Advertisement

ಲಾಕ್‌ಡೌನ್‌ ಬಗ್ಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ತೀರ್ಮಾನ: ಡಾ. ಸುಧಾಕರ್‌

07:29 PM May 31, 2021 | Team Udayavani |

ಬೆಂಗಳೂರು: ಲಾಕ್‌ ಡೌನ್‌ ಕುರಿತು ರಾಜ್ಯ ಸರ್ಕಾರ ವೈಜ್ಞಾನಿಕ ನೆಲೆಗಟ್ಟಿನಲ್ಲಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಈ ಕುರಿತು ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

Advertisement

ಸೋಮವಾರ ಸುದ್ದಗಾರರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳು ಜನರ ಜೀವನವನ್ನು ಬಹಳ ಹತ್ತಿರದಿಂದ ನೋಡುತ್ತಾರೆ. ಜನರ ಭಾವನೆಗಳಿಗೆ ಸ್ಪಂದಿಸಲು ಕೆಲ ಜನಪ್ರತಿನಿಧಿಗಳು ಲಾಕ್‌ ಡೌನ್‌ ಬಗ್ಗೆ ಹೇಳಿಕೆ ನೀಡಬಹುದು. ಆದರೆ, ಸರ್ಕಾರ ವೈಜ್ಞಾನಿಕ ನೆಲೆಗಟ್ಟಿನಲ್ಲೇ ಲಾಕ್‌ ಡೌನ್‌ ಕುರಿತು ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದರು.

ಲಾಕ್‌ ಡೌನ್‌ ಗೆ ಸಂಬಂಧಿಸಿದಂತೆ ತಜ್ಞರು ವರದಿ ಸಲ್ಲಿಸಲಿದ್ದಾರೆ. ಇದನ್ನು ಮುಖ್ಯಮಂತ್ರಿಗಳಿಗೆ ನೀಡಿ ಚರ್ಚಿಸಲಾಗುವುದು. ನಂತರ ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಇದನ್ನೂ ಓದಿ :ಕೋವಿಡ್ 19 : ಅಗತ್ಯ ವಸ್ತುಗಳ ಖರೀದಿಗೆ ಭಾರಿ ಜನಸ್ತೋಮ : ವೀಡಿಯೋ ವೈರಲ್

ಲಾಕ್‌ ಡೌನ್‌ ಎನ್ನುವುದು ವೈದ್ಯಕೀಯ ಸಂಗತಿ. ಪ್ರಕರಣಗಳ ಸಂಖ್ಯೆ ಹೆಚ್ಚಾದಾಗ ಎಷ್ಟೆಲ್ಲ ಸಾವು ನೋವುಗಳಾಗಿದೆ ಎಂಬುದನ್ನು ಅರಿಯಬೇಕು. ಇದು ಸಾಂಕ್ರಾಮಿಕವಾಗಿರುವುದರಿಂದ ಬಹಳ ಎಚ್ಚರಿಕೆ ಬೇಕು. ಲಾಕ್‌ ಡೌನ್‌ ಅನ್ನು ತಾಂತ್ರಿಕವಾಗಿ ಅರ್ಥ ಮಾಡಿಕೊಳ್ಳದೆ, ವೈದ್ಯಕೀಯ ವಲಯದ ಪರಿಣತರ ಅಭಿಪ್ರಾಯ ಪಡೆಯದೆ ಅದರ ಬಗ್ಗೆ ಮಾತನಾಡುವುದು ಅಪ್ರಸ್ತುತ ಎಂದರು.

Advertisement

ಕೋವಿಡ್‌ ಸಂಬಂಧಿ ಕಾರ್ಯನಿರ್ವಹಿಸುವವರಿಗೆ ರಿಸ್ಕ್ ಭತ್ಯೆ ನೀಡಲಾಗುತ್ತಿದೆ. ಯಾವುದೇ ಸಿಬ್ಬಂದಿ ಕೋವಿಡ್‌ ಸಂಬಂಧಿ ಕೆಲಸ ಮಾಡಿ ಭತ್ಯೆ ನೀಡಿಲ್ಲವೆಂದರೆ ಪರಾಮರ್ಶಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ರಾಜಕೀಯದ ಬಗ್ಗೆ ಮಾತನಾಡುವುದೇ ಅಪ್ರಸ್ತುತ. ಮುಖ್ಯಮಂತ್ರಿ ಕುರ್ಚಿ ಖಾಲಿಯೇ ಇಲ್ಲದಿರುವಾಗ ಆ ಬಗ್ಗೆ ಮಾತನಾಡುವುದೇ ಅಸಂಬದ್ಧ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿಬ್ಬಂದಿ ನಿಯೋಜನೆ:
ಬೆಂಗಳೂರಿನಲ್ಲಿ ಕೊರೊನಾ ನಿರ್ವಹಣೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಅಗತ್ಯ ಮಾನವ ಸಂಪನ್ಮೂಲವನ್ನು ಒದಗಿಸಿದ್ದು, ಇದರಿಂದಾಗಿ ಕೊರೊನಾ ನಿರ್ವಹಣೆಗೆ ಚುರುಕು ದೊರೆತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 12,354 ಮೆಡಿಕಲ್, ದಂತವೈದ್ಯ, ಆಯುಷ್‌ ವಿದ್ಯಾರ್ಥಿಗಳಿಗೆ ಹೋಮ್‌ ಐಸೋಲೇಶನ್‌ ಗಾಗಿ ತರಬೇತಿ ನೀಡಿ ನಿಯೋಜಿಸಲಾಗಿದೆ. ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ 250 ಆಯುಷ್‌ ಹಾಗೂ ಅಲೋಪಥಿ ವೈದ್ಯರು, ಶುಶ್ರೂಷಕರನ್ನು ನಿಯೋಜಿಸಲಾಗಿದೆ. ಟ್ರಯಾಜಿಂಗ್‌ ಕೇಂದ್ರಗಳಲ್ಲಿ 300 ಇಂಟರ್ನಿಗಳು, 300 ಶುಶ್ರೂಷಕರನ್ನು ನೇಮಿಸಲಾಗಿದೆ. ಹೋಮ್‌ ಐಸೋಲೇಶನ್‌ಗಾಗಿ 5,737 ವೈದ್ಯ ವಿದ್ಯಾರ್ಥಿಗಳನ್ನು ನಿಯೋಜಿಸಿದ್ದು, ಇವರು 1,456 ದೂರವಾಣಿ ಕರೆಗಳನ್ನು ಮಾಡಿ ನಿರ್ವಹಿಸಿದ್ದಾರೆ. 241 ವೈದ್ಯರು ಹಾಗೂ ತಜ್ಞರು 1,428 ದೂರವಾಣಿ ಕರೆ ಮಾಡಿ, ರೋಗಿಗಳ ಆರೋಗ್ಯ ತಪಾಸಣೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ 40 ನರ್ಸಿಂಗ್‌ ವಿದ್ಯಾರ್ಥಿಗಳು, ಚಿಕ್ಕಬಳ್ಳಾಪುರದಲ್ಲಿ 10 ಇಂಟರ್ನಿಗಳು ಈ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next