Advertisement
ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿದ ಅವರು, ಈ ಹಿಂದೆ ಇದ್ದ ಯಶಸ್ವಿನಿ, ಮುಖ್ಯಮಂತ್ರಿ ಹರೀಶ್ ಸಾಂತ್ವನ, ವಾಜಪೇಯಿ ಆರೋಗ್ಯಶ್ರೀ ಮತ್ತಿತರ ಆರೋಗ್ಯ ಕಾರ್ಯಕ್ರಮಗಳನ್ನು ವಿಲೀನಗೊಳಿಸಿ ರಾಜ್ಯ ಸರ್ಕಾರ ಕಳೆದ ವರ್ಷದ ಜೂನ್ 1 ರಿಂದ ಆರೋಗ್ಯ ಕರ್ನಾಟಕ ಯೋಜನೆಯನ್ನು ಪ್ರಾರಂಭಿಸಿತು. ಕೇಂದ್ರ ಸರ್ಕಾರವು ಇದೇ ಮಾದರಿಯಲ್ಲಿ ಆಯುಷ್ಮಾನ್ ಭಾರತ ಎಂಬ ಆರೋಗ್ಯ ಯೋಜನೆಯನ್ನು ಕಳೆದ ವರ್ಷ ಸೆ.23 ರಂದು ಜಾರಿಗೆ ತಂದಿತು.
Related Articles
Advertisement
ಶಿಫಾರಸು ಪಡೆಯಲೇಬೇಕು: ಆರೋಗ್ಯ ಕಾರ್ಡ್ ಹೊಂದಿರುವ ಫಲಾನುಭವಿಗಳು ಸರ್ಕಾರ ನಿಗದಿಪಡಿಸಿರುವ ಉಚಿತ ಹಾಗೂ ರಿಯಾಯ್ತಿ ದರದ ಚಿಕಿತ್ಸೆ ಪಡೆಯಬೇಕಾದರೆ ಮೊದಲು ಸರ್ಕಾರಿ ಆಸ್ಪತ್ರೆಯ ವೈದ್ಯರ ಬಳಿ ಬಂದು ಸಲಹೆ ಪಡೆಯಬೇಕು.
ಸಂಬಂಧಿಸಿದ ರೋಗಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಸೌಲಭ್ಯವಿದ್ದರೆ ಸರ್ಕಾರ ಗುರ್ತಿಸಿರುವ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಲು ಅವಕಾಶವಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯವಿಲ್ಲ ಎಂದು ಸಂಬಂಧಿಸಿದ ಸರ್ಕಾರಿ ಆಸ್ಪತ್ರೆಯ ವೈದ್ಯರು ಶಿಫಾರಸು ಮಾಡಿದರೆ ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಆರೋಗ್ಯ ಕಾರ್ಡಿನ ನಿಬಂಧನೆಗಳಿಗೆ ಒಳಪಟ್ಟು ಉಚಿತ ಅಥವಾ ರಿಯಾಯ್ತಿ ದರದ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.
ಹಾಸನದಲ್ಲಿ ಮಂಗಳಾ ಆಸ್ಪತ್ರೆ, ಜನಪ್ರಿಯ ಆಸ್ಪತ್ರೆ, ಮಂಜುನಾಥ ಆಸ್ಪತ್ರೆ, ಎಸ್‌ಎಸ್‌ಎಂ ಆಸ್ಪತ್ರೆ ಆರೋಗ್ಯ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ಆಯ್ಕೆಯಾಗಿವೆ. ಈ ಆಸ್ಪತ್ರೆಗಳಿಗೆ ರೋಗಿಗಳು ನೇರವಾಗಿ ಹೋಗಿ ಚಿಕಿತ್ಸೆ ಪಡೆದರೆ ಅಥವಾ ದಾಖಲಾದರೆ ಆರೋಗ್ಯ ಕಾರ್ಡ್‌ನಲ್ಲಿ ನಿಗದಿಪಡಿಸಿರುವ ಮೊತ್ತದ ಉಚಿತ ಆಥವಾ ರಿಯಾಯ್ತಿ ಚಿಕಿತ್ಸೆ ಸಿಗುವುದಿಲ್ಲ.
