Advertisement

ಹಾವೇರಿ ನಗರಸಭೆ; ಕಮಲ ಹಿಡಿದು ಗದ್ದುಗೆ ಏರಿದ ಪಕ್ಷೇತರರು-ಕಾಂಗ್ರೆಸ್‌ ಗೆ ಮುಖಭಂಗ

01:18 PM Sep 05, 2024 | Team Udayavani |

■ ಉದಯವಾಣಿ ಸಮಾಚಾರ
ಹಾವೇರಿ: ನಗರಸಭೆ ಚುಕ್ಕಾಣಿ ಬಿಜೆಪಿ ಬೆಂಬಲಿತ ಪಕ್ಷೇತರರ ಪಾಲಾಗಿದ್ದು, ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ. ಅಧ್ಯಕ್ಷರಾಗಿ ಶಶಿಕಲಾ ಮಾಳಗಿ ಹಾಗೂ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಸಾತೇನಹಳ್ಳಿ ಆಯ್ಕೆಯಾದರು.

Advertisement

ಸ್ಥಳೀಯ ನಗರಸಭೆ ಸಭಾಭವನದಲ್ಲಿ ಬುಧವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ “ಬ’ ಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ರೇಣುಕಾ ಪುತ್ರನ್‌ ಹಾಗೂ ಬಿಜೆಪಿ ಬೆಂಬಲಿತರಾಗಿ ಶಶಿಕಲಾ ರಾಮು ಮಾಳಗಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ
ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಪೂಜಾ ಹಿರೇಮಠ ಹಾಗೂ ಬಿಜೆಪಿ ಬೆಂಬಲಿತರಾಗಿ ಮಲ್ಲಿಕಾರ್ಜುನ ಸಾತೇನಹಳ್ಳಿ ನಾಮಪತ್ರ ಸಲ್ಲಿಸಿದ್ದರು.

ಚುನಾವಣಾಧಿಕಾರಿಗಳು ಕೈ ಎತ್ತುವ ಮೂಲಕ ಮತ ಚಲಾವಣೆಗೆ ಅವಕಾಶ ನೀಡಿದರು. ಬಿಜೆಪಿಯ ಶಶಿಕಲಾ ಮಾಳಗಿ 17 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು. ಇವರ ಪ್ರತಿಸ್ಪರ್ಧಿ ರೇಣುಕಾ ಅವರಿಗೆ 11 ಜನರ ಬೆಂಬಲವಷ್ಟೇ ದೊರೆಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಮಲ್ಲಿಕಾರ್ಜುನ ಸಾತೇನಹಳ್ಳಿ ಅವರಿಗೆ 17 ಮತಗಳು ಬಂದರೆ, ಪ್ರತಿಸ್ಪರ್ಧಿ ಪೂಜಾ ಹಿರೇಮಠ ಅವರಿಗೆ 11 ಮತಗಳು ಬಂದವು. ಆ ಮೂಲಕ ಎರಡೂ ಕುರ್ಚಿಗಳು ಪಕ್ಷೇತರರ ಪಾಲಾದವು. ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬಿಜೆಪಿ ಪರ ನಿಂತರೆ, ಕಾಂಗ್ರೆಸ್‌ ಪರ ಶಾಸಕ ರುದ್ರಪ್ಪ ಲಮಾಣಿ ಹಾಗೂ ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ಆಗಮಿಸಿದ್ದರು.

ಬಿಜೆಪಿ-ಪಕ್ಷೇತರರ ದೋಸ್ತಿ: ಕೈಗೆ ತಪ್ಪಿದ ಅಧಿಕಾರ 31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್‌ 15 ಸದಸ್ಯರನ್ನು ಹೊಂದಿದೆ. ಬಿಜೆಪಿ 9 ಹಾಗೂ 7 ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನದ ಮೊದಲಾರ್ಧ ಕಾಂಗ್ರೆಸ್‌ ಅಧಿಕಾರ ನಡೆಸಿತ್ತು. ಕಾಂಗ್ರೆಸ್‌ನ 6 ಸದಸ್ಯರು ಚುನಾವಣಾ ಪ್ರಕ್ರಿಯೆಗೆ ಗೈರಾಗುವ ಮೂಲಕ ಬಿಜೆಪಿಗೆ ಅನುಕೂಲ ಮಾಡಿಕೊಟ್ಟರು. ರವಿ ದೊಡ್ಡಮನಿ,
ವಿಶಾಲಾಕ್ಷಿ ಅನವಟ್ಟಿ, ಜಾಹಿದಾಬಾನು ಜಮಾದಾರ್‌, ಪೀರಸಾಬ್‌ ಚೋಪದಾರ್‌, ದಾದಾಪೀರ ಚೂಡಿಗಾರ ಹಾಗೂ ಸಚಿನ ಡಂಬಳ ಗೈರಾದ ಸದಸ್ಯರು.

ಬಿಜೆಪಿ ಮತ್ತು ಪಕ್ಷೇತರ ಸದಸ್ಯರು ಅಧಿಕಾರಕ್ಕೇರಲು ನಡೆಸಿದ ತಂತ್ರವನ್ನು ತಡವಾಗಿ ಅರಿತ ಕೈ ಮುಖಂಡರಿಂದ ಪ್ರತಿತಂತ್ರ ರೂಪಿಸಲು ಸಾಧ್ಯವಾಗದೇ ಅಧಿಕಾರವನ್ನು ಕೈಚೆಲ್ಲಿದರು. ಕಳೆದ ಅವಧಿಯಿಂದಲೇ ಅಧಿಕಾರಕ್ಕೇರುವ ಹೊಂಚು ಹಾಕಿದ್ದ ಪಕ್ಷೇತರರು ಈ ಸಲ ಅದರಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಸದಸ್ಯರಲ್ಲಿನ ಒಡಕನ್ನೇ ಬಂಡವಾಳ ಮಾಡಿಕೊಂಡು ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಾಡಿದ ಕಾರ್ಯಾಚರಣೆ ಯಶಸ್ವಿಯಾಗಿದೆ.

Advertisement

ನನ್ನನ್ನು ಗೆಲ್ಲಿಸಿದ ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲರ ವಿಶ್ವಾಸದೊಂದಿಗೆ ನಗರದ ಸಮಗ್ರ ಅಭಿವೃದ್ಧಿಗೆ
ಶ್ರಮಿಸುತ್ತೇನೆ. ಕುಡಿಯುವ ನೀರು, ಸ್ವಚ್ಛತೆ ಕಡೆಗೆ ಆದ್ಯತೆ ನೀಡುತ್ತೇನೆ.
●ಶಶಿಕಲಾ ಮಾಳಗಿ
ನಗರಸಭೆ ನೂತನ ಅಧ್ಯಕ್ಷೆ

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಗಳ ಪರ ಮತ ಚಲಾವಣೆ ಮಾಡದೇ
ಚುನಾವಣೆಯಲ್ಲಿ ಗೈರು ಹಾಜರಾಗಿ ಪಕ್ಷಕ್ಕೆ ಅಗೌರವ ತೋರಿದ, ಪಕ್ಷದ್ರೋಹ ಮಾಡಿದ ಸದಸ್ಯರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
●ಸಂಜೀವಕುಮಾರ ನೀರಲಗಿ, ಕೈ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next