ಹಟ್ಟಿಚಿನ್ನದಗಣಿ: ಕಳೆದ ಇಪ್ಪತ್ತು ದಿನಗಳಿಂದ ಕುಡಿವ ನೀರು ಸರಬರಾಜು ಸ್ಥಗಿತಗೊಂಡಿದ್ದರಿಂದ ಪಟ್ಟಣದ ನಾಗರಿಕರು ಪರದಾಡುವಂತಾಗಿದೆ.
ಪಟ್ಟಣದಲ್ಲಿ ಈ ಮೊದಲು 4 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಆದರೆ, ಕಳೆದ ಇಪ್ಪತ್ತು ದಿನಗಳಿಂದ ಸಂಪೂರ್ಣ ನೀರು ಸರಬರಾಜು ನಿಲ್ಲಿಸಿರುವುದರಿಂದ ಪಟ್ಟಣದ ಜನರು ಕೊಡಗಳನ್ನು ಹಿಡಿದುಕೊಂಡು ಸುಮಾರು 2 ಕಿ.ಮೀ. ದೂರದ ಹಟ್ಟಿ ಕ್ಯಾಂಪ್‌ಗೆ ಅಲೆದಾಡುವಂತಾಗಿದೆ.
ಹಟ್ಟಿ ಕ್ಯಾಂಪಿನ ಪೊಲೀಸ್ ಠಾಣೆಯ ಹತ್ತಿರವಿರುವ ಸಾರ್ವಜನಿಕ ನಳ ಹಾಗೂ ಲಿಂಗಾವಧೂತ ದೇವಸ್ಥಾನದ ಹತ್ತಿರವಿರುವ ಸಾರ್ವಜನಿಕ ನಳಗಳಿಂದ ಜನರು ನೀರು ತುಂಬಿಕೊಂಡು ಹೋಗುತ್ತಿದ್ದಾರೆ. ಇನ್ನೂ ಕೆಲ ಮಹಿಳೆಯರು 2 ಕಿ.ಮೀ. ವರೆಗೆ ನಡೆದುಕೊಂಡು ಹೋಗಿ ನೀರು ತರುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣಕ್ಕೆ ನೀರು ಪೂರೈಸಲು ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಯಡಿ ಕೋಟ್ಯಂತರ ರೂ. ವ್ಯಯಿಸಿ ಯೋಜನೆ ಕೈಗೊಂಡರು ಜನರ ನೀರಿನ ಹಾಹಾಕಾರ ತಪ್ಪಿಲ್ಲ.
ಕಳೆದ ವಾರ ಹಟ್ಟಿ ಪ.ಪಂ.ಗೆ ಶಾಸಕ ಡಿ.ಎಸ್. ಹೂಲಗೇರಿ ಭೇಟಿ ನೀಡಿದಾಗ ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಘೇರಾವ್ ಹಾಕಿದ್ದರು. ನಂತರ ಶಾಸಕರು ನಾಳೆಯೇ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಒಂದು ವಾರ ಕಳೆದರೂ ಶಾಸಕರು ಕ್ರಮ ಕೈಗೊಳ್ಳದೇ ಇರುವುದರಿಂದ ಹಟ್ಟಿ ಪಪಂಗೆ ಬೀಗ ಹಾಕಿ ಧರಣಿ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.