Advertisement

ಕಠಿನ ನಿರ್ಬಂಧ: ನಾವೆಷ್ಟು ಸಿದ್ಧ? ಸರಕಾರ, ಜನರು ಈಗಲೇ ತಯಾರಾಗಲಿ

01:16 AM Apr 19, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಸರಣದ ವೇಗವು ಸರಕಾರವನ್ನು ಕಠಿನ ನಿರ್ಬಂಧ ಕೈಗೊಳ್ಳುವ ಅನಿವಾರ್ಯಕ್ಕೆ ಸಿಲುಕಿಸಿದೆ. ಮತ್ತೆ ಲಾಕ್‌ಡೌನ್‌ನ ಉರುಳಿಗೆ ಸಿಲುಕಿ ನರಳಬೇಕಾಗಬಹುದೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲೂ ಚರ್ಚೆ ಆರಂಭವಾಗಿದೆ. ಈ ಬಾರಿ ಲಾಕ್‌ಡೌನ್‌ ಘೋಷಿಸುವುದಿಲ್ಲ ಎಂದು ಈಗಾಗಲೇ ಸಿಎಂ ಸಹಿತ ಹಲವು ಸಚಿವರು ಸ್ಪಷ್ಟಪಡಿಸಿದ್ದಾರೆ. ಆದರೆ ಜನರು ಸಹಕರಿಸದಿದ್ದರೆ ಸರಕಾರ ಅಸಹಾಯಕ ಮತ್ತು ಅನಿವಾರ್ಯವಾಗಿ ಕಠಿನ ಕ್ರಮ ಕೈಗೊಳ್ಳಲೇಬೇಕಾಗುತ್ತದೆ. ಆದರೆ ನಿರ್ಬಂಧಗಳನ್ನು ಜಾರಿ ಮಾಡುವ ಮುನ್ನ ಜನರ ಹಿತದೃಷ್ಟಿಯಿಂದ ಮತ್ತು ಜನಸಾಮಾನ್ಯರನ್ನು ಸಂಕಷ್ಟದಿಂದ ಪಾರು ಮಾಡುವ ಕೆಲವು ಮಾರ್ಗೋಪಾಯಗಳನ್ನು ಸರಕಾರ ಕಂಡುಕೊಳ್ಳಬೇಕು. ಕಳೆದ ಲಾಕ್‌ಡೌನ್‌ ಸಮಯದ ಅವಾಂತರಗಳು ಈ ಬಾರಿ ಆಗದಂತೆ ಕ್ರಮ ಕೈಗೊಳ್ಳಬೇಕು.

Advertisement

ಕಾಲಾವಕಾಶ ಕೊಡಿ
ಸರಕಾರದ ಬಹುತೇಕ ಮಾರ್ಗಸೂಚಿಗಳು, ಘೋಷಣೆಗಳು ರಾತ್ರಿ 8ರ ಬಳಿಕವೇ ಪ್ರಕಟವಾಗುತ್ತವೆ. ಕಠಿನ ನಿರ್ಬಂಧಗಳನ್ನು ಕನಿಷ್ಠ 24 ಅಥವಾ 48 ತಾಸು ಮುನ್ನ ಘೋಷಿಸಬೇಕು. ಆಗ ಜನರಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗು ತ್ತದೆ. ಬೇರೆ ಊರುಗಳಿಂದ ಬಂದವರು, ಕಾರ್ಮಿಕರು ಮುಂತಾದವರಿಗೆ ಊರುಗಳಿಗೆ ಮರಳಲು ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.

ಗಾರ್ಮೆಂಟ್‌ ನೌಕರರಿಗೆ ಸಹಾಯ
ಕಳೆದ ಲಾಕ್‌ಡೌನ್‌ನಿಂದ 5 ಲಕ್ಷಕ್ಕೂ ಹೆಚ್ಚು ಗಾರ್ಮೆಂಟ್‌ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಉದ್ಯೋಗ ನಷ್ಟ, ವೇತನ ನಷ್ಟ ಅನುಭವಿಸಿದ್ದರು. ಈ ಬಾರಿ ಸರಕಾರ ನಿರ್ಬಂಧ ಘೋಷಿಸುವ ಮುನ್ನ ಗಾರ್ಮೆಂಟ್‌ ಉದ್ಯೋಗಿಗಳಿಗೆ ಕನಿಷ್ಠ ವೇತನ, ಲಾಕ್‌ಡೌನ್‌ ಅವಧಿ ಮುಗಿಯವ ವರೆಗೂ ಆಹಾರದ ಕಿಟ್‌, ಮನೆ ಬಾಡಿಗೆ ಕಡಿತ ಮತ್ತಿತರ ನಿರ್ಧಾರ ಕೈಗೊಳ್ಳಬೇಕು.

