ಅಹ್ಮದಾಬಾದ್: ಗುಜರಾತ್‌ನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಕಳೆದ ಮೂರು ದಿನಗಳಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೆ ಪ್ರವಾಹ ಪೀಡಿತ ಪ್ರದೇಶಗಳಿಂದ ಸುಮಾರು 18,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿದ್ದು ಹವಾಮಾನ ಇಲಾಖೆಯು ಇಂದು (ಆಗಸ್ಟ್ 29) 11 ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.
ಮೃತರಲ್ಲಿ ಏಳು ಮಂದಿ ಮೋರ್ಬಿ ಜಿಲ್ಲೆಯ ಧವಾನಾ ಗ್ರಾಮದ ಬಳಿ ಉಕ್ಕಿ ಹರಿಯುತ್ತಿದ್ದ ನದಿಯನ್ನು ದಾಟುವ ವೇಳೆ ಟ್ರ್ಯಾಕ್ಟರ್-ಟ್ರಾಲಿ ಪ್ರವಾಹದಲ್ಲಿ ಕೊಚ್ಚಿಹೋಗಿ ಏಳು ಮಂದಿ ಸಾವನ್ನಪಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಕಳೆದ ಮೂರೂ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಉಂಟಾದ ಪ್ರವಾಹದಲ್ಲಿ ರಾಜ್‌ಕೋಟ್, ಆನಂದ್, ಮಹಿಸಾಗರ್, ಖೇಡಾ, ಅಹಮದಾಬಾದ್, ಮೊರ್ಬಿ, ಜುನಾಗಢ್ ಮತ್ತು ಭರೂಚ್ ಜಿಲ್ಲೆಗಳಲ್ಲಿ ಒಟ್ಟು ಇಪ್ಪತ್ತಾರು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (IMD) ಗುರುವಾರ(ಆಗಸ್ಟ್ 29) ಗುಜರಾತ್‌ನಾದ್ಯಂತ 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಉಳಿದ 22 ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದೆ.
ಕಚ್ಛ್, ದ್ವಾರಕಾ, ಜಾಮ್‌ನಗರ, ಮೊರ್ಬಿ, ಸುರೇಂದ್ರನಗರ, ಜುನಾಗಢ್, ರಾಜ್‌ಕೋಟ್, ಬೊಟಾಡ್, ಗಿರ್ ಸೋಮನಾಥ್, ಅಮ್ರೇಲಿ ಮತ್ತು ಭಾವನಗರ ಜಿಲ್ಲೆಗಳನ್ನು ಒಳಗೊಂಡಂತೆ ಕಚ್ಛ್ ಮತ್ತು ಸೌರಾಷ್ಟ್ರ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.