Advertisement

ಕುವೈಟ್‌ನಲ್ಲಿ 15 ವರ್ಷ ದುಡಿದು ಬರಿಗೈಯಲ್ಲಿ ಬಂದರು

11:12 AM Feb 07, 2018 | Team Udayavani |

ಏಳಿಂಜೆ : ಕುವೈಟ್‌ನಲ್ಲಿ ಕ್ಯಾಟರಿಂಗ್‌ ನಡೆಸಿಕೊಂಡು, ನವಚೇತನ ವೆಲ್ಫೇರ್  ಅಸೋಸಿಯೇಶನ್‌ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಿ ನೆಮ್ಮದಿಯಾಗಿದ್ದ ವ್ಯಕ್ತಿಯೊಬ್ಬರು ಈಗ ಏಳಿಂಜೆಯಲ್ಲಿ ಗಾರೆ ಕೆಲಸದ ಜತೆಗೆ ರಿಂಗ್‌ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ.

Advertisement

ಕಿನ್ನಿಗೋಳಿ ಸಮೀಪದ ಏಳಿಂಜೆ ನಿವಾಸಿ ಯಾದವ ಸನಿಲ್‌ 15 ವರ್ಷಗಳ ಕಾಲ ಕುವೈಟ್‌ನಲ್ಲಿ ಕ್ಯಾಟರಿಂಗ್‌ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಇದರ ಜತೆಗೆ ನವಚೇತನ ವೆಲ್ಫೇರ್ ಅಸೋಸಿಯೇಶನ್‌ ಮೂಲಕ 15 ವರ್ಷಗಳಲ್ಲಿ ಪ್ರತಿ ವರ್ಷವೂ ಸತ್ಯನಾರಾಯಣ ಪೂಜೆ, ದಸರಾ, ಅಯ್ಯಪ್ಪ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳನ್ನೂ ನಡೆಸುತ್ತಿದ್ದರು. 

ಆದರೆ 2015 ಅವರ ಪಾಲಿಗೆ ದೊಡ್ಡ ಆಘಾತವನ್ನೇ ನೀಡಿತ್ತು. ಅದೊಂದು ದಿನ ಅಸೋಸಿಯೇಶನ್‌ ಸದಸ್ಯರ ಸಹಕಾರದಲ್ಲಿ ಸತ್ಯನಾರಾಯಣ ಪೂಜೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಅಲ್ಲಿನ ಪೊಲೀಸ್‌ ಅಧಿಕಾರಿಗಳು ಬಂದು ಯಾವುದೇ ಮಾಹಿತಿ ನೀಡದೆ ಕಣ್ಣಿಗೆ ಕಪ್ಪು ಬಟ್ಟೆಯನ್ನು ಕಟ್ಟಿ ಬಂಧನದಲ್ಲಿರಿಸಿದ್ದರು. ನಡೆಸುತ್ತಿದ್ದ ಪೂಜೆ, ಧಾರ್ಮಿಕ ಕಾರ್ಯಕ್ರಮಗಳ ವಿವರ ಪಡೆದು ಸಂಘದ ಅಧ್ಯಕ್ಷ ಅಶೋಕ್‌ ಕಡಿಕಲ್‌ ಮತ್ತು ಪೂಜೆಯಲ್ಲಿ ಪಾಲ್ಗೊಂಡ 11 ಮಂದಿಯ ಕರೆದುಕೊಂಡು ಬಂದು ಬಂಧನದಲ್ಲಿಸಿದರು. 

ಬಳಿಕ ಪಾಸ್‌ ಪೋರ್ಟ್‌ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡು ಎಲ್ಲ ವಿಚಾರಣೆ ಮುಗಿಸಿ ನೆರವಾಗಿ ವಿಮಾನ ನಿಲ್ದಾಣಕ್ಕೆ  ಕರೆತಂದು ಮುಂಬಯಿ ಮೂಲಕ ಭಾರತಕ್ಕೆ ವಾಪಸ್‌ ಕಳುಹಿಸಿಕೊಟ್ಟರು. ಆದರೆ ಯಾವ ಕಾರಣಕ್ಕಾಗಿ ಕಳುಹಿಸಿದ್ದಾರೆ ಎಂಬ ಮಾಹಿತಿ ಇದುವರೆಗೂ ಸಿಕ್ಕಿಲ್ಲ. ಈ ಬಗ್ಗೆ ಒಬ್ಬ ಅಧಿಕಾರಿಯ ಬಳಿ ವಿಚಾರಿಸಿದಾಗ, ‘ನಿನ್ನ ಪೂಜೆ ಏನಿದ್ದರೂ ಭಾರತಕ್ಕೆ ಹೋಗಿ ಮಾಡು’ ಎಂದಿದ್ದರು.

ಮುಸ್ಲಿಂರಿಂದ ಸಹಕಾರ
ಬಂಧನಕ್ಕೊಳಗಾಗಿದ್ದ ವೇಳೆ ಅಲ್ಲಿನ ಮುಸ್ಲಿಂ ಬಂಧುಗಳು ಮತ್ತು ಕೆಲ ಸಂಘ-ಸಂಸ್ಥೆಯವರು ಇವರ ಪರವಾಗಿ ಅಧಿಕಾರಿಗಳ ಜತೆ ಮಾತನಾಡಿದ್ದರು. ಭಾರತಕ್ಕೆ ಬಂದ ಮೇಲೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಸುಷ್ಮಾ ಸ್ವರಾಜ್‌ ಬಳಿ ಕರೆದುಕೊಂಡು ಹೋಗಿ ಇವರಿಗೆ ನ್ಯಾಯ ಸಿಗುವಂತೆ ಪ್ರಯತ್ನಿಸಿದ್ದರು. ಆದರೆ ಪ್ರಯೋಜನವಾಗಲಿಲ್ಲ.

Advertisement

ಕುವೈಟ್‌ನಲ್ಲಿ ಯಾದವ ಸನಿಲ್‌ ಅವರ ತಂಡ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದ್ದೇನೂ ಹೊಸತಲ್ಲ. 2001ರಿಂದಲೂ ಪ್ರತಿ ವರ್ಷ ನಡೆಸುತ್ತಿದ್ದರು. ಇಲ್ಲಿರುವ ಬೇರೆ ಸಂಘಸಂಸ್ಥೆಗಳೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಆದರೆ ಇವರಿಗೇನು ಅಡ್ಡಿಯಾಯಿತು ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ಬಡಕುಟುಂಬ
ಯಾದವ ಸನಿಲ್‌ ಅವರು ಬಾಲ್ಯದಿಂದಲೂ ಬಡತನದಲ್ಲೇ ಕಾಲ ಕಳೆದವರು. 8ನೇ ತರಗತಿ ವರೆಗೆ ಕಲಿತು ಅನಂತರ ಮುಂಬಯಿಯಲ್ಲಿ ಸ್ವಲ್ಪ ಕಾಲ ದುಡಿದರು. ಕುಟುಂಬ ನಿರ್ವಹಣೆ ಕಷ್ಟವಾದಾಗ 2001ರಲ್ಲಿ ಕುವೈಟ್‌ ಗೆ ತೆರಳಿದ್ದರು. 15 ವರ್ಷಗಳ ಕಾಲ ಅಲ್ಲಿ ದುಡಿದು ಸಮಯವಿದ್ದಾಗ ಇತರೆ ಸಣ್ಣಪುಟ್ಟ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಕೆಲ ತಿಂಗಳ ಕಾಲ ದುಡಿದು ಊರಿಗೆ ಮರಳಿಗೆ ತನಗೆ ಸಿಗುವ 15 ವರ್ಷದ ಸರ್ವಿಸ್‌ ಹಣದಲ್ಲಿ ಊರಿನಲ್ಲೇ ಏನಾದರೂ ಸ್ವ ಉದ್ಯೋಗ ಮಾಡುವ ಯೋಜನೆ ಇಟ್ಟುಕೊಂಡಿದ್ದರು. ಆದರೆ ಈಗ ಯಾವುದೂ ಸಾಕಾರಗೊಂಡಿಲ್ಲ.

ಮಾನಸಿಕವಾಗಿಯೂ ಕುಗ್ಗಿ ಹೋಗಿರುವ ಇವರು ಹೆಂಡತಿ, ಇಬ್ಬರು ಮಕ್ಕಳ ಜತೆಗೆ ತಂಗಿಯ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. 5 ಮಕ್ಕಳಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿಯೂ ಅವರ ಮೇಲಿದೆ. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ಯಾದವ ಸನಿಲ್‌ ಅವರು ಇನ್ನೂ ನ್ಯಾಯದ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ಮತಾಂತರ ಆರೋಪ ಸುಳ್ಳು
ನವಚೇತನ ವೆಲ್ಫೇರ್  ಅಸೋಸಿಯೇಶನ್‌ ಮೂಲಕ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಯಾರಿಂದಲೂ ವಿರೋಧ ಬಂದಿರಲಿಲ್ಲ. ನಮ್ಮ ಮೇಲೆ ಮತಾಂತರ ಮಾಡುವ ಆರೋಪ ಇತ್ತಂತೆ. ಆದರೆ ಸರಿಯಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಅಲ್ಲಿರುವ ಭಾರತೀಯ ಮುಸ್ಲಿಮರು ಸೇರಿ ಸಹಕಾರ ನೀಡಿದ್ದಾರೆ. ನಾವು ಇಲ್ಲಿ ಬಂದ ಅನಂತರ ಮುಸ್ಲಿಂ ಗೆಳೆಯರು ಅಲ್ಲಿಂದ 10 ಸಾವಿರ ರೂ. ಕಳುಹಿಸಿಕೊಟ್ಟಿದ್ದರು. ಇನ್ನೂ ಪ್ರಯೋಜನವಾಗಿಲ್ಲ. ಮಾಡದ ತಪ್ಪಿಗೆ ಶಿಕ್ಷೆ ಆಗಿದೆ.
 -ಯಾದವ ಸನಿಲ್‌,ಏಳಿಂಜೆ

Advertisement

Udayavani is now on Telegram. Click here to join our channel and stay updated with the latest news.

Next