ಚಾಲಕರ ಕಷ್ಟ ಪರಿಗಣಿಸಿ
ಹಲವು ತಿಂಗಳು ಆದಾಯವಿಲ್ಲದೆ ಸುಮಾರು 7 ಲಕ್ಷಕ್ಕೂ ಹೆಚ್ಚು ಚಾಲಕರು ಕಷ್ಟಪಟ್ಟಿದ್ದರು. ಇವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ಮುಂಚಿತವಾಗಿಯೇ ಜೀವನ ನಿರ್ವಹಣೆಗೆ ಅಗತ್ಯ ಆಹಾರ ಮತ್ತು ಆರ್ಥಿಕ ನೆರವು ನೀಡುವುದಕ್ಕೆ ಸಿದ್ಧತೆ ನಡೆಯಬೇಕು.

ಹಿರಿಯ ನಾಗರಿಕರಿಗೆ ಸ್ಪಂದಿಸಿ
ಕಳೆದ ಬಾರಿ ಲಾಕ್‌ಡೌನ್‌ ಸಂದರ್ಭದಲ್ಲಿ ಹಲವು ಕ್ಲಿನಿಕ್‌ಗಳು ಬಂದ್‌ ಆಗಿದ್ದವು. ಆಸ್ಪತ್ರೆಗಳಿಗೆ ತೆರಳಿದರೆ ಕೊರೊನಾ ಪೀಡಿತರಿಗಷ್ಟೇ ಚಿಕಿತ್ಸೆ ನೀಡಲಾಗಿತ್ತು. ಇಂಥದ್ದಕ್ಕೆ ಸರಕಾರ ಈ ಬಾರಿ ಸೂಕ್ತ ಪರಿಹಾರ ಕಲ್ಪಿಸಬೇಕು. ಹಿರಿಯ ನಾಗರಿಕರು, ಆರೋಗ್ಯ ಸಮಸ್ಯೆ ಇರುವವರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಕಲ್ಪಿಸಬೇಕು.

Advertisement

ಕಾರ್ಮಿಕರ ವ್ಯಥೆ ಅರಿತುಕೊಳ್ಳಿ
ಕಾರ್ಮಿಕರು ಕಳೆದ ಲಾಕ್‌ಡೌನ್‌ ವೇಳೆ ಊರಿಗೆ ತೆರಳಲು ವಾಹನ ವ್ಯವಸ್ಥೆ ಇಲ್ಲದೆ ಕಾಲ್ನಡಿಗೆಯಲ್ಲೇ ನೂರಾರು ಕಿ.ಮೀ. ಸಾಗಿದ್ದರು. ಈ ಬಾರಿ ಇಂಥ ದುರಂತ ನಡೆಯದಂತೆ ಕಾರ್ಮಿಕ ಇಲಾಖೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಹಣ ಇರುವುದರಿಂದ ಅಗತ್ಯ ಸೌಲಭ್ಯ, ಸಹಕಾರ ನೀಡಲು ಯೋಚಿಸಬೇಕು.

ರೈತನ ಉತ್ಪನ್ನಕ್ಕೆ ಮಾರುಕಟ್ಟೆ ಕಲ್ಪಿಸಿ
ಕಳೆದ ಬಾರಿ ರೈತರು ಕೃಷ್ಯುತ್ಪನ್ನ ಮಾರುಕಟ್ಟೆಗೆ ತರಲು ಸಾಹಸಪಡ ಬೇಕಾಯಿತು. ಖರೀದಿಸುವ ಜನರಿಲ್ಲದೆ ಬೀದಿಯಲ್ಲಿ ಎಸೆಯುವ ಸ್ಥಿತಿ ಬಂದಿತ್ತು. ಈ ವರ್ಷ ಸರಕಾರ ನಿರ್ಬಂಧ ಜಾರಿಗೆ ಮುನ್ನವೇ ರೈತರ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ವ್ವವಸ್ಥೆ ಕಲ್ಪಿಸಬೇಕು.

