ಬೆಂಗಳೂರು: ಕುಕ್ಕುಟೋದ್ಯಮದಲ್ಲಿ ಸಣ್ಣ ಪ್ರಮಾಣದ ಕೋಳಿ ಸಾಕಣೆದಾರರು, ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಸರಕಾರದ ಗಮನ ಸೆಳೆಯುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ.
ಶಾಸಕರ ಭವನದಲ್ಲಿಂದು ಕೋಳಿ ಸಾಕಣೆದಾರರ ಸಮಸ್ಯೆಗಳ ಕುರಿತಾದ ರಾಜ್ಯದ ಮಟ್ಟದ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು; “ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಸಬಲೀಕರಣ ಹಾಗೂ ನಿರುದ್ಯೋಗವನ್ನು ಹತ್ತಿಕ್ಕುವ ಶಕ್ತಿಯುಳ್ಳ ಕೋಳಿ ಸಾಕಣೆಗೆ ಸರಕಾರ ಹೆಚ್ಚು ಪ್ರೋತ್ಸಾಹ ನೀಡಬೇಕಿದೆ ಎಂದರು.
ಸದ್ಯಕ್ಕೆ ಕುಕ್ಕುಟೋದ್ಯಮ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ನ್ಯಾಯಯುತ ಬೆಲೆಯಲ್ಲೂ ಸಾಕಣೆದಾರರಿಗೆ ಅನ್ಯಾಯವಾಗುತ್ತಿದೆ. ಸ್ವತಃ ನಾನು ಕೂಡ ಬಿಡದಿಯ ತೋಟದಲ್ಲಿ 3,000 ನಾಟಿ ಕೋಳಿಗಳನ್ನು ಸಾಕುತ್ತಿದ್ದೇನೆ. ಆದರೆ, ಅದರಿಂದ ಲಾಭವೇನೂ ಇಲ್ಲ. ಕೇವಲ ಈ ಕೆಲಸದಲ್ಲಿ ಕೊಂಚ ಅನುಭವ ಗಳಿಸಿಕೊಳ್ಳಲು ಕೋಳಿ ಸಾಕಣೆ ಮಾಡುತ್ತಿದ್ದೇನೆ ಎಂದರು ಅವರು.
ಉಳಿದಂತೆ ರೈತರು ಮತ್ತು ಕಂಪನಿಗಳ ನಡುವೆ ಆಗಿರುವ ಒಪ್ಪಂದದಂತೆ ಸಕಾಲಕ್ಕೆ ರೈತರಿಗೆ ಕೋಳಿ ಮರಿಗಳನ್ನು ನೀಡಬೇಕು, ಸರಕಾರ ನಿಗದಿ ಮಾಡಿರುವ ಕನಿಷ್ಟ ಸಾಕಣೆ ದರ ನೀಡುವುದು, ಕೋಳಿ ಸಾಕಣೆಯನ್ನು ಕೃಷಿ ಎಂದು ಸರಕಾರ ಘೋಷಣೆ ಮಾಡಬೇಕು, ರಾಜ್ಯದ ಕುಕ್ಕುಟ ಮಹಾಮಂಡಳಿಯನ್ನು ಕೆಎಂಎಫ್ ಮಾದರಿಯಲ್ಲಿ ಬಲಪಡಿಸುವುದು ಸೇರಿದಂತೆ ನಿಮ್ಮ ಹಲವಾರು ಬೇಡಿಕೆಗಳು ನ್ಯಾಯಯುತವಾಗಿವೆ. ಅವುಗಳ ಬಗ್ಗೆ ಸಂಬಂಧಪಟ್ಟ ಸಚಿವರ ಜತೆ ಮಾತನಾಡುವುದಾಗಿ ಕುಮಾರಸ್ವಾಮಿ ಅವರು ಸಭೆಯಲ್ಲಿ ಹೇಳಿದರು.
ಇದನ್ನೂ ಓದಿ : ಶಾಸಕರ ಕುಮ್ಮಕ್ಕಿನಿಂದ ನಡೆದ ದೌರ್ಜನ್ಯಕ್ಕೆ ನಾನು ಹೆದರುವವನಲ್ಲ : ಶ್ರೀಪಾದಹೆಗಡೆ ಹೇಳಿಕೆ
ಸಭೆಯಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಕಾಂತರಾಜ್, ರಾಜ್ಯ ಕೋಳಿ ಸಾಕಣೆದಾರ ರೈತರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ, ಅಧ್ಯಕ್ಷ ಜೆ.ಸಿ.ಮಂಜುನಾಥ್ ಪ್ರಧಾನ ಕಾರ್ಯದರ್ಶಿ ಸಿ.ಎಂ. ರಮೇಶ್ ಮುಂತಾದವರು ಮಾತನಾಡಿದರು.