Advertisement

ಬಿಜೆಪಿ ಬಿ ಟೀಮ್ ಯಾರೆಂಬುದು ಬಯಲಾಗಿದೆ; ಸಿದ್ದರಾಮಯ್ಯ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಕಿಡಿ

09:50 PM Jun 10, 2022 | Team Udayavani |

ಬೆಂಗಳೂರು: ರಾಜ್ಯಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಬಿ ಟೀಮ್ ಯಾವುದು? ಬಿಜೆಪಿಯ ಬಾಲಂಗೋಚಿ ಯಾರು ಎನ್ನುವುದು ಜಗಜ್ಜಾಹೀರು ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಕಾಂಗ್ರೆಸ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Advertisement

ಅಲ್ಲದೆ, ರಾಷ್ಟ್ರೀಯ ಪಕ್ಷಗಳು ತಮ್ಮ ರಾಜಕೀಯ ಸ್ವಾರ್ಥ ಸಾಧನೆಗೆ ಪ್ರಾದೇಶಿಕ ಪಕ್ಷವನ್ನು ಹತ್ತಿಕ್ಕುವ ಕೆಲಸ ಮಾಡಿವೆ ಹಾಗೂ ಪ್ರಜಾಪ್ರಭುತ್ವದ ಬೆನ್ನಿಗಿರಿಯುವ ಹೀನ ಕೃತ್ಯ ಎಸಗಿವೆ. ಚುನಾವಣಾ ವ್ಯವಸ್ಥೆಯನ್ನು ಅಣಕ ಮಾಡುವೆ ಎಂದು ಅವರು ಕಿಡಿಕಾರಿದರು.

ರಾಜ್ಯಸಭೆ ಚುನಾವಣೆ ಫಲಿತಾಂಶದ ನಂತರ ಅವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅವರ ಹೇಳಿಕೆ ಹೀಗಿದೆ:

ಸಿದ್ದರಾಮಯ್ಯ ಅವರು ಬಿಜೆಪಿ ಜತೆ ಒಳಒಪ್ಪಂದ ಮಾಡಿಕೊಂಡು ತಮ್ಮ ಪಕ್ಷದ ಅಲ್ಪಸಂಖ್ಯಾತ ಅಭ್ಯರ್ಥಿ ಮನ್ಸೂರ್ ಖಾನ್ ಅವರ ಸೋಲಿಗೂ ಕಾರಣರಾಗಿದ್ದಾರೆ. ಜತೆಗೆ, ಮನಸಿನಲ್ಲಿ ನಂಜು ತುಂಬಿಕೊಂಡು ಜೆಡಿಎಸ್ ಅಭ್ಯರ್ಥಿ ಪರಾಜಯಕ್ಕೂ ಕಾರಣರಾಗಿದ್ದಾರೆ.

ಜಾತ್ಯತೀತ ಶಕ್ತಿಗಳನ್ನು ಹತ್ತಿಕ್ಕಿ ಬಿಜೆಪಿಯ ಮೂರನೇ ಅಭ್ಯರ್ಥಿ ಗೆಲುವಿಗೆ ನೇರ ಕಾರಣ ಸಿದ್ದರಾಮಯ್ಯ. ಅವರ ಢೋಂಗಿ ಸೈದ್ದಾಂತಿಕ ಮುಖವಾಡ ಈ ಚುನಾವಣೆ ಮೂಲಕ ಕಳಚಿ ಬಿದ್ದಿದೆ.

Advertisement

ಇಷ್ಟು ದಿನ ಬಿಜೆಪಿ ಬಿ ಟೀಂ ಎಂದು ಜೆಡಿಎಸ್ ಬಗ್ಗೆ ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದರು. ಈಗ ಬಿಜೆಪಿಯ ಅಸಲಿ ಬಿ ಟೀಮ್ ಯಾವುದು ಮತ್ತು ಯಾರು ಎನ್ನುವುದು ದೇಶಕ್ಕೆ ಗೊತ್ತಾಗಿದೆ. ಇನ್ನು ಯಾವ ಮುಖ ಇಟ್ಟುಕೊಂಡು ಸಿದ್ದರಾಮಯ್ಯ ಅವರು ತಾವು ಜಾತ್ಯತೀತ ನಾಯಕ ಎಂದು ಹೇಳುತ್ತಾರೆ?

ಅಲ್ಪಸಂಖ್ಯಾತರ ಬಗ್ಗೆ ಸಿದ್ದರಾಮಯ್ಯ ಅವರದ್ದು ಮೊಸಳೆ ಮರುಕ. ಸೋಲು ಗ್ಯಾರಂಟಿ ಎಂದು ಗೊತ್ತಿದ್ದೇ ಮನ್ಸೂರ್ ಖಾನ್ ಅವರನ್ನು ಎರಡನೇ ಅಭ್ಯರ್ಥಿ ಮಾಡಿದ್ದಾರೆ. ಅವರಿಗೆ ಅಲ್ಪಸಂಖ್ಯಾತರ ಮೇಲೆ ಅಕ್ಕರೆ ಇದ್ದಿದ್ದರೆ ಮನ್ಸೂರ್ ಖಾನ್ ಅವರನ್ನೇ ಮೊದಲ ಅಭ್ಯರ್ಥಿ ಮಾಡುತ್ತಿದ್ದರು.

