Advertisement
ಶೋಭಾ ಅವರಿಗೆ ಬಾಲ್ಯದಿಂದಲೂ ಕಲೆಯಲ್ಲಿ ಅಪಾರ ಆಸಕ್ತಿ. ನೃತ್ಯ ಸಂಯೋಜನೆ, ನಾಟಕ, ಅಭಿನಯವಷ್ಟೇ ಅಲ್ಲದೆ, ದೂರದರ್ಶನ 1 ಮತ್ತು 9ರ ಧಾರಾವಾಹಿಗಳಲ್ಲೂ ಅವರು ನಟಿಸಿದ್ದಾರೆ. ಒಳ್ಳೆಯ ಹುದ್ದೆಯ ಕೆಲಸವಿದ್ದರೂ, ಕಲೆಯ ಬಗೆಗಿನ ಒಲವು ಕಡಿಮೆಯಾಗಿರಲಿಲ್ಲ. ಹಾಗಾಗಿ, 2011ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು.
ಎಲ್ಲ ಕಲೆಗಳನ್ನು ಒಂದೇ ಸೂರಿನಡಿ ಕಲಿಸುವಂಥ ಕಲಾಶಾಲೆಯನ್ನು ಪ್ರಾರಂಭಿಸಬೇಕು ಎಂಬುದು ಶೋಭಾ ಅವರ ಕನಸಾಗಿತ್ತು. ಆ ನಿಟ್ಟಿನಲ್ಲಿ ಶುರುವಾಗಿದ್ದು, “ಕಿಡ್ಸ್ ಪ್ಲಾನೆಟ್’. ಹತ್ತು ಮಕ್ಕಳು ಮತ್ತು ಒಬ್ಬ ಶಿಕ್ಷಕರಿಂದ 2011ರಲ್ಲಿ ಪ್ರಾರಂಭವಾದ ಶಾಲೆ ಈಗ ದೊಡ್ಡದಾಗಿ ಬೆಳೆದಿದೆ. ನೂರಾರು ಮಕ್ಕಳು ಈ ಶಾಲೆಯಿಂದ ಕಲಾ ಪ್ರವೀಣರಾಗಿದ್ದಾರೆ. ಈಗ ಅಬಾಕಸ್, ಭರತನಾಟ್ಯ, ಚೆಸ್, ಕ್ಯಾಲಿಗ್ರಫಿ, ಚಿತ್ರಕಲೆ, ಗಿಟಾರ್, ಕೀಬೋರ್ಡ್, ಮಾರ್ಷಲ್ ಆರ್ಟ್ಸ್, ಶ್ಲೋಕ ವಾಚನ, ಪಿಟೀಲು, ಶಾಸ್ತ್ರೀಯ ಸಂಗೀತ ಗಾಯನ, ಮುಂತಾದ ವಿಷಯಗಳನ್ನು ಕಲಿಸುವ 8 ಕಲಾ ಶಿಕ್ಷಕರ ತಂಡವಿದೆ. ಈ ಎಲ್ಲ ಕೋರ್ಸ್‌ಗಳು ಐಎಸ್‌ಒ, ರಾಜ್ಯ ಮತ್ತು ರಾಷ್ಟ್ರೀಯ ಮಂಡಳಿಗಳಿಂದ ಮಾನ್ಯತೆ ಪಡೆದಿವೆ. ಇಲ್ಲಿ, ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯ್ತಿಯೂ ಉಂಟು. ಹಸನ್ಮುಖಿ ತಂಡ
ಕಿಡ್ಸ್ ಪ್ಲಾನೆಟ್‌ಗೆ ಬರುವ ಮಕ್ಕಳ ತಾಯಂದಿರಲ್ಲಿ ಬಹುತೇಕರು ಗೃಹಿಣಿಯರೇ ಇದ್ದರು. ಕೆಲವರು ಮಾತ್ರ ಕಸೂತಿ, ಹೊಲಿಗೆ, ಬ್ಯೂಟಿ ಪಾರ್ಲರ್‌ನಿಂದ ಸಂಪಾದನೆಗೆ ದಾರಿ ಮಾಡಿಕೊಂಡಿದ್ದರು. ಅವರಿಗೆ ಉದ್ಯೋಗಾವಕಾಶ ನೀಡುವ ಸಲುವಾಗಿ, 2013ರಲ್ಲಿ ಶೋಭಾ “ಹಸನ್ಮುಖಿ’ ಎಂಬ ಮಹಿಳಾ ಸಂಘ ತೆರೆದರು. ಮಹಿಳೆಯರೆಲ್ಲಾ ಒಟ್ಟಾಗಿ ತಮಗೆ ತಿಳಿದ ಕೌಶಲಗಳನ್ನು ಹಂಚಿಕೊಳ್ಳಲು ಈ ಸಂಘ ವೇದಿಕೆಯಾಗಿದೆ. ಅಷ್ಟೇ ಅಲ್ಲದೆ, ಅನಾಥಾಶ್ರಮಗಳಿಗೆ ಹಣ ಸಂಗ್ರಹಿಸುವುದು, ಬಡ ಮಕ್ಕಳಿಗೆ ಆರ್ಥಿಕ ಸಹಾಯ ಮಾಡುವುದು, ಮಹಿಳೆಯರ ಸ್ವಉದ್ಯೋಗಕ್ಕೆ ನೆರವಾಗುವುದು, ಮುಂತಾದ ಸಮಾಜಮುಖಿ ಚಟುವಟಿಕೆಗಳಲ್ಲೂ ಈ ಸಂಘ ಸಕ್ರಿಯವಾಗಿದೆ.
Related Articles
Advertisement