ಈ ಪುಟ್ಟ ಭೂಮಿಯಲ್ಲಿ, ಬೆಟ್ಟದಷ್ಟು ಪ್ರೀತಿ ಕೊಟ್ಟು, ಬಿಟ್ಟು ಹೋದ ಹುಡುಗಿಯ ಹುಡುಕುವುದು ನನ್ನಂಥ ಹುಂಬ ಹುಡುಗನಿಗೆ ಅಸಾಧ್ಯವೇನಲ್ಲ. ನಿನ್ನ ಎದುರು ಬಂದು ಕಣ್ಣಲ್ಲಿ ಕಣ್ಣಿಟ್ಟು, ಬಿಟ್ಟು ಹೋದ ಕಾರಣವ ಕೇಳುವುದೂ ದೊಡ್ಡ ಮಾತೇನಲ್ಲ. ಆದರೆ, ನಾನು ಎಂದೂ ಹಾಗೆ ಮಾಡಲಾರೆ…
ಪ್ರೀತಿಯ ಹುಡುಗಿ…
ಬದುಕಿನಲ್ಲಿ ಪ್ರೀತಿಯ ಸಸಿ ನೆಟ್ಟು, ಅದು ಹೂಬಿಡುವ ಮೊದಲೇ ನನ್ನನ್ನು ಬಿಟ್ಟು ಹೋದವಳು ನೀನು. ಪ್ರೀತಿಸಿದ ಜೀವ, ಹಲವು ವರ್ಷಗಳ ನಂತರವೂ ಬಿಟ್ಟೂ ಬಿಡದಂತೆ ನೆನಪಾಗುತ್ತಿದ್ದರೆ, ಖಂಡಿತಾ ಅದು ಮೊದಲ ಪ್ರೀತಿಯಾಗಿರುತ್ತದೆ. ನಿನಗೂ ನಾನು ಮೊದಲ ಪ್ರೀತಿಯಾ? ಗೊತ್ತಿಲ್ಲ. ಕಾರಣವೇ ಹೇಳದೆ, ನೀ ನನ್ನ ಬಿಟ್ಟು ಹೋಗಿ ವರ್ಷಗಳೇ ಉರುಳಿವೆ. ಈಗಲೂ ನನಗೆ ನಿನ್ನ ನೆನಪಾದಂತೆ, ನಿನಗೂ ನಾನು ನೆನಪಾಗ್ತಿàನಾ? ಮನದ ಮೂಲೆಯಲ್ಲಾದರೂ ಈ ಹುಡುಗನ ಬಗ್ಗೆ ಮರುಕವಿದೆಯಾ? ನೀ ಬಿಟ್ಟು ಹೊರಟಾಗ ಮಂಡಿಯೂರಿ ಕುಳಿತು ಮಗುವಿನಂತೆ ಅತ್ತ ನನ್ನ ಬಗ್ಗೆ ಕನಿಕರವಿದೆಯಾ? ಹೀಗೆ ಹಲವಾರು ಪ್ರಶ್ನೆಗಳು ನನ್ನನ್ನು ಕಾಡುತ್ತವೆ.
ಈ ಪುಟ್ಟ ಭೂಮಿಯಲ್ಲಿ, ಬೆಟ್ಟದಷ್ಟು ಪ್ರೀತಿ ಕೊಟ್ಟು, ಬಿಟ್ಟು ಹೋದ ಹುಡುಗಿಯ ಹುಡುಕುವುದು ನನ್ನಂಥ ಹುಂಬ ಹುಡುಗನಿಗೆ ಅಸಾಧ್ಯವೇನಲ್ಲ. ನಿನ್ನ ಎದುರು ಬಂದು ಕಣ್ಣಲ್ಲಿ ಕಣ್ಣಿಟ್ಟು, ಬಿಟ್ಟು ಹೋದ ಕಾರಣವ ಕೇಳುವುದೂ ದೊಡ್ಡ ಮಾತೇನಲ್ಲ. ಆದರೆ, ನಾನು ಎಂದೂ ಹಾಗೆ ಮಾಡಲಾರೆ. ಯಾಕೆಂದರೆ, ಆ ದಿನಗಳಲ್ಲಿ ನಿನಗೆ ಅದೆಂಥ ಅನಿವಾರ್ಯತೆಯಿತ್ತೋ? ಅಮ್ಮನ ಕಣ್ಣೀರು, ಅಪ್ಪನ ಮರ್ಯಾದೆ, ನೆಂಟರಿಷ್ಟರ ಚುಚ್ಚುಮಾತು… ಇದನ್ನೆಲ್ಲ ನಿಭಾಯಿಸುವ ಒತ್ತಡವಿತ್ತೋ ಏನೋ? ಇದೆಲ್ಲವೂ ನನ್ನ ಪ್ರೀತಿಯನ್ನು ತಿರಸ್ಕರಿಸಿ ನಡೆಯುವಷ್ಟು ಗಟ್ಟಿ ಮನಸ್ಸನ್ನು ನಿನಗೆ ತಂದು ಕೊಟ್ಟಿತೇನೋ. ಇದು ನನ್ನ ಅಂದಾಜು…
