ಶಹಾಪುರ: ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಂದು ಜೀವಿಗೂ ನಾನಾರೋಗ ಬಾಧೆಗಳು ಉಂಟಾಗುವುದು ಸಾಮಾನ್ಯವಾಗಿದೆ. ಅವುಗಳನ್ನು ಯಾವ ರೀತಿಯಾಗಿ ನಿರ್ವಹಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಜಾಗೃತವಾಗಿದ್ದಾಗ ಆರೋಗ್ಯಕರ ಜೀವನದಿಂದ ನೆಮ್ಮದಿ ಬದುಕು ಸಾಧ್ಯ ಎಂದು ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ| ಭಗವಂತ ಅನವಾರ ಹೇಳಿದರು.
ನಗರದ ಜೀವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕು ಮಟ್ಟದ ಆರೋಗ್ಯ ಮೇಳದಲ್ಲಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಆರೋಗ್ಯ ರಕ್ಷಣೆಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದರೂ ಜನರು ಇನ್ನೂ ಎಚ್ಚೆತ್ತುಕೊಳ್ಳಬೇಕಿದೆ. ಇದರಿಂದ ಆರೋಗ್ಯ ಪರೀಕ್ಷೆಗೆ ಒಳಪಟ್ಟು ಅದಕ್ಕೆ ತಕ್ಕಂತೆ ಸೂಕ್ತ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ. ಅಲ್ಲದೆ ಇಂತಹ ಮೇಳಗಳು ಗ್ರಾಮೀಣ ಭಾಗದಲ್ಲೂ ಆಯೋಜಿಸಬೇಕಿದೆ ಎಂದರು.
ಅಲ್ಲದೆ ಆಯುಷ್ಮಾನ್ ಭಾರತ ಯೋಜನೆಯಡಿ ಒಂದರಿಂದ ಐದು ಲಕ್ಷದವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಒದಗಿಸಲಾಗಿದೆ. ಸರ್ವರೂ ಆಯುಷ್ಮಾನ ಭಾರತದಡಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದರು.
ಮೇಳವನ್ನು ನಗರಸಭೆ ಅಧ್ಯಕ್ಷೆ ಕಮಲಾಬಾಯಿ ಚಂದ್ರಶೇಖರ ಲಿಂಗದಳ್ಳಿ ಉದ್ಘಾಟಿಸಿದರು. ಮುಖ್ಯ ಅತಿಥಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಲಕ್ಷ್ಮಿಕಾಂತ, ನಗರ ಪ್ರಾಧಿಕಾರ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ, ನಗರಸಭೆ ಪೌರಾಯುಕ್ತ ಓಂಕಾರ ಪೂಜಾರಿ, ಡಾ| ಯಲ್ಲಪ್ಪ ಪಾಟೀಲ್, ಡಾ| ವೆಂಕಟೇಶ ಬೈರಾಮಡಗಿ, ಡಾ| ಜಗದೀಶ, ಡಾ| ಅರುಣಕುಮಾರ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ರಾಹುತಪ್ಪ ಹವಾಲ್ದಾರ, ಡಾ| ರತ್ನಾ, ಡಾ| ಬಸವರಾಜ, ಡಾ| ಜಮುನಾ, ಡಾ| ಹನುಮಂತರಡ್ಡಿ, ಡಾ| ಭೀಮನಗೌಡ ಉಪಸ್ಥಿತರಿದ್ದರು. ಟಿಎಚ್‌ಒ ಡಾ| ರಮೇಶ ಗುತ್ತೇದಾರ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸಹಾಯಕ ಮಲ್ಲೇಶಿ ಕುರುಕುಂದಿ, ಶರಣು ಹೊಸಮನಿ, ಸಂಗಣ್ಣ ನುಚ್ಚಿನ್, ಮಲ್ಲಪ್ಪ ಕಾಂಬಳೆ, ತಾಪಂ ಸಹಾಯಕ ನಿರ್ದೇಶಕ ಭೀಮನಗೌಡ ಬಿರಾದಾರ ಇದ್ದರು. ಮೇಳದಲ್ಲಿ ಹಳ್ಳಿಯಿಂದ ಜನರು ತಮ್ಮ ಆರೋಗ್ಯ ಕುರಿತು ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಂಡರು.