ಬೆಂಗಳೂರು: ಸೌರಶಕ್ತಿ ಕುರಿತು ಮಹೋನ್ನತ ಸಾಧನೆ ಮಾಡಿರುವ ಹಾಗೂ ಮ್ಯಾಗ್ಸೆಸ್ಸೆ ಪುರಸ್ಕೃತ ಡಾ. ಹರೀಶ್ ಹಂದೆ ಅವರ ಸಾಧನೆಗಳು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದ್ದು, ಅವರ ಸಾಧನೆಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕೆಂದು ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ ಒತ್ತಾಹಿಸಿದ್ದಾರೆ.
ಬಸವನಗುಡಿಯ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಭಾನುವಾರ ನಡೆದ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಡಾ. ಹರೀಶ್ ಹಂದೆ ಕುರಿತು ಭಾಸ್ಕರ್ ಹೆಗಡೆ ಬರೆದ ಪುಸ್ತಕದ 3ನೇ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆ ಹೊಂದಿರುವ ಹರೀಶ್ ಹಂದೆ ಇಂದು ತಮ್ಮ ಸಾಧನೆ ಮೂಲಕ ಜಗತ್ತಿಗೆ ಪರಿಚಿತರು. ಅವರ ಸೌರಶಕ್ತಿ ಕುರಿತಾದ ಅಧ್ಯಯನ ಹಾಗೂ ಕಠಿಣ ಪರಿಶ್ರಮದಿಂದ ಮುಂದೇ ಬಂದಿರುವ ಅವರ ಜೀವನ ಇಂದಿನ ಯುವ ಸಮೂಹಕ್ಕೆ ಮಾದರಿ ಎಂದು ಹೇಳಿದರು.
ಕಾಂತಾವರ ಕನ್ನಡ ಸಂಘವು 2006 ರಿಂದ ಸಾಧಕರನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ. ಉಡುಪಿ ಜಿಲ್ಲೆಯ ಅನೇಕ ಸಾಧಕರನ್ನು ಪರಿಚಯಿಸಲಾಗಿದ್ದು, ಈವರೆಗೆ 256 ಪುಸ್ತಕಗಳನ್ನು ಪ್ರಕಟಿಸಿದೆ. ಇನ್ನೂ ಸಂಘದ ವತಿಯಿಂದ ಕಟ್ಟಡ ನಿರ್ಮಿಸಲಾಗುತ್ತಿದ್ದು, ಸರ್ಕಾರದಿಂದ ಸೂಕ್ತ ಅನುದಾನ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ತಿಳಿಸಿದರು.
ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ಮಾತನಾಡಿ, ಹರೀಶ್ ಹಂದೆ ಅವರ ಜೀವನವನ್ನು ಪರಿಚಯಿಸುವ ಕಾರ್ಯವಾಗಬೇಕಿದೆ. ಅವರ ಸಾಧನೆಗಳು ಇಂದಿನ ಯುವ ಸಮೂಹಕ್ಕೆ ಅವಶ್ಯಕ. ಈ ನಿಟ್ಟಿನಲ್ಲಿ ಡಾ. ಹರೀಶ್ ಹಂದೆ ಕುರಿತಾಗಿ ಇನ್ನಷ್ಟು ವಿವರಗಳನ್ನು ಸಂಶೋಧಿಸಿ ಮುಂದಿನ ಆರು ತಿಂಗಳೊಳಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದಲೇ ಪುಸ್ತಕವನ್ನು ಪ್ರಕಟಿಸಲಾಗುವುದು.
ಆ ನಂತರದಲ್ಲಿ ಸಾಧನೆಗಳನ್ನು ಪಠ್ಯದಲ್ಲಿ ಪರಿಚಯಿಸುವುದರ ಕುರಿತು ವಿಶ್ವವಿದ್ಯಾಲಯಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು. ಹಿರಿಯ ಪತ್ರಕರ್ತ ರವೀಂದ್ರ ಭಟ್ಟ, ಸೆಲ್ಕೋ ಸೋಲಾರ್ ಲೈಟ್ ಪ್ರೈ.ಲಿ.ನ ಡಿಜಿಎಂ ಜಗದೀಶ್ ಪೈ, ಲೇಖಕ ಮೋಹನ ಭಾಸ್ಕರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.