ನನ್ನನ್ನು ಅಷ್ಟೊಂದು ಪ್ರೀತಿಸಿದ ನಿನಗೆ ನನ್ನ ಬಿಟ್ಟು ಹೊರಡಲು ಅದೆಷ್ಟು ಸಂಕಟವಾಗಿರಬಹುದು. ನಿನ್ನ ಕೈಗಳಲ್ಲರಳಿದ ಮೆಹಂದಿ ರಂಗಿನ ಹಿಂದೆ ನೋವಿತ್ತಾ? ಗೊತ್ತಿಲ್ಲ. ದಡ್ಡಿ, ದೇವರಂಥ ಗೆಳೆಯ ಬೇಕು. ನಾನು ಏನೂ ಹೇಳದಿದ್ರೂ ಅವನಿಗೆಲ್ಲಾ ತಿಳಿಯಬೇಕು ಅಂತ ಪ್ರತಿ ಹುಡುಗಿಯೂ ಬಯಸುತ್ತಾಳೆ. ಅದು ತಪ್ಪಲ್ಲ… ಆದರೆ, ಯಾವ ಹುಡುಗನೂ ದೇವರಾಗಲಾರ.
ನೀ ಹೇಳದೇನೆ ನನಗೆ ಎಲ್ಲಾ ತಿಳಿಯಬೇಕು ಅಂತ ಬಯಸುವುದು ತಪ್ಪಲ್ಲ. ಆದರೆ, ಅಂಥ ವಿದ್ಯೆ ಕಲಿಸಲು ಯಾವ ವಿಶ್ವವಿದ್ಯಾಲಯಗಳಲ್ಲೂ ಕೋರ್ಸುಗಳಿಲ್ಲ. ನೀ ಬಿಟ್ಟು ಹೊರಟ ಕಾರಣವ ತಿಳಿಯುವ ಪ್ರಯತ್ನದಲ್ಲಿದ್ದೇನೆ. ಆದರೆ, ಆ ಯತ್ನದಲ್ಲಿ ಪ್ರತಿ ಬಾರಿಯೂ ಸೋಲುತ್ತಿದ್ದೇನೆ. ನೀ ಇದ್ದಷ್ಟು ದಿನ ನನಗೆ ಬೆಟ್ಟದಷ್ಟು ಪ್ರೀತಿ ಕೊಟ್ಟಿದ್ದೆ. ಬಿಟ್ಟು ಹೊರಟಾಗ ಅಷ್ಟೇ ನೋವನ್ನೂ ಕೊಟ್ಟೆ ಎನ್ನುವುದು ವಿಪರ್ಯಾಸ. ನೀ ಹಾಳುಗೆಡವಿದ ಈ ಹಾಳು ಹೃದಯದಲ್ಲಿ ಮತ್ತೆ ಪ್ರೀತಿ ಚಿಗುರೊಡೆಯಲಾರದು ಎನ್ನುವುದು ಸತ್ಯ. ಆದರೆ, ಮೊನ್ನೆ ಅಮ್ಮ ಯಾವುದೋ ಹುಡುಗಿಯನ್ನು ನೋಡಿದ್ದಾರಂತೆ. ಅವರ ಒತ್ತಾಯಕ್ಕೆ ಮದ್ವೆಗೂ ಒಪ್ಪಿದ್ದೇನೆ. ಇನ್ನೇನು ಕೆಲವು ದಿನಗಳಲ್ಲಿ ಮದ್ವೆಯಾಗುತ್ತಿದ್ದೇನೆ ಕೂಡ. ಅವಳ ಕೈ ಹಿಡಿದ ದಿನದಿಂದಾದರೂ ನನ್ನ ನೆನಪುಗಳ ಗೂಡಿನಿಂದ ಶಾಶ್ವತವಾಗಿ ಹೊರಟು ಬಿಡೇ… ಪ್ಲೀಸ್! ಅವಳಿಗಾದರೂ ದೇವರಾಗಲು ಪ್ರಯತ್ನಿಸುತ್ತೇನೆ.
ಗಣೇಶ ಆರ್.ಜಿ., ಶಿವಮೊಗ್ಗ