ಕಸುಬುದಾರರಿಗೆ ನೆರವು
ಲಾಕ್‌ಡೌನ್‌ನಿಂದಾಗಿ ನೇಕಾರ, ಮಡಿವಾಳ, ಚಮ್ಮಾರ, ಕೌÒರಿಕರ ಸಹಿತ ಅನೇಕ ಸಮುದಾಯಗಳು ಪರದಾಡಿದ್ದರು. ಈಗ ಕುಲಕಸುಬು ಆಧಾರಿತ ಸಮುದಾಯಗಳ ನಿತ್ಯ ಜೀವನ ಮತ್ತು ಉದ್ಯೋಗಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ ಮೇಲಿದೆ.

ಸಂಚಾರ ವ್ಯವಸ್ಥೆ ಕಲ್ಪಿಸಿ
ಕಳೆದ ಬಾರಿ ಸಾರಿಗೆ ಬಸ್‌ ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. ವಿಶೇಷ ಬಸ್‌ಗಳಲ್ಲೂ ಮುಂಜಾಗ್ರತೆ ಕೈಗೊಂಡಿರಲಿಲ್ಲ. ಈ ಬಾರಿ ನಿರ್ಬಂಧಗಳನ್ನು ವಿಧಿಸುವುದಿದ್ದರೆ ಪ್ರತೀ ಜಿಲ್ಲೆಗೂ ಶೇ. 50ರಷ್ಟು ಪ್ರಯಾಣಿಕರ ಮಿತಿಯಲ್ಲಿ ಸಾರಿಗೆ ವ್ಯವಸ್ಥೆ ಮಾಡುವ ಮೂಲಕ ಅವ್ಯವಸ್ಥೆಯನ್ನು ತಪ್ಪಿಸಬಹುದು.

ಬೆಂಗಳೂರಿಗೆ ಕಠಿನ ನಿಯಮ: ಇಂದು ನಿರ್ಧಾರ
ಬೆಂಗಳೂರಿಗೆ ಲಾಕ್‌ಡೌನ್‌ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವ ಆರ್‌. ಅಶೋಕ್‌, ಇಲ್ಲಿಗೆ ಪ್ರತ್ಯೇಕ ಕಠಿನ ನಿಯಮ ರೂಪಿಸಲಾಗುವುದು ಎಂದಿದ್ದಾರೆ. ಕೋವಿಡ್‌ ತಜ್ಞರು ಕಠಿನ ನಿಯಮ ಜಾರಿ ಮಾಡುವಂತೆ ಸಲಹೆ ನೀಡಿದ್ದು, ಆ ಬಗ್ಗೆ ಸೋಮವಾರ ನಡೆಯುವ ಸಭೆಯಲ್ಲಿ ಚರ್ಚಿಸಿ ಸಿಎಂ ಗಮನಕ್ಕೆ ತಂದು ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಲಾಕ್‌ಡೌನ್‌ನಿಂದ ಈಗಾಗಲೇ ತುಂಬಾ ಸಮಸ್ಯೆ ಆಗಿದೆ. ಲಾಕ್‌ಡೌನ್‌ ಬಿಟ್ಟು ಬಿಗಿ ಕ್ರಮ ಜಾರಿ ಮಾಡುವ ಕುರಿತು ಚಿಂತನೆ ಇದೆ.

ಸಂಭಾವ್ಯ ಕಠಿನ ನಿಯಮಗಳೇನು?
1. ನೈಟ್‌ ಕರ್ಫ್ಯೂ ಮುಂದುವರಿಕೆ
2. ವಾರಾಂತ್ಯ ಹಗಲಿನಲ್ಲೂ ಕರ್ಫ್ಯೂ ಜಾರಿ
3. ಹೊರ ಜಿಲ್ಲೆಗಳಿಂದ ಬರು ವವರಿಗೆ ತಪಾಸಣೆ ಕಡ್ಡಾಯ
4. ಹೊರ ರಾಜ್ಯಗಳಿಂದ ಬರು ವವರಿಗೆ ಕ್ವಾರಂಟೈನ್‌ ಕಡ್ಡಾಯ
5.ಪಾರ್ಕ್‌, ಜಿಮ್‌ಗಳಿಗೆ ಪೂರ್ಣ ನಿರ್ಬಂಧ
6. ಮಾಲ್‌, ಸಿನೆಮಾ ಮಂದಿರಗಳಿಗೂ ನಿರ್ಬಂಧ
7. ಆರಾಧನಾಲಯ ಪ್ರವೇಶಕ್ಕೆ ಸಮಯ ನಿಗದಿ

Advertisement

Udayavani is now on Telegram. Click here to join our channel and stay updated with the latest news.

Next