ಬೆಂಗಳೂರು: ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಪದವಿಯಲ್ಲಿ ಮುಂದುವರಿಯಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಯಸುತ್ತಾರೆ ಎಂದು ನೂತನ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರೂ ನಾಯಕರು ಸಂದರ್ಭಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಅವರನ್ನು ನಂಬಿ ಕಾರ್ಯಕರ್ತರು ಹಾಳಾಗುತ್ತಾರೆ. ಆದ ಕಾರಣ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಸೇರಲು ಆಹ್ವಾನ ನೀಡುತ್ತೇನೆ ಎಂದರು.
ಡಿ.ಕೆ ಶಿವಕುಮಾರ್ ಅವರು ಕುಮಾರಸ್ವಾಮಿ ಮೂಲ ಕ್ಷೇತ್ರ ರಾಮನಗರದಲ್ಲಿಯೇ ಅವರ ಬುಡಕ್ಕೆ ಕೈ ಹಾಕಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಡಿ.ಕೆ.ಶಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಡಿ.ಕೆ.ಶಿ ಹಾಗೂ ಕುಮಾರಸ್ವಾಮಿ ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡುತ್ತಾರೆ..ಇಷ್ಟು ದಿನ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬಂದಿದ್ದರು. ಈಗ ಇಬ್ಬರಿಗೂ ಅಸ್ತಿತ್ವದ ಪ್ರಶ್ನೆಯಾಗಿದೆ. ಹೀಗಾಗಿ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ ಎಂದರು.
ಕುಮಾರಸ್ವಾಮಿಗೆ ಈಗ ಅಸ್ತಿತ್ವದ ಪ್ರಶ್ನೆ ಇದೆ. ಅವರ ಮಾತುಗಳನ್ನು ಮೇಲ್ನೋಟಕ್ಕೆ ನೋಡಿದರೆ ಬಿಜೆಪಿಗೆ ಬೆಂಬಲ ಕೊಡುತ್ತಿದ್ದಾರೆ ಅಂತ ಕಾಣಿಸುತ್ತಿದೆ. ನಮ್ಮ ಸರ್ಕಾರದಲ್ಲಿ ಕುಮಾರಸ್ವಾಮಿ ಹೇಳಿರುವ ಎಲ್ಲಾ ಕೆಲಸಗಳೂ ಆಗುತ್ತಿವೆ. ಅವರು ಹೇಳಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಡಲಾಗುತ್ತಿದೆ. ಹೀಗಾಗಿ ಅವರೂ ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ ಎಂದು ಹೇಳಿದರು.
ಡಿ. ಕೆ. ಶಿವಕುಮಾರ್ ಹಗಲು ಹೊತ್ತಲ್ಲಿ ಮಾತ್ರ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ. ರಾತ್ರಿಯಾದರೆ ನಮ್ಮ ಮುಖ್ಯಮಂತ್ರಿ ಬಳಿ ಬಂದು ಕೆಲಸ ಮಾಡಿಸಿಕೊಳ್ಳುತ್ತಾರೆ. ಇಬ್ಬರೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯಲು ಎಂದು ಬಯಸುತ್ತಾರೆ ಎಂದು ಯೋಗೇಶ್ವರ್ ಹೇಳಿದರು.
ವಿಧಾನ ಪರಿಷತ್ ಗೆ ನನ್ನ ಆಯ್ಕೆಯಲ್ಲಿ ಪಕ್ಷದಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಪಕ್ಷ ಹಾಗೂ ಯಡಿಯೂರಪ್ಪ ಎಲ್ಲರೂ ಒಮ್ಮತದಿಂದ ಆಯ್ಕೆ ಮಾಡಿದಾರೆ. ನನ್ನನ್ನು ಪರಿಷತ್ ಸದಸ್ಯನನ್ನಾಗಿ ಆಯ್ಕೆ ಮಾಡಿರುವುದು ಪುಣ್ಯ, ಸಂಪುಟಕ್ಕೆ ಸೇರಿಸಿಕೊಳ್ಳುವುದು ಪಕ್ಷದ ನಾಯಕರಿಗೆ ಬಿಟ್ಟ ವಿಚಾರ ಎಂದು ಹೇಳಿದರು.