ಮೆಲ್ಬೋರ್ನ್: ಪ್ರವಾಸಿ ಭಾರತದ ವಿರುದ್ದ ನವೆಂಬರ್ 22ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟವಾಗಿದೆ. ಐದು ಪಂದ್ಯಗಳ ಬಾರ್ಡರ್ ಗಾವಸ್ಕರ್ ಟ್ರೋಫಿಯ (Border Gavaskar Trophy) ಮೊದಲ ಪಂದ್ಯವು ಪರ್ತ್ ನಲ್ಲಿ ನಡೆಯಲಿದೆ.
ಮೊದಲ ಪಂದ್ಯಕ್ಕಾಗಿ 13 ಆಟಗಾರರ ತಂಡ ಪ್ರಕಟಿಸಲಾಗಿದೆ. ಅಚ್ಚರಿ ಎಂಬಂತೆ ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಸ್ ಅವರನ್ನು ಆಯ್ಕೆ ಮಾಡಲಾಗಿದೆ.
ಡೇವಿಡ್ ವಾರ್ನರ್ ಅವರ ನಿವೃತ್ತಿಯ ಬಳಿಕ ಉಸ್ಮಾನ್ ಖ್ವಾಜಾ ಅವರಿಗೆ ಆರಂಭಿಕರಾಗಿ ಸರಿಯಾದ ಜೊತೆ ಸಿಕ್ಕಿಲ್ಲ. ಕೆಲ ಸರಣಿಯಲ್ಲಿ ಸ್ಟೀವ್ ಸ್ಮಿತ್ ಅವರಿಗೆ ಅವಕಾಶ ನೀಡಿದ್ದರೂ, ಆರಂಭಿಕ ಆಟಗಾರನಾಗಿ ಅವರು ಯಶಸ್ಸು ಕಂಡಿಲ್ಲ. ಹೀಗಾಗಿ ಇದೀಗ ಯುವ ಆಟಗಾರ ನಾಥನ್ ಮೆಕ್ಸ್ವೀನಿ ಅವರಿಗೆ ಪರ್ತ್ ಟೆಸ್ಟ್ ಗೆ ಆರಂಭಿಕನಾಗಿ ಅವಕಾಶ ನೀಡಿದೆ. ಭಾರತ ಎ ವಿರುದ್ದದ ಮೊದಲ ಟೆಸ್ಟ್ ನಲ್ಲಿ ಅವರು 88 ರನ್ ಗಳಿಸಿದ್ದರು.
ಮಧ್ಯಮ ಕ್ರಮಾಂಕದಲ್ಲಿ ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಟ್ರಾವಿಸ್ ಹೆಡ್, ವಿಕೆಟ್ ಕೀಪರ್ ಆಗಿ ಅಲೆಕ್ಸ್ ಕ್ಯಾರಿ ಮತ್ತು ಆಲ್ ರೌಂಡರ್ ಆಗಿ ಮಿಚೆಲ್ ಮಾರ್ಶ್ ಸ್ಥಾನ ಪಡೆದಿದ್ದಾರೆ. ಗಾಯಗೊಂಡಿರುವ ಕ್ಯಾಮರೂನ್ ಗ್ರೀನ್ ಸರಣಿ ತಪ್ಪಿಸಿಕೊಳ್ಳಲಿದ್ದಾರೆ.
ವೇಗಿಗಳಾಗಿ ನಾಯಕ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ ವುಡ್ ಮತ್ತು ಸ್ಕಾಟ್ ಬೊಲ್ಯಾಂಡ್ ಸ್ಥಾನ ಪಡೆದಿದ್ದಾರೆ. ಸ್ಪಿನ್ನರ್ ನಾಥನ್ ಲಯಾನ್ ತಂಡದಲ್ಲಿದ್ದಾರೆ.
ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಜೋಶ್ ಹೇಜಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಯಾನ್, ಮಿಚೆಲ್ ಮಾರ್ಶ್, ನಾಥನ್ ಮೆಕ್ಸ್ವೀನಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್