ಕಿನ್ನಿಗೋಳಿ: ಅಂತಿಮ ವರ್ಷದ ಎಂಜಿನಿಯರಿಂಗ್ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿಯೊಬ್ಬರು ದೀಪಾವಳಿ ಮತ್ತು ಗೂಡುದೀಪದ ಮೇಲೆ ತೋರುತ್ತಿರುವ ಪ್ರೀತಿ ಗಮನ ಸೆಳೆಯುತ್ತಿದೆ. ಬಾಗಲಕೋಟೆ ಮೂಲದ ವಿದ್ಯಾರ್ಥಿ ಅಶ್ಫಾಕ್ ಅಹಮದ್ ಎಂಬವರು ಈ ಬಾರಿ ದೀಪಾವಳಿಗೆ ಒಟ್ಟು 17 ಸಾಂಪ್ರದಾಯಿಕ ಗೂಡುದೀಪಗಳನ್ನು ರಚಿಸಿದ್ದಾರೆ.
ಅಶ್ಫಾಕ್ ಬಾಗಲಕೋಟೆಯವರಾದರೂ ಈಗ ವಾಸವಾಗಿರುವುದು ಮಂಗಳೂರು ತಾಲೂಕಿನ ಏಳಿಂಜೆ ಗ್ರಾಮದ ಕೋಂಜಲಗುತ್ತುವಿನಲ್ಲಿ. ಇಲ್ಲಿನ ಕೌಶಲ್ಯ ಶೆಟ್ಟಿ ಎಂಬವರು ಅಶ್ಫಾಕ್‌ನನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಪೋಷಿಸುತ್ತಿದ್ದು, ಆತನ ವ್ಯಾಸಂಗ ಖರ್ಚು ವೆಚ್ಚಗಳನ್ನೂ ನೋಡಿಕೊಳ್ಳುತ್ತಿದ್ದಾರೆ. ಈ ವಿದ್ಯಮಾನ ಕೋಮುಸೌಹಾರ್ದತೆಗೆ ಸಾಕ್ಷಿಯಾಗಿರುವ ಜತೆಗೆ ಯುವಕನೂ ಇಲ್ಲಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಬಹುಮುಖ ವ್ಯಕ್ತಿತ್ವದ ಗ್ರಾಮೀಣ ಪ್ರತಿಭೆ: ಅಶ್ಫಾಕ್ ಕಳೆದ ಹಲವಾರು ವರ್ಷಗಳಿಂದ ಸಾಂಪ್ರದಾಯಿಕ ಗೂಡುದೀಪ ತಯಾರಿಸುತ್ತಿದ್ದಾರೆ. ಕಳೆದ ತಿಂಗಳು ರಜೆಯ ಸಮಯದಲ್ಲಿ ರಾತ್ರಿ ಹಗಲು ಕುಳಿತು 17 ಸಾಂಪ್ರದಾಯಿಕ, ದೊಡ್ಡಗಾತ್ರದ ಗೂಡು ದೀಪ ರಚಿಸಿದ್ದಾರೆ. ಆದರೆ, ಯಾವುದೇ ಗೂಡುದೀಪಗಳನ್ನು ಮಾರಾಟ ಮಾಡದೆ ತನ್ನ ಮಿತ್ರರಿಗೆ ಹಂಚಿ ಖುಷಿಪಟ್ಟಿದ್ದಾರೆ.
ಹೈನುಗಾರಿಕೆಯಲ್ಲೂ ತೊಡಗಿಸಿ ಕೊಂಡಿರುವ ಅಶ್ಫಾಕ್ ದನ ಸಾಕಣೆಯಲ್ಲಿ ಎತ್ತಿದ ಕೈ. ತನ್ನ ಶೈಕ್ಷಣಿಕ ಒತ್ತಡಗಳ ನಡುವೆಯೂ ದನಗಳ ಹಾಲು ಕರೆದು ಡೇರಿಗೆ ಮುಟ್ಟಿಸುತ್ತಾರೆ. ಕೋಳಿ ಸಾಕಣೆ, ಕೃಷಿ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲ. ತುಂಬ ರುಚಿಕರವಾಗಿ ಅಡುಗೆ ಕೂಡಾ ಮಾಡುತ್ತಾರೆ.
ಅಪಾರ ಆಸಕ್ತಿ
ಹಿಂದಿನಿಂದಲೂ ಹಿಂದೂ ಹಬ್ಬಗಳ ಬಗ್ಗೆ ಅಪಾರ ಆಸಕ್ತಿ ಇತ್ತು. ಮಕ್ಕಳ ಸಹಕಾರದಿಂದ ಸಾಂಪ್ರದಾಯಿಕ ಗೂಡುದೀಪ ತಯಾರಿಯಲ್ಲಿ ತೊಡಗಿದೆ. ಕೌಶಲ್ಯ ಶೆಟ್ಟಿಯವರ ಪ್ರೋತ್ಸಾಹದಿಂದ ಇದು ಸಾಧ್ಯವಾಯಿತು.-ಅಶ್ಫಾಕ್, ಎಂಜಿನಿಯರಿಂಗ್ ವಿದ್ಯಾರ್ಥಿ
-ರಘುನಾಥ ಕಾಮತ್ ಕೆಂಚನಕೆರೆ