ಬೆಂಗಳೂರು: ಪಾಲಿಕೆಯ ಆರೋಗ್ಯ ಕೇಂದ್ರಗಳನ್ನು “ಬಿಬಿಎಂಪಿ ಹೆಲ್ತ್ಕೇರ್ʼ ಯೋಜನೆಯ ಮೂಲಕ ಅಭಿವೃದ್ಧಿ ಪಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಈ ಸಂಬಂಧ ಪಾಲಿಕೆ ಕೇಂದ್ರ ಕಚೇರಿಯಲ್ಲಿನ ಬಿಬಿಎಂಪಿ ಆರೋಗ್ಯಾಧಿಕಾರಿಗಳ ಜತೆ ಸಭೆ ನಡೆಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿ, “ಬಿಬಿಎಂಪಿ ಹೆಲ್ತ್ ಕೇರ್’ ಯೋಜನೆಯಡಿ ಬಿಬಿಎಂಪಿ ಆರೋಗ್ಯ ಕೇಂದ್ರಗಳಲ್ಲಿ ಔಷಧ, ಕಾಯಿಲೆಗಳ ಪತ್ತೆ, ಲ್ಯಾಬ್ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದರು.
ಬಿಬಿಎಂಪಿ “ಹೆಲ್ತ್ ಕೇರ್’ ಪರಿಪೂರ್ಣ ಆರೋಗ್ಯ ವ್ಯವಸ್ಥೆಯಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳು 24/7 ತೆರದಿರುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಟೆಲಿ ಮೆಡಿಸನ್, ಟೆಲಿ ಕನ್ಸಲ್ಟೆಷನ್ ಸೌಲಭ್ಯ ಹಾಗೂ ನರ್ಸ್‌ಗಳು ಎಲ್ಲ ಸಮಯದಲ್ಲೂ ಕೆಲಸ ನಿರ್ವಹಿಸುವಂತಿರಬೇಕು. 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತವಾಗಿ ಔಷಧ ಒದಗಿಸಲಾಗುವುದು. ಅಲ್ಲದೆ, ಎಲ್ಲ ಕೇಂದ್ರಗಳಲ್ಲಿ ತಜ್ಞ ವೈದ್ಯರು ನೇಮಕ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಬಿಬಿಎಂಪಿ ವ್ಯಾಪ್ತಿಯಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ಔಷಧ ಖಾಲಿಯಾಗಿದೆ ಎಂದು ರೋಗಿಗಳನ್ನು ಹಿಂದಕ್ಕೆ ಕಳುಹಿಸುವಂತಿಲ್ಲ.
ನಗರದಲ್ಲಿ 133 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಎಲ್ಲೆಡೆ ಜನ ಔಷಧ ಕೇಂದ್ರಗಳನ್ನು ತೆರೆಯುವಂತೆ ಸೂಚನೆ ನೀಡಲಾಗಿದೆ. ಇದೇ ವೇಳೆ ಮನೆ- ಮನೆಗೆ ತೆರಳಿ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಪ್ರತಿ ವ್ಯಕ್ತಿಯ ಆರೋಗ್ಯ ವಿವರಗಳನ್ನುಸರ್ಮಪಕವಾಗಿ ಸಂಗ್ರಹಿಸುವಂತೆ ನಿರ್ದೇಶನ ನೀಡಲಾಗಿದೆ. ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸಿಬ್ಬಂದಿ ಹೆಚ್ಚಳ, ಮೂಲ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿನಲ್ಲಿಯೂ ಅಧಿಕಾರಿಗಳಿಂದ ಡಿಸಿಎಂ ಅಶ್ವತ್ಥನಾರಾಯಣ ಚರ್ಚೆ ನಡೆಸಿದರು. ಸಭೆಯಲ್ಲಿ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು, ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಇತರರಿದ್ದರು.
ಆಸ್ಪತ್ರೆಯ ನರ್ಸ್‌ಗೆ ಸೋಂಕು: ವಿಕ್ಟೋರಿಯಾ ಆಸ್ಪತ್ರೆಯ ನರ್ಸ್ ಹಾಗೂ ದೇಶದಿಂದ ವಾಪಸ್ ಬಂದ ಪ್ರಯಾಣಿಕರೊಬ್ಬರಲ್ಲಿ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದ್ದು, ನಗರದಲ್ಲಿ ಸೋಂಕಿತ ಸಂಖ್ಯೆ 189ಕ್ಕೆ ಏರಿಕೆಯಾಗಿದೆ. ವಿದೇಶದಿಂದ ಬಂದ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಒಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ನರ್ಸ್‌ವೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ನಗರದಲ್ಲಿ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ದೃಢಪಟ್ಟವರಲ್ಲಿ ಇವರು ಎರಡನೆಯವರಾಗಿದ್ದಾರೆ.
ಇಲ್ಲಿನ ಎಲ್ಲ ಸಿಬ್ಬಂದಿಗಳು 14 ದಿನ ಸೇವೆ ಮಾಡುತ್ತಿದ್ದು, ಇನ್ನು 14 ದಿನ ಸ್ವಯಂ ಕ್ವಾರಂಟೈನ್ ಆಗುತ್ತಿದ್ದಾರೆ. ಈ ವೇಳೆ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ. ಇನ್ನು ಹೊಂಗಸಂದ್ರದಲ್ಲಿ ಮಂಗಳವಾರ ಸೋಂಕು ದೃಢಪಟ್ಟ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ 21ಜನ ಪ್ರಾಥಮಿಕ ಸಂಪರ್ಕಿತರು ಹಾಗೂ 14 ಜನ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ, ಹೊಂಗಸಂದ್ರದಲ್ಲಿ ಕೊರೊನಾ ಸೋಂಕು ದೃಢಪಟ್ಟ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ 186 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಇವರಿಗೆ ಊಟದ ಹಾಗೂ ವಸತಿ ಚಾರದಲ್ಲಿ ಯಾವುದೇ ಲೋಪವಾಗಿಲ್ಲ. ಗುರುವಾರ ರೈಲಿನಲ್ಲಿ ಬಿಹಾರ ಅಥವಾ ಅವರ ಊರಿಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.