ವಿಜಯಪುರ: ಕೆಲಸದ ಸ್ಥಳದಲ್ಲಿ ಪ್ರತಿಯೊಬ್ಬರು ಮಹಿಳೆಯರನ್ನು ಗೌರವದಿಂದ ಕಾಣಬೇಕು. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಯುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮೂಲಕ ಕಾನೂನು ಸಹ ಜಾರಿಗೊಳಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ ಹೇಳಿದರು.
ನಗರದ ರುಡ್‌ಸೆಟ್ ಸಂಸ್ಥೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತ, ಜಿಪಂ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾದ ಕೆಲಸದ ಸ್ಥಳದಲ್ಲಿ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ತಡೆ ಕಾಯ್ದೆ -2013 ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರು ತಮ್ಮ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗೆ ಇರುವ ಕಾಯ್ದೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಪಂ ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಕೆಲಸದ ಸ್ಥಳದಲ್ಲಿ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ತಡೆ ಕಾಯ್ದೆ-2013, ಈ ಕಾಯ್ದೆಯ ಪ್ರಕಾರ ಪ್ರತಿ ಇಲಾಖೆಯಲ್ಲಿ ಆಂತರಿಕ ಕಿರುಕುಳ ಸಮಿತಿ ರಚಿಸಲಾಗಿದೆ. ಕರ್ತವ್ಯದಲ್ಲಿರುವ ಮಹಿಳೆಯರು ತಮ್ಮ ನಡೆಯುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಿ ಈ ಕಾಯ್ದೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇದಲ್ಲದೇ ಮೇಲಧಿಕಾರಿಗಳಿಂದ ಸಹ ಉದ್ಯೋಗಿಗಳಿಗೆ ಯಾವುದೇ ರೀತಿಯ ಕಿರುಕುಳ ನೀಡಿದರೆ ಆಂತರಿಕ ಸಮಿತಿಯ ಮೂಲಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಕಿರುಕುಳ ಅನುಭವಿಸುವ ಮಹಿಳಾ ಉದ್ಯೋಗಿಗಳಿಗೆ ಇದು ಸಹಕಾರಿ ಎಂದು ಹೇಳಿದರು.
ಡಿವೈಎಸ್ಪಿ ಲಕ್ಷ್ಮೀನಾರಾಯಣ ಮಾತನಾಡಿ, ಕೆಲಸದ ಸ್ಥಳದಲ್ಲಿ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ತಡೆ ಕಾಯ್ದೆ-2013 ಕೆಲಸ ಮಾಡುವ ಮಹಿಳೆಯರಿಗೆ ಸಹಕಾರಿಯಾಗಿದೆ. ಮಹಿಳೆಯರು ಕಿರುಕುಳ ತಾಳಿಕೊಳ್ಳದೇ, ಪೊಲೀಸ್ ಇಲಾಖೆಗೆ ದೂರು ನೀಡಿ ಪರಿಹಾರ ಕಂಡುಕೊಳ್ಳಬಹುದು. ಅದರಂತೆ ಉಚಿತ ಸಹಾಯವಾಣಿ 112ಗೆ ಕರೆ ಮಾಡುವಂತೆ ಸಲಹೆ ನೀಡಿದರು.
ಅಂಜುಮನ್ ಕಾನೂನು ಮಹಾ ವಿದ್ಯಾಲಯದ ಉಜ್ವಲಾ ಸರನಾಡಗೌಡ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಕೆ. ಚವಾಣ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.