ಕಲಬುರಗಿ: ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪದ್ಧತಿ ಕೈಬಿಟ್ಟು, ಪೌರ ಕಾರ್ಮಿಕರನ್ನು ಕಾಯಂ ನೇಮಕಾತಿ ಮಾಡಿಕೊಳ್ಳಬೇಕು ಇಲ್ಲವೇ, ನೇರ ಹಣ ಪಾವತಿ ವ್ಯವಸ್ಥೆ ಮೂಲಕ ಭರ್ತಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ ಸೂಚಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನಡೆದ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.
2017ರಲ್ಲಿ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪದ್ಧತಿ ಕೈಬಿಡುವಂತೆ ಆದೇಶಿಸಿದೆ. ಈಗಾಗಲೇ ರಾಜ್ಯದಲ್ಲಿ ಶೇ. 98