ಉಡುಪಿ: ಕೋವಿಡ್ ಎರಡನೇ ಅಲೆಯ ತೀವ್ರತೆ ಹೆಚ್ಚುತ್ತಿರುವ ಈ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗಿಂತ ಆರೋಗ್ಯವೇ ಮುಖ್ಯ. ತೀರಾ ಅವಶ್ಯವಾಗಿರುವ ಧಾರ್ಮಿಕ ಕಾರ್ಯಕ್ರಮವನ್ನು ಸರಳವಾಗಿ ಪೂರೈಸೋಣ. ನೂರಾರು ಜನ ಸೇರುವ ಕಾರ್ಯಕ್ರಮವನ್ನು ಮುಂದೆ ಹಾಕುವುದೇ ಉತ್ತಮ ಎಂದು ಪೇಜಾವರ ಮಠಾಧೀಶರು ಹಾಗೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ತರಾಗಿರುವ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಧರ್ಮದಲ್ಲೊಂದು ಮಾತಿದೆ. ಮೊದಲು ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ನಾವು ಬದುಕಿದರೆ ಏನಾದರೂ ಸಾಧಿಸಬಹುದೆನ್ನದಾಗಿದೆ. ಹಾಗಾಗಿ ನಮ್ಮ ಆರೋಗ್ಯದ ಕಡೆಗೆ ಮೊದಲು ಗಮನ ಹರಿಸಿ ಜಾಗೃತಿ ವಹಿಸಬೇಕು.
ಮುನ್ನೆಚ್ಚರಿಕೆ ಪಾಲಿಸಿ :
ಜನರ ಅಸಡ್ಡೆಯೇ ಕೋವಿಡ್ ಎರಡನೇ ಅಲೆಗೆ ಕಾರಣ. ನಾವು ಇನ್ನಷ್ಟು ಅಸಡ್ಡೆ ತೋರಿದರೆ ಸೋಂಕು ಮತ್ತಷ್ಟು ಬೆಳೆಯುತ್ತದೆ. ಈ ಸೋಂಕನ್ನು ನಿಲ್ಲಿಸಬೇಕಾದರೆ ನಾವೆಲ್ಲ ಆರೋಗ್ಯ ಇಲಾಖೆ ಸೂಚಿಸಿದ ಮಾರ್ಗಸೂಚಿ ಪಾಲಿಸಬೇಕು. ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು ಎಂದರು.
ಚೆಕ್‌ಬೌನ್ಸ್: ಸ್ಪಷ್ಟನೆ :
ಶ್ರೀರಾಮ ಮಂದಿರಕ್ಕೆ ದೇಣಿಗೆಯಾಗಿ ಬಂದ ಕೆಲವು ಚೆಕ್‌ಗಳು ಬೌನ್ಸ್ ಆಗಿರುವುದಕ್ಕೆ ಸ್ಪಷ್ಟನೆ ನೀಡಿದ ಶ್ರೀಗಳು, ಅನೇಕ ಕಾರಣಗಳಿಂದ ವ್ಯವಹಾರದಲ್ಲಿ ಇದು ಸಾಮಾನ್ಯ. ಯಾರ ಚೆಕ್‌ಬೌನ್ಸ್ ಆಗಿದೆಯೋ ಅವರು ತಿಳಿದಾಕ್ಷಣವೇ ಹಣವನ್ನು ಮರುಕಾಣಿಕೆ ರೂಪದಲ್ಲಿ ನೀಡುತ್ತಿದ್ದಾರೆ ಎಂದರು.