Advertisement

ಅಕ್ಟೋಬರ್ ವರೆಗೆ ಕಾದು ನಂತರ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಿ: ಕುಮಾರಸ್ವಾಮಿ

01:34 PM Jun 23, 2020 | keerthan |

ಬೆಂಗಳೂರು: ಕೋವಿಡ್-19 ಲಾಕ್ ಡೌನ್ ಕಾರಣದಿಂದ ಮುಂದೂಡಿಕೆಯಾಗಿದ್ದ ರಾಜ್ಯದ ಎಸ್ಎಸ್ಎಲ್ ಸಿ ಪರೀಕ್ಷೆಗಳು ಗುರುವಾರ ( ಜೂ. 25) ರಂದು ಆರಂಭವಾಗಲಿದೆ. ಆದರೆ ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಿರುವ ಈ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

Advertisement

ಈ ಕುರಿತು ಟ್ವೀಟ್ ಮಾಡಿರುವ ಅವರು, ಗುರುವಾರದಿಂದ ರಾಜ್ಯದಾದ್ಯಂತ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಈ ನಿರ್ಧಾರದಿಂದ ತಕ್ಷಣವೇ ಹಿಂದೆ ಸರಿಯಬೇಕು. ಪರೀಕ್ಷೆ ನಡೆಸಲೇಬೇಕು ಎಂದಾದರೆ ಅಕ್ಟೋಬರ್ ತಿಂಗಳವರೆಗೆ ಕಾಯ್ದು ನಂತರ ನಡೆಸಲಿ ಎಂದಿದ್ದಾರೆ.

ಕೋವಿಡ್-19 ಸೋಂಕು ಏರುಗತಿಯಲ್ಲಿ ಸಾವಿನ ನಗಾರಿ ಬಾರಿಸುತ್ತಿರುವ ಇಂತಹ ಆತಂಕದ ಸಂದರ್ಭದಲ್ಲಿ ಸುಮಾರು ಎಂಟು ಲಕ್ಷ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಪರೀಕ್ಷಾ ಸಿಬ್ಬಂದಿ  ಸೇರಿದಂತೆ 24 ಲಕ್ಷ  ಮಂದಿಯ ಜೀವ ಮತ್ತು ಭವಿಷ್ಯದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಎಚ್ ಡಿಕೆ ಆರೋಪಿಸಿದ್ದಾರೆ.

ಕೋವಿಡ್-19 ಸೋಂಕು ಸಮುದಾಯ ಪ್ರಸರಣ ಭೀತಿಯ  ಹಿನ್ನೆಲೆಯಲ್ಲಿ ನೆರೆಯ ತೆಲಂಗಾಣ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ರದ್ದುಪಡಿಸಿ ಉತ್ತೀರ್ಣಗೊಳಿಸಲಾಗಿದೆ. ಅದೇ ರೀತಿಯಲ್ಲಿ ರಾಜ್ಯ ಸರ್ಕಾರ ನಿರ್ಧಾರ ತಳೆಯಬಹುದು. ಪರೀಕ್ಷೆಗಳನ್ನು ನಡೆಸಲೇ ಬೇಕೆಂದರೆ ಅಕ್ಟೋಬರ್ ತಿಂಗಳವರೆಗೆ ಕಾಯಲಿ ಎಂದು ಎಚ್ ಡಿಕೆ ಹೇಳಿದ್ದಾರೆ.

ಎಸ್ಎಸ್ಎಲ್ ಸಿ ಪರೀಕ್ಷಾ ಕಾರಣದಿಂದ ಏನಾದರೂ ಅವಘಡಗಳು ಸಂಭವಿಸಿದರೆ ಶಿಕ್ಷಣ ಸಚಿವರು ಮತ್ತು ರಾಜ್ಯ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡುತ್ತೇನೆ. ಸರ್ಕಾರ ಈ ಬಗ್ಗೆ ತಕ್ಷಣವೇ ನಿರ್ಧಾರ ಕೈಗೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next