ನಮ್ಮ ಪಕ್ಷದ ಶಾಸಕರನ್ನು ಹೈಜಾಕ್ ಮಾಡಲು ಅವರು ಹರ ಸಾಹಸ ಮಾಡಿದರು. ಆ ಷಡ್ಯಂತ್ರ ವಿಫಲವಾಗಿದೆ. ನಮ್ಮ ಪಕ್ಷ ಬಲಿಷ್ಠವಾಗಿದೆ ಎನ್ನುವುದು ಈ ಚುನಾವಣೆ ತೋರಿಸಿದೆ. ಸಿದ್ದರಾಮಯ್ಯ ಅವರಿಗೆ ಕಪಾಳಮೋಕ್ಷ ಆಗಿದೆ.

ಓರ್ವ ಮಾಜಿ ಮುಖ್ಯಮಂತ್ರಿ, ಹಾಲಿ ಪ್ರತಿಪಕ್ಷ ನಾಯಕರಾಗಿ ಅಡ್ಡ ಮತದಾನ ಮಾಡಿ ಎಂದು ಜೆಡಿಎಸ್ ಪಕ್ಷದ ಶಾಸಕರಿಗೆ ನೇರವಾಗಿ ಪತ್ರ ಬರೆದ ಸಿದ್ದರಾಮಯ್ಯ ಅವರು ನೈತಿಕತೆ ಕಳೆದುಕೊಂಡಿದ್ದಾರೆ. ನೇರವಾಗಿ ಅವರು ನಮ್ಮ ಶಾಸಕರಿಗೆ ಅಡ್ಡ ಮತದಾನಕ್ಕೆ ಪ್ರೇರಣೆ ನೀಡಿದ್ದಾರೆ. ಮತ ಹಾಕಿ ಎಂದು ಶಾಸಕರಿಗೆ ಸಿದ್ದರಾಮಯ್ಯ ಪತ್ರ ಮೂಲಕ ಮನವಿ ಮಾಡಿರುವುದು ನಾಚಿಕೆ ಗೇಡಿನ ಸಂಗತಿ. ಮುಂದಿನ ದಿನಗಳಲ್ಲಿ ಅವರು ಇದಕ್ಕೆ ಪ್ರತಿಯಾಗಿ ತಕ್ಕ ಶಾಸ್ತಿ ಅನುಭವಿಸಲಿದ್ದಾರೆ.

ಅಲ್ಪಸಂಖ್ಯಾತ ಅಭ್ಯರ್ಥಿಯ ಹೆಸರಿನಲ್ಲಿ ಅನುಕಂಪ ಗಿಟ್ಟಿಸಲು ಹೋಗಿ ಅವರೇ ಖೆಡ್ಡಾಗೆ ಬಿದ್ದಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ನಮಗೆ ಎರಡನೇ ಪ್ರಾಶಸ್ತ್ಯದ ಮತ ಕೂಡ ಹಾಕಬೇಡಿ ಎಂದು ಕಾಂಗ್ರೆಸ್ ಶಾಸಕರಿಗೆ ಹೇಳಿದ್ದಾರೆ. ಬಿಜೆಪಿಯನ್ನು ಗೆಲ್ಲಿಸಿ ಸಿದ್ದರಾಮಯ್ಯ ತಾವೊಬ್ಬ ನಕಲಿ ಜಾತ್ಯಾತೀತ ನಾಯಕ ಎಂದು ನಾಡಿಗೆ ಸಾರಿ ಹೇಳಿದ್ದಾರೆ.

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮನ್ನು ಗೆಲ್ಲಿಸುತ್ತಾರೆ ಎಂದು ಹೇಳಿದ್ದರು. ಅದನ್ನೇ ಸಿದ್ದರಾಮಯ್ಯ ಮಾಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರ ಬಣ್ಣ ಬಯಲಾಗಿದೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಜೊತೆ ಮಾತಾಡಿದ್ದಾರೆ. ಕಾಂಗ್ರೆಸ್ ಗೆ, ಅದರಲ್ಲೂ ಸಿದ್ದರಾಮಯ್ಯ ಅವರಿಗೆ ಜಾತ್ಯತೀತ ಪಕ್ಷಗಳು ಉಳಿಯೋದು ಇಷ್ಟ ಇಲ್ಲ. ಇದರಿಂದ ಸಿದ್ದರಾಮಯ್ಯ ಅವರ ಜತೆಯಲ್ಲೇ ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣ ಬಯಲಾಗಿದೆ. ಆದರೆ ಜೆಡಿಎಸ್ ಪಕ್ಷ ಮತ್ತೆ ಪುಟಿದೇಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next