Advertisement

Hassan – Sakleshpur ರಸ್ತೆ ಕಾಮಗಾರಿ ಮಾರ್ಚ್‌ನಲ್ಲಿ ಪೂರ್ಣ: ಸತೀಶ್‌ ಜಾರಕಿಹೊಳಿ

08:39 PM Jun 24, 2023 | Team Udayavani |

ಸಕಲೇಶಪುರ: ಹಾಸನದಿಂದ ಸಕಲೇಶಪುರ ಬೈಪಾಸ್‌ವರೆಗೆ ನ.1ರೊಳಗೆ ಕಾಮಗಾರಿ ಮುಗಿಸಲು ಸಮಯ ನೀಡಿದ್ದೇವೆ. ಮುಂದಿನ ಕಾಮಗಾರಿಯನ್ನು ಮುಗಿಸಲು ಮುಂದಿನ ವರ್ಷ ಮಾ. 24ರ ವರೆಗೆ ಕಾಲಾವಕಾಶವನ್ನು ಗುತ್ತಿಗೆದಾರರು ಕೇಳಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

Advertisement

ತಾಲೂಕಿನ ದೋಣಿಗಾಲ್‌ ಬಳಿ ಭೂಕುಸಿತ ಪ್ರದೇಶಕ್ಕೆ ರಾಷ್ಟ್ರೀಯ ಹೆದ್ದಾರಿ 75ರ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಕಾಮಗಾರಿಗಾಗಿ ಸಂಪೂರ್ಣವಾಗಿ ಶಿರಾಡಿ ಘಾಟಿ ರಸ್ತೆಯನ್ನು ಮುಚ್ಚುವುದು ಸಾಧ್ಯವಿಲ್ಲ. ಇದು ಬೆಂಗಳೂರು-ಮಂಗಳೂರಿನ ಪ್ರಮುಖ ಸಂಪರ್ಕ ರಸ್ತೆ. ಏಕಮುಖ ಸಂಚಾರದ ಬಗ್ಗೆ ಚಿಂತಿಸಿದ್ದೇವೆ ಎಂದರು.

ತಾಂತ್ರಿಕ ಕಾರಣದಿಂದ ವಿಳಂಬ
ರಾಜ್ಯದಲ್ಲಿ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆ ಇದಾಗಿದ್ದು, 2017ರಲ್ಲಿ ಆರಂಭಗೊಂಡ ಕಾಮಗಾರಿ ಸತತ ಏಳು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಎರಡು-ಮೂರು ವರ್ಷಗಳ ಹಿಂದೆಯೇ ಕಾಮಗಾರಿ ಮುಗಿಯಬೇಕಿತ್ತು. ತಾಂತ್ರಿಕ ತೊಂದರೆಯಿಂದ ಮುಗಿಸಲು ಆಗಿಲ್ಲ. ನಾನು ಲೋಕೋಪಯೋಗಿ ಮಂತ್ರಿ ಆದ ಮೇಲೆ ಅಧಿಕಾರಿಗಳ ಸಭೆ ಮಾಡುವಾಗ ಈ ಸಮಸ್ಯೆ ಗಮನಕ್ಕೆ ಬಂದಿತ್ತು. ಖುದ್ದು ವೀಕ್ಷಿಸಿ ಸ್ಥಳದಲ್ಲೇ ಪರಿಹಾರ ಮಾಡಲು ಬಂದಿದ್ದೇನೆ ಎಂದರು.

ಕಾಮಗಾರಿ ಮುಗಿಸಲು ಎರಡು ಸಮಯ ಕೊಟ್ಟಿದ್ದೇವೆ. ನ.1 ಮತ್ತು ಮಾ.24. ಇದರೊಳಗೆ ಮುಗಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ ಎಂದರು.

ಅಧಿಕಾರಿಗಳ ಮಳೆಗಾಲದಲ್ಲಿ ಭೂಕುಸಿತವಾಗುವ ಸಾಧ್ಯತೆಯಿರುವ ಕಡೆಯಲ್ಲೆಲ್ಲ ಕಡ್ಡಾಯವಾಗಿ ರಿಟೈನಿಂಗ್‌ ಗೋಡೆ ಹಾಗೂ ಗಂಭೀರ ಸಮಸ್ಯೆ ಇರುವಲ್ಲಿ ಕಾಂಕ್ರೀಟ್‌ ಗೋಡೆ ಕಟ್ಟಲು ಸೂಚಿಸಿದ್ದೇವೆ ಎಂದರು.

Advertisement

ಸುರಂಗ ಮಾರ್ಗ ಹೊಸ ಯೋಜನೆ
ಶಿರಾಡಿ ಘಾಟಿ ಮಾರ್ಗದಲ್ಲಿ ಸುರಂಗ ಮಾರ್ಗ ನಿರ್ಮಾಣ ಹೊಸ ಯೋಜನೆಯಾಗಿದೆ. ಒಟ್ಟು 30 ಕಿ.ಮೀ.ಗೆ ರೂಪುರೇಷೆ ಹಾಕಲಾಗಿದ್ದು, ರಾಜ್ಯಕ್ಕೆ ಇದೊಂದು ಹೆಮ್ಮೆಯ ಯೋಜನೆಯಾಗಿದೆ. ಪ್ರಾಥಮಿಕ ಹಂತದ ರೂಪುರೇಷೆ ಸಿದ್ಧವಾಗಿದ್ದು, ಕೇಂದ್ರ ಮಂತ್ರಿಗಳು ಒಪ್ಪಿಗೆ ಕೊಟ್ಟ ಮೇಲೆ ಅಂತಿಮ ರೂಪ ನೀಡಲಾಗುವುದು ಎಂದರು.
ಸುರಂಗ ಮಾರ್ಗ ನಿರ್ಮಾಣವಾದರೆ ವಾಹನಗಳ ಓಡಾಟದ ವೇಗ ಹೆಚ್ಚಾಗುತ್ತದೆ. ವಾಹನಗಳು ಒಂದು ಕಡೆಯಿಂದ ಸುರಂಗದಲ್ಲಿ ಹಾಗೂ ಇನ್ನೊಂದು ಕಡೆ ರಸ್ತೆಯಲ್ಲಿ ಸಂಚರಿಸುತ್ತವೆ. ಅಪಘಾತಗಳು ಕಡಿಮೆಯಾಗಲಿದೆ ಎಂದರು.
ಶಾಸಕ ಸಿಮೆಂಟ್‌ ಮಂಜು, ವಿಧಾನ ಪರಿಷತ್‌ ಸದಸ್ಯ ನಾಗರಾಜ್‌ ಯಾದವ್‌, ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next