ಪ ಹೋಬಳಿಯ ಸೈದೂರು ಮತ್ತು ಕಾನ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಸಾವಿರ ಎಕರೆಗೂ ಹೆಚ್ಚಿನ ಕೃಷಿ ಜಮೀನು ಜಲಾವೃತಗೊಂಡಿದೆ.

Advertisement

ಸೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಹೊಳೆಯ ಸೈದೂರು ಸೇತುವೆಯ ಮೇಲೆ ನೀರು ಉಕ್ಕಿ ರಭಸದಿಂದ ಹರಿಯುತ್ತಿರುವ ಪರಿಣಾಮ ಸಂಪರ್ಕ ಕೂಡ ಕಡಿತವಾಗಿದೆ.  ಈಗಾಗಲೇ ಬಿತ್ತನೆ ಮಾಡಿದ ಭತ್ತ, ಕಬ್ಬು, ಶುಂಠಿ ಬೆಳೆಗಳು ನೀರಿನಲ್ಲಿ ಸಂಪೂರ್ಣ ಮುಳುಗಿ ಹಾನಿ ಉಂಟಾಗಿದೆ.

ಅಧಿಕಾರಿಗಳು ತಕ್ಷಣ ಹಾನಿ ವರದಿ ಸಿದ್ಧಪಡಿಸಿ:
ಜಲಾವೃತ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಇಂದು ಬೇರೆ ಬೇರೆ ಹತ್ತು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ನೆರೆ ಬರುತ್ತದೆ ಎನ್ನುವುದರ ಅರಿವಿಲ್ಲದ ರೈತರು ಭತ್ತವೂ ಸೇರಿದಂತೆ ಕಬ್ಬು, ಶುಂಠಿ, ಅನಾನಸ್, ಜೋಳ ಮತ್ತಿತರ ಬೆಳೆ ಬೆಳೆದಿದ್ದರು. ಆದರೆ ನೆರೆಯಿಂದಾಗಿ ಕೊಳೆತು ಅಪಾರ ನಷ್ಟ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತಕ್ಷಣ ಗಮನಹರಿಸಿ ಸಕಾಲದಲ್ಲಿ ಅಧಿಕಾರಿಗಳ ಕಳಿಸಿ ಹಾನಿಯ ವರದಿ ಸಿದ್ಧಪಡಿಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದರು.

ಮಾಜಿ ಶಾಸಕ ಕುಮಾರ ಬಂಗಾರಪ್ಪ ಮಾತನಾಡಿ, ಈ ಭಾಗದ ಜನರು ವರ್ಷವೂ ನೆರೆಯಿಂದ ಸಂಕಷ್ಟಕ್ಕೆ ಒಳಗಾಗುತ್ತಿದ್ದು ಅದಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ಮಾಡಿಸಲಾಗಿತ್ತು. ನೀರನ್ನು ದಂಡಾವತಿ ಮತ್ತು ಮಾವಿನಹೊಳೆಗೆ ಪ್ರತ್ಯೇಕಿಸುವ ಯೋಜನೆ ಆಗಿದ್ದು ಹೀಗೆ ನೆರೆ ಇರುತ್ತಿರಲಿಲ್ಲ. ಆದರೆ ಈಗಿನ ರಾಜ್ಯ ಸರ್ಕಾರ ಹಣ ನೀಡಿಲ್ಲ. ಹಾಗಾಗಿ ಕೇಂದ್ರ ಸರ್ಕಾರಕ್ಕೆ ಸಂಸದರ ಮೂಲಕ ಮನವಿ ಮಾಡಲಾಗುತ್ತಿದೆ ಎಂದರು.
ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ದೇವೇಂದ್ರಪ್ಪ ಯಲಕುಂದ್ಲಿ, ಪ್ರಕಾಶ್ ತಲಕಾಲಕೊಪ್ಪ, ವೀರುಪಾಕ್ಷಪ್ಪ, ಜಿತೇಂದ್ರ ಮತ್ತು ಗ್ರಾಮಸ್ಥರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next