Advertisement
ಭಾರತೀನಗರ: ತಾಲೂಕು ಕೇಂದ್ರ ಮದ್ದೂರುನಿಂದ 7 ಕಿ.ಮೀ., ಮಂಡ್ಯದಿಂದ 20 ಕಿ.ಮೀ. ದೂರದಲ್ಲಿರುವ ಚಿಕ್ಕರಸಿನಕೆರೆ ಬಸಪ್ಪ ಕಷ್ಟ ಅಂತ ಬರುವ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾನೆ. ರಾಜ್ಯ, ಅಂತರ ರಾಜ್ಯಗಳಲ್ಲಿ ತನ್ನ ಖ್ಯಾತಿಯನ್ನುಪ್ರಖ್ಯಾತಿಗೊಳಿಸಿಕೊಂಡಿರುವ ಕಲಿಯುಗ ದೈವ ಚಿಕ್ಕರಸಿನಕೆರೆ ಬಸವ. ನ್ಯಾಯಾಧೀಶ ಬಸಪ್ಪ ಚಿಕ್ಕರಸಿನಕೆರೆ ಕಾಲಭೈರವೇಶ್ವರ
ದೇಗುಲದಲ್ಲಿರುವ ಬಸಪ್ಪನ ಬಗ್ಗೆ ಅನೇಕ ಕಥೆಗಳಿವೆ. ಕಳ್ಳರು ಹಾಗೂ ಮೋಸಗಾರರಿಗೆ ಸಿಂಹಸ್ವಪ್ನವಾಗಿ ವಿವಿಧ ಗ್ರಾಮಗಳಲ್ಲಿ ದೇವಸ್ಥಾನದ ಜಮೀನುಗಳ ಒತ್ತುವರಿ ತೆರವುಗೊಳಿಸುವ ಮೂಲಕ ಸುತ್ತಮುತ್ತಲ ಗ್ರಾಮಗಳ ಹಾಗೂ ಜಿಲ್ಲೆಗಳ ಜನರಲ್ಲಿ ಅಪಾರ ದೈವಭಕ್ತಿಯನ್ನುಂಟು ಮಾಡುವಲ್ಲಿ ಬಸವ ತನ್ನ ವೈಶಿಷ್ಟತೆ ಮೆರೆಯುತ್ತಾನೆ. ಅನೇಕ ನಾಸ್ತಿಕರನ್ನು ತನ್ನ ಮಹಿಮೆಯಿಂದ ಆಸ್ತಿಕರನ್ನಾಗಿಸಿದ ಉದಾಹರಣೆಗಳು ಸಾಕಷ್ಟಿವೆ ಎನ್ನುತ್ತಾರೆ ಸ್ಥಳೀಯರು.
ಕಾಲಭೈರವೇಶ್ವರನ ಜಾತ್ರೆ ಸಾಮಾನ್ಯವಾಗಿ ಏಪ್ರಿಲ್ ತಿಂಗಳಿನಲ್ಲಿ ನಡೆಯುತ್ತದೆ. ಆದಾದ ನಂತರ ಕಾರ್ತಿಕ ಮಾಸದ ದೀಪಾವಳಿ
ಸಂಭ್ರಮದಲ್ಲಿ ಬಸಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದು ಬಿಟ್ಟರೆ ವಿವಿಧ ಊರುಗಳಿಗೆ ಬಸಪ್ಪನ ಭೇಟಿ ಪೂರ್ವನಿಗದಿಯಂತೆ, ಕೆಲವೊಮ್ಮೆ ಅಚಾನಕ್ ಆಗಿ ಆಗುವುದೂ ಉಂಟು. ಚಿಕ್ಕರಸಿನಕೆರೆ ಅಲ್ಲದೇ, ಕಾರ್ಕಹಳ್ಳಿಯಲ್ಲೂ ಬಸವ ಇದ್ದು, ಎರಡು ದೈವಿ ಬಸವಗಳು ಭಾವ ಬಾಮೈದ ಬಸವಗಳು ಜನರ ಆಸ್ತಿಕತೆಯ ಪ್ರತೀಕವಾಗಿವೆ.