ಮೊದಲು ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಹೋಗಿ ಅಲ್ಲಿನ ವೈದ್ಯರು ರೋಗ ಪರೀಕ್ಷೆ ಮಾಡಿ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯವಿಲ್ಲವೆಂದು ಶಿಫಾರಸು ಪತ್ರ ಕೊಟ್ಟರೆ ಮಾತ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯಬಹುದಾಗಿದೆ ಎಂದು ವಿವರ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೆ.ಶಂಕರ್, ಹಾಸನ ವೈದ್ಯಕೀಯ ಕಾಲೇಜು ಆಡಳಿತಾಧಿಕಾರಿ ಕಲ್ಪಶ್ರೀ, ಸನಿವಾಸ ವೈದ್ಯ ಡಾ.ಕೃಷ್ಣಮೂರ್ತಿ, ಡಾ.ವೇಣುಗೋಪಾಲ್, ಡಾ.ಪ್ರವೀಣ್ ಅವರೂ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಆರೋಗ್ಯ ಕಾರ್ಡ್ ಸೌಲಭ್ಯಗಳು: ಆಯುಷ್ ಭಾರತ – ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿಸಿಕೊಳ್ಳುವ ಬಿಪಿಎಲ್ ಕಾರ್ಡ್ ಹೊಂದಿರುವ ಒಂದು ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ. ವರೆಗೆ, ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ 1.50 ಲಕ್ಷ ರೂ. ವರೆಗೂ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. 1,650 ರೋಗಗಳಿಗೆ ಆರೋಗ್ಯ ಕಾರ್ಡ್ ಹೊಂದಿರುವವರು ದೇಶದ ಯಾವುದೇ ಆಸ್ಪತ್ರೆಯಲ್ಲಿ ಸರ್ಕಾರ ನಿಗದಿಪಡಿಸಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಹೇಳಿದರು.
ಕಾರ್ಡ್ ವಿತರಣೆ ನಿರಂತರ: ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿರಂತರವಾಗಿ ಆರೋಗ್ಯ ಕಾರ್ಡ್ ವಿತರಿಸಲಾಗುತ್ತದೆ. ಹಾಗಾಗಿ ಸಾರ್ವಜನಿಕರು ನೂಕು ನುಗ್ಗಲಿನಲ್ಲಿ ಕಾರ್ಡ್ ಪಡೆಯುವ ಅಗತ್ಯವಿಲ್ಲ. ಪ್ರತಿದಿನ 200 ರಿಂದ 300 ಕಾರ್ಡ್ ವಿತರರಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ.
ತಾಲೂಕು ಆಸ್ಪತ್ರೆಗಳಲ್ಲೂ ಪಡೆಯಬಹುದಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಡ್ ವಿತರಣೆಗೆ ಡಾ.ಪ್ರವೀಣ್ ಅವರು ನೋಡಲ್ ಅಧಿಕಾರಿಯಾಗಿದ್ದು, ನಾಲ್ವರು ಗುಮಾಸ್ತರು, 10 ಡಾಟಾ ಎಂಟ್ರಿ ಆಪರೇಟರ್‌ಗಳು, 10 ಮಂದಿ ಆರೋಗ್ಯ ಮಿತ್ರ ಕಾರ್ಯಕರ್ತರು, 15 ಕಂಪ್ಯೂಟರ್, ಪ್ರಿಂಟರ್, ಸ್ಕಾನರ್‌ಗಳನ್ನು ಒದಗಿಸಲಾಗಿದೆ ಎಂದು ಡಾ.ಬಿ.ಸಿ.ರವಿಕುಮಾರ್ ತಿಳಿಸಿದರು.