Advertisement

Gram Panchayat ಆದಾಯಕ್ಕೆ ಟೆಲಿಕಾಂ ಕಂಪೆನಿಗಳಿಂದ ಕುತ್ತು

12:58 AM Jan 04, 2025 | Team Udayavani |

ಕುಂದಾಪುರ: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್‌ಗಳು ಮಾತ್ರವಲ್ಲದೆ, ರಾಜ್ಯವ್ಯಾಪಿ ಬಹುತೇಕ ಎಲ್ಲ ಗ್ರಾ.ಪಂ.ಗಳಿಗೂ ಟೆಲಿಕಾಂ (ಮೊಬೈಲ್‌ ಟವರ್‌) ಕಂಪೆನಿಗಳಿಂದ ವಾರ್ಷಿಕ ತೆರಿಗೆ ವಸೂಲಾತಿ ಸವಾಲಾಗಿ ಪರಿಣಮಿಸಿದೆ. ಕೆಲವು ಕಂಪೆನಿಗಳಂತೂ 8-10 ವರ್ಷಗಳಿಂದ ಬಾಕಿ ಇರಿಸಿಕೊಂಡಿದ್ದರೆ ಇನ್ನು ಕೆಲವು ಕಂಪೆನಿಗಳು ಒಂದೆರಡು ವರ್ಷಗಳಿಂದ ತೆರಿಗೆ ಪಾವತಿಸಿಲ್ಲ. ಉಡುಪಿಯಲ್ಲಿ ಒಟ್ಟು 32.90 ಲಕ್ಷ ರೂ.; ದ.ಕ. ಜಿಲ್ಲೆಯಲ್ಲಿ 65.43 ಲಕ್ಷ ರೂ. ತೆರಿಗೆ ಪಾವತಿ ಬಾಕಿಯಿದೆ. ಇದರಿಂದ ಗ್ರಾ.ಪಂ.ಗಳ ಆದಾಯಕ್ಕೆ ಹೊಡೆತ ಬಿದ್ದಿದೆ.

Advertisement

ಪ್ರತೀ ಗ್ರಾ.ಪಂ. ವ್ಯಾಪ್ತಿಯ ಲ್ಲಿರುವ ಮೊಬೈಲ್‌ ಟವರ್‌ ಸಂಸ್ಥೆಗಳು ಆ ಗ್ರಾ.ಪಂ.ಗೆ ವಾರ್ಷಿಕ 12 ಸಾವಿರ ರೂ. ತೆರಿಗೆ ಪಾವತಿಸಬೇಕು. ಆದರೆ ಇದು ನಿರಂತರವಾಗಿ ನಡೆಯುತ್ತಿಲ್ಲ. ಎಷ್ಟೋ ವರ್ಷಗಳಿಗೊಮ್ಮೆ ಈ ಕಂಪೆನಿಗಳು ಪಾವತಿಸು ತ್ತಿರುವುದರಿಂದ ಗ್ರಾ.ಪಂ.ಗಳ ಶತ ಪ್ರತಿಶತ ತೆರಿಗೆ ಸಂಗ್ರಹಕ್ಕೆ ಅಡ್ಡಿಯಾಗಿದೆ.

ಒಂದು ಕೋ. ರೂ. ಬಾಕಿ!
ಉಡುಪಿ ಜಿಲ್ಲೆಯಲ್ಲಿ 155 ಗ್ರಾ.ಪಂ.ಗಳಲ್ಲಿ ಇರುವ 306 ಟವರ್‌ಗಳಿಂದ 32,90,880 ರೂ. ಹಾಗೂ ದ.ಕ. ಜಿಲ್ಲೆಯಲ್ಲಿ 223 ಗ್ರಾ.ಪಂ.ಗಳಲ್ಲಿರುವ 616 ಟವರ್‌ಗಳಿಂದ 65,43,760 ರೂ. ತೆರಿಗೆ ಪಾವತಿ ಬಾಕಿಯಿದೆ. ಅಂದರೆ ಉಭಯ ಜಿಲ್ಲೆಗಳಲ್ಲಿ ಒಟ್ಟು ಸರಿಸುಮಾರು 1 ಕೋಟಿ ರೂ.ವರೆಗೆ ಟೆಲಿಕಾಂ ಕಂಪೆನಿಗಳು ತೆರಿಗೆ ಬಾಕಿ ಉಳಿಸಿಕೊಂಡಿವೆ.

ಬಿಸ್ಸೆನ್ನೆಲ್‌ನದ್ದೇ ಸಿಂಹಪಾಲು
ಗ್ರಾ.ಪಂ.ಗಳಿಗೆ ತೆರಿಗೆ ಬಾಕಿಯಲ್ಲಿ ಸರಕಾರದ ಅಧೀನದ ಬಿಸ್ಸೆನ್ನೆಲ್‌ನದ್ದೇ ಸಿಂಹಪಾಲು. ಬಹುತೇಕ ಗ್ರಾ.ಪಂ.ಗಳಿಗೆ ಬಿಸ್ಸೆನ್ನೆಲ್‌ ತೆರಿಗೆ 8-10 ವರ್ಷಗಳಿಂದ ಬಾಕಿಯಿದೆ. ಹೆಮ್ಮಾಡಿ ಗ್ರಾ.ಪಂ.ಗೆ 2015-16ರಿಂದೀಚೆಗೆ ಬಿಸ್ಸೆನ್ನೆಲ್‌ನವರು ತೆರಿಗೆ ಕಟ್ಟಿಲ್ಲ. ವಾರ್ಷಿಕ 12 ಸಾವಿರ ರೂ.ಗಳಂತೆ ಒಟ್ಟು 1.20 ಲಕ್ಷ ರೂ. ಬಾಕಿಯಿದೆ. ಏರ್‌ಟೆಲ್‌ 2015-16ರಿಂದ ಬಾಕಿ ಇರಿಸಿಕೊಂಡಿದ್ದು, ಕಳೆದ ವರ್ಷ ನೋಟಿಸ್‌ ನೀಡಿದ ಬಳಿಕ 20 ಸಾವಿರ ರೂ. ಪಾವತಿಸಿದೆ; ಇನ್ನೂ 1 ಲಕ್ಷ ರೂ. ಬಾಕಿಯಿದೆ. ರಿಲಯನ್ಸ್‌ನವರದು 2019ರಿಂದ 72 ಸಾವಿರ ರೂ. ಬಾಕಿಯಿದೆ. ಇದು ಒಂದು ಉದಾಹರಣೆ ಮಾತ್ರ.

ಗ್ರಾಮ ಆರ್ಥಿಕತೆಗೆ ಹೊಡೆತ
ಗ್ರಾ.ಪಂ.ಗಳ ಅಭಿವೃದ್ಧಿ ಕಾಮಗಾರಿ, ನಿರ್ವಹಣೆಗೆ ಸರಕಾರದ ಶಾಶ್ವತ ಅನು
ದಾನ, ಇತರ ಯೋಜನೆಗಳ ಮೂಲದ ಅನುದಾನ ಮಾತ್ರವಲ್ಲದೆ ಸ್ಥಳೀಯ ತೆರಿಗೆ ಸಂಗ್ರಹವೂ ಮಹತ್ವದ್ದಾಗಿದೆ. ಆದರೆ ಬಹುತೇಕ ಟೆಲಿಕಾಂ ಕಂಪೆನಿಗಳ ತೆರಿಗೆ ಬಾಕಿಯಿಂದ ಗ್ರಾ.ಪಂ.ಗಳು ಆರ್ಥಿಕ ಚೈತನ್ಯವನ್ನೇ ಕಳೆದುಕೊಳ್ಳುವಂತಾಗಿದೆ. ಅಭಿವೃದ್ಧಿಗೆ ಕೆಲಸಗಳಿಗೂ ಹಿನ್ನಡೆಯಾಗುತ್ತಿದೆ. ಸಮರ್ಪಕ ತೆರಿಗೆ ಪಾವತಿಯಾ ಗದೆ, ಸಂಪನ್ಮೂಲ ಕ್ರೋಡೀಕರಣವಾಗದೆ, ಆರ್ಥಿಕ ಸ್ವಾವಲಂಬನೆಗೂ ಹೊಡೆತ ಬೀಳುತ್ತಿದೆ.

Advertisement

ಟೆಲಿಕಾಂ ಕಂಪೆನಿಗಳು ಗ್ರಾಹಕರಿಗೆ ಹೊರೆಯಾದರೂ ಸಹಿತ ನಿರಂತರವಾಗಿ ದರ ಏರಿಸುತ್ತಲೇ ಕೋಟ್ಯಂತರ ರೂ. ಲಾಭ ಮಾಡಿಕೊಳ್ಳುತ್ತಿವೆ. ಆದರೆ ಗ್ರಾ.ಪಂ.ಗಳಿಗೆ ಸಾವಿರ ರೂ. ಲೆಕ್ಕದಲ್ಲಿ ತೆರಿಗೆ ರೂಪದಲ್ಲಿ ಕೊಡಲು ಮೀನಾಮೇಷ ಎಣಿಸುತ್ತಿವೆ. ಇದರಿಂದ ಗ್ರಾ.ಪಂ.ಗಳ ಆದಾಯಕ್ಕೆ ಹೊಡೆತ ಬೀಳುತ್ತಿದೆ. ಶೇ.100 ರಷ್ಟು ತೆರಿಗೆ ಸಂಗ್ರಹ ಸಾಧ್ಯವಾಗುತ್ತಿಲ್ಲ. ಗ್ರಾ.ಪಂ. ಕೊಡುವ ನೋಟಿಸ್‌ಗೆ ಬೆಲೆಯೇ ಇಲ್ಲ. ಈ ಬಗ್ಗೆ ತಾ.ಪಂ., ಜಿ.ಪಂ.ನವರು ಜವಾಬ್ದಾರಿ ತೆಗೆದುಕೊಂಡು, ತೆರಿಗೆ ಪಾವತಿಸುವಂತೆ ಮಾಡಬೇಕು.
– ಯು. ಸತ್ಯನಾರಾಯಣ ರಾವ್‌, ಮಾಜಿ ಅಧ್ಯಕ್ಷ, ಹೆಮ್ಮಾಡಿ ಗ್ರಾ.ಪಂ.

ನಮ್ಮಲ್ಲಿ ಗ್ರಾ.ಪಂ.ನಿಂದ ಈಗಾಗಲೇ ನೋಟಿಸ್‌ ಕೊಟ್ಟಿದ್ದಾರೆ. ಗ್ರಾಮ ಸ್ವರಾಜ್‌, ಪಂಚಾಯತ್‌ ರಾಜ್‌ ಕಾಯ್ದೆಯ ಅನ್ವಯ ತೆರಿಗೆ ವಸೂಲಾತಿ ಬಗ್ಗೆಯೇ 65-70 ಸೆಕ್ಷನ್‌ಗಳಿದ್ದು, ನೇರವಾಗಿ ನೋಟಿಸ್‌ ಕೊಟ್ಟು 30 ದಿನಗಳ ಅನಂತರವೂ ಪಾವತಿಯಾಗದೆ ಇದ್ದರೆ, ಅವರ ಚರ ಸೊತ್ತು ಜಪ್ತಿ ಮಾಡಬಹುದು. ಈ ಅಧಿಕಾರ ಗ್ರಾ.ಪಂ.ಗೆ ಇದೆ. ಈ ಬಗ್ಗೆ ತಾ.ಪಂ. ಇಒಗಳು ಮಾಹಿತಿ ಪಡೆದಿದ್ದಾರೆ. ಚರ ಆಸ್ತಿ ಜಪ್ತಿಗೆ ನಿರ್ದೇಶನ ನೀಡಲಾಗಿದೆ.
– ಪ್ರತೀಕ್‌ ಬಾಯಲ್‌, ಉಡುಪಿ ಜಿ.ಪಂ. ಸಿಇಒ

ಕೆಲವು ತಾಲೂಕುಗಳಲ್ಲಿ ಸೂಕ್ತ ರೀತಿಯಲ್ಲಿ ವಸೂಲಾತಿ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲ ಟೆಲಿಕಾಂ ಸಂಸ್ಥೆಗಳಿಂದ ಸರಿಯಾದ ರೀತಿಯಲ್ಲಿ ತೆರಿಗೆ ವಸೂಲಾತಿಗೆ ಸೂಚನೆ ನೀಡಲಾಗಿದೆ. ಇಲ್ಲದಿದ್ದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.
– ಆನಂದ್‌, ಜಿ.ಪಂ. ಸಿಇಒ ದ.ಕ.

* ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next