Related Articles
ಬಸಪ್ಪನ ಜಾತ್ರೆಯಂದು ಚಿಕ್ಕರಸಿನಕೆರೆ, ಹುಣ್ಣನದೊಡ್ಡಿ ಹಾಗೂ ಗುರುದೇವರಹಳ್ಳಿ ಗ್ರಾಮದವರಿಂದ ಕೊಂಡಬಂಡಿ ಉತ್ಸವ, ಕಾಳಮ್ಮ ಕಾರ್ಕಹಳ್ಳಿ ಬಸವೇಶ್ವರ, ಕಾಲಭೈರವೇಶ್ವರ ಸೇರಿದಂತೆ ದೇವಾನುದೇವತೆಗಳಿಗೆ ಶಿಂಷಾನದಿಯಲ್ಲಿ ಹೂ-ಹೊಂಬಾಳೆ ಕಾರ್ಯಕ್ರಮ, ಮಹಾಪೂಜೆಯ ಬಳಿಕ ಪ್ರಮುಖ ಬೀದಿಗಳಲ್ಲಿ ಬಸಪ್ಪನ ಮೆರವಣಿಗೆ ನಡೆಸಲಾಗುತ್ತದೆ. ಭಕ್ತರು ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಸ್ಥಾನದ ಆವರಣದಲ್ಲಿ ವಿವಿಧ ರೀತಿಯ ಪುಷ್ಪಾಭಿಷೇಕ ನಡೆಸಲಾಗುತ್ತದೆ. ಬಸಪ್ಪನ ಕೊಂಬಿಗೆ ಕಟ್ಟಲಾಗಿರುವ ಕಾಣಿಕೆ ದುಡ್ಡನ್ನು ಎಂದಿಗೂ ಯಾರೂ ಮುಟ್ಟುವುದಿಲ್ಲ.
Advertisement
ಗ್ರಾಮ ನಿರ್ಮಾಣದ ಇತಿಹಾಸಹಬ್ಬದ ದಿನದಿಂದು ಬಹುಕಾಲದ ಹಿಂದೆ ಚಿಕ್ಕಅರಸಿ ಮತ್ತು ದೊಡ್ಡಅರಸಿ ಎಂಬ ಇಬ್ಬರು ಅಕ್ಕ-ತಂಗಿಯರಿದ್ದರು. ಅವರಿಬ್ಬರು ಎರಡು ಕೆರೆಗಳನ್ನು ಕಟ್ಟಿಸಿದರು. ನಂತರದ ದಿನಗಳಲ್ಲಿ ಚಿಕ್ಕಅರಸಿ ಬಳಿ ನಿರ್ಮಾಣವಾದ ಗ್ರಾಮವನ್ನು ಚಿಕ್ಕರಸಿನಕೆರೆ ಎಂತಲೂ, ದೊಡ್ಡರಸಿ ಬಳಿ ನಿರ್ಮಾಣವಾದ ಗ್ರಾಮವನ್ನು ದೊಡ್ಡರಸಿನಕೆರೆ ಎಂದು ನಾಮಕರಣ ಮಾಡಲಾಯಿತು.
ಪರಮಶಿವನ ಸಂಹಾರಿ ಗಣಗಳಾದ ಕಾಲ ಭೈರವ, ಅಸಿತಾಂಗ ಭೈರವ, ಸಂಹಾರ ಭೈರವ, ರುರು ಭೈರವ, ಕ್ರೋಧ ಭೈರವ, ಕಪಾಲ ಭೈರವ, ರುದ್ರ ಭೈರವ ಹಾಗೂ ಉನ್ಮತ್ತ ಭೈರವ. ಈ ಪೈಕಿ ಅತ್ಯಂತ ಬಲಿಷ್ಠ ಹಾಗೂ ದುಷ್ಟರ ಪಾಲಿನ ಸಿಂಹಸ್ವಪ್ನನಾದ ಕಾಲಭೈರವ ಇಲ್ಲಿ ನೆಲೆಸಿದ್ದಾನೆ. *ಅಣ್ಣೂರು ಸತೀಶ್