ಶಿವಮೊಗ್ಗ:ಕಂಪ್ಲೇಂಟ್ ಕೊಟ್ಟವನ ಬಗ್ಗೆ ನನಗೇನು ಗೊತ್ತು ಎಂದು ಹೇಳಿದ್ದ ವ್ಯಕ್ತಿ, ಅವರ ಜತೆಯೇ ಸುಮಾರು 146 ಬಾರಿ ಮಾತನಾಡಿದ್ದಾರೆ. ಪರಿಚಯವೇ ಇಲ್ಲದವನ ಜತೆ ಹೇಗೆ ಮಾತನಾಡಿದಿರಿ? ಗಂಡ, ಹೆಂಡತಿ ನಿಮ್ಮ ಪಾರ್ಟಿ ಅಧ್ಯಕ್ಷರಾ? ಅಥವಾ ಅವರೇನ್ ನಿಮ್ ಬ್ಯುಸಿನೆಸ್ ಪಾರ್ಟನ್ ರಾ? ಇದು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಖುಲಾಸೆಗೊಂಡ ಬಳಿಕ ಮಂಗಳವಾರ ಹುಟ್ಟೂರು ಹೊಳೆಕೊಪ್ಪದಿಂದ ಸೊರಬದವರೆಗೆ ಸುಮಾರು 20 ಕಿಲೋ ಮೀಟರ್ ಪಾದಯಾತ್ರೆ ನಡೆಸಿ ನಂತರ ನಡೆದ ಸಮಾವೇಶದಲ್ಲಿ ಹರತಾಳು ಹಾಲಪ್ಪ ಹೆಸರು ಹೇಳದೆ ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಬಹಿರಂಗ ಸಭೆಯಲ್ಲಿ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರ ಹೆಸರನ್ನು ಉಲ್ಲೇಖಿಸದೇ ಹಾಲಪ್ಪ ಅವರು ತಿರುಗೇಟು ನೀಡುವ ಮೂಲಕ ಹೊಸ ಬಾಂಬ್ ವೊಂದನ್ನು ಸಿಡಿಸಿದರು.
ನಿಮ್ಮ ರಾಜಕೀಯ ಜೀವನದಲ್ಲಿ ಯಾವತ್ತಾದರೂ 3,000 ಸೆಕೆಂಡ್ಸ್ ಮಾತನಾಡಿದ್ದೀರಾ? ಈ ಕಚಡಾ ಕೆಲಸ ಯಾರು ಮಾಡಿದ್ದಾರೆಂದು ವಕೀಲ ಎಚ್.ಮಂಜುನಾಥ್ ಅವರು ದಾಖಲೆ ಸಹಿತ ನ್ಯಾಯಾಲಯಕ್ಕೆ ತೋರಿಸಿದ್ದಾರೆ. ನಿಮಗೂ ಒಂದು ಪ್ರಶ್ನೆ ಕೇಳುತ್ತೇನೆ, ಮೇರಿ ಜೋಸೆಫ್ ಯಾರು ಅಂತ ಹೇಳಿ? ಮೇರಿ ಜೋಸೆಫ್ ಗೂ ಒಬ್ಬ ಮಗ ಇದ್ದಾನಲ್ಲ ಆತ ಯಾರು ಎಂದು ಹೇಳಿ ಎಂಬುದಾಗಿ ಮಧು ಬಂಗಾರಪ್ಪ ವಿರುದ್ಧ ಬಾಂಬ್ ಸಿಡಿಸಿದ್ದಾರೆ!
ಟೀಕೆ ಮಾಡುವವರೇನು ಸಾಚಾ ಅಲ್ಲ: ಮಧು ಬಂಗಾರಪ್ಪ:
ಯಾರು ಏನು ಬಡಿದುಕೊಳ್ಳುತ್ತಾರೋ ಬಡಿದುಕೊಳ್ಳಲಿ. ಹೇಳೋರಿಗೆ, ಕೇಳೋರಿಗೆ ಉತ್ತರ ಕೊಡೋದಕ್ಕೆ ಆಗುವುದಿಲ್ಲ. ನನಗೆ ಯಾರ ಜತೆ ಯಾವುದೇ ಸಂಬಂಧ ಇಲ್ಲ. ಟೀಕೆ ಮಾಡುವವರೇನು ಸಾಚಾ ಅಲ್ಲ ಎಂದು ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಹಾಲಪ್ಪ ವಿರುದ್ಧ ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.