Advertisement

ಗರ್ಭಕೋಶ ತೆಗೆಸಿಕೊಂಡವರ ಕಣ್ಣೀರ ಕಥೆ; ಆರೋಗ್ಯ ಸಮಸ್ಯೆಯಿಂದ ಕಂಗಾಲು

10:57 AM Apr 19, 2022 | Team Udayavani |

ಬೆಂಗಳೂರು: ನಾಲ್ಕೈದು ವರ್ಷಗಳ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಕೆಲವು ಸರಕಾರಿ ವೈದ್ಯರು ಹೊಟ್ಟೆನೋವು ಎಂದು ಆಸ್ಪತ್ರೆಗೆ ಬಂದ ಮಹಿಳೆಯರ ಗರ್ಭಕೋಶಗಳನ್ನು ಹಣದಾಸೆಗಾಗಿ ತೆಗೆದಿದ್ದ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಂದು ಗರ್ಭಕೋಶ ಕಳೆದುಕೊಂಡ ಮಹಿಳೆಯರು ಇಂದು ಬೀದಿಪಾಲಾಗಿದ್ದಾರೆ.

Advertisement

ಕಲಬುರಗಿ, ಹಾವೇರಿ, ಬೀದರ್‌, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಶೇ.40ರಷ್ಟು ಬಡ ಹಾಗೂ ಲಂಬಾಣಿ ಹೆಣ್ಣುಮಕ್ಕಳಲ್ಲಿ ಗರ್ಭಕೋಶವೇ ಇಲ್ಲದಂತಾಗಿದೆ. ಅಲ್ಲದೆ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗದೆ ನಾನಾ ಆರೋಗ್ಯ ಸಮಸ್ಯೆಯನ್ನೂ ಅವರು ಎದುರಿಸುತ್ತಿದ್ದು, ಚಿಕಿತ್ಸೆಗೂ ಹಣವಿಲ್ಲದೆ ಪರದಾಡುತ್ತಿದ್ದಾರೆ. ಈ ಪೈಕಿ 40 ವರ್ಷದೊಳಗಿನ ಮಹಿಳೆಯರೇ ಹೆಚ್ಚು.

ಗರ್ಭಕೋಶ ತೆಗೆಸಿಕೊಂಡ ಈ ಮಹಿಳೆಯರಿಗೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ನೀರು ತುಂಬಿದ ಬಿಂದಿಗೆ ಎತ್ತಲಾಗದಷ್ಟು ನಿಶ್ಶಕ್ತಿ, ಕೂದಲು ಉದುರುವುದು, ಸೊಂಟ ನೋವು, ನರ ದೌರ್ಬಲ್ಯ, ಬೆನ್ನು ನೋವು ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂಥವರಿಗೆ ಸರಕಾರವು ಸ್ವ-ಉದ್ಯೋಗ ಅಥವಾ ಪ್ಯಾಕೇಜ್‌ ರೂಪದಲ್ಲಿ ಸಹಾಯಧನ ಘೋಷಿಸಬೇಕೆಂದು ಮಹಿಳಾ ಸಂಘಟನೆಗಳು ಆಗ್ರಹಿಸಿವೆ.

ಇದನ್ನೂ ಓದಿ:ಜಹಾಂಗೀರ್ ಪುರಿ ಹಿಂಸಾಚಾರ : ದೆಹಲಿ ಪೊಲೀಸರಿಗೆ ಓವೈಸಿ ಗಂಭೀರ ಪ್ರಶ್ನೆ

ಏನಾಗಿತ್ತು?
ಮುಗ್ಧ, ಅವಿದ್ಯಾವಂತ ಕೂಲಿ ಕಾರ್ಮಿಕ ಹೆಣ್ಣುಮಕ್ಕಳು ಹೊಟ್ಟೆ ನೋವು, ಮುಟ್ಟು ಸಮಸ್ಯೆ, ಬಿಳಿ ಮುಟ್ಟು, ಉರಿಮೂತ್ರದಂಥ ಸಹಜ ಸಮಸ್ಯೆಗಳ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದರು. ಇವರಿಗೆ ಕೆಲವು ಕಡೆ ಸ್ಕ್ಯಾನಿಂಗ್‌ ಮಾಡಿದರೆ, ಇನ್ನೂ ಕೆಲವೆಡೆ ಸ್ಕ್ಯಾನಿಂಗ್‌ ಮಾಡದೇ ಗರ್ಭ ಊತ, ಅಪೆಂಡಿಕ್ಸ್‌, ಗರ್ಭ ಕ್ಯಾನ್ಸರ್‌, ಗರ್ಭ ಚೀಲದ ಮೇಲೆ ಗುಳ್ಳೆಯಾಗಿದೆ, ಪ್ರಾಣಕ್ಕೆ ಅಪಾಯವೆಂದು ಭಯ ಪಡಿಸಿ, ಹೆಣ್ಣುಮಕ್ಕಳ ಗರ್ಭಕೋಶವನ್ನು ತೆಗೆಯಲಾಗಿತ್ತು.

Advertisement

ಬಡವರು ಅಥವಾ ದಲಿತರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ, ಸರಕಾರದಿಂದ 1.50ರಿಂದ 2 ಲಕ್ಷ ರೂ. ಸಹಾಯಧನ ಬರುತ್ತದೆ. ಇದರ ಬಗ್ಗೆ ಈ ಲಂಬಾಣಿ ಜನಾಂಗದ ಹೆಣ್ಣುಮಕ್ಕಳಿಗೆ ಯಾವ ಮಾಹಿತಿಯೂ ಇರಲಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 20 ವರ್ಷದವರನ್ನು 40 ವರ್ಷವೆಂದು ದಾಖಲೆಗಳಲ್ಲಿ ನಮೂದಿಸಿ, ವೈದ್ಯರು ಹಣ ದೋಚಿದ್ದಾರೆ ಎಂದೂ ಹೇಳಲಾಗಿದೆ.

ಅನಾವಶ್ಯಕವಾಗಿ ಗರ್ಭಕೋಶ ತೆಗೆಯು ವುದು ಅಪರಾಧ. ಅಂಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ಎಚ್ಚರ ವಹಿಸುತ್ತೇವೆ.
– ರಣದೀಪ್‌, ಆಯುಕ್ತ, ಆರೋಗ್ಯ ಇಲಾಖೆ

ಉತ್ತರ ಕರ್ನಾಟಕದಲ್ಲಿ ಗರ್ಭಕೋಶ ತೆಗೆಯುವ ಪ್ರಕರಣ ಹೆಚ್ಚು. ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯಿಂದ ಇಂಥ ಕೃತ್ಯಗಳು ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಯಿದೆ. ಆದ್ದರಿಂದ ಮುಖ್ಯಮಂತ್ರಿಗಳು ಈ ಯೋಜನೆ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು.
– ನಾಗಲಕ್ಷ್ಮೀ ಬಾಯಿ, ಮಾಜಿ ಅಧ್ಯಕ್ಷೆ, ಮಹಿಳಾ ಆಯೋಗ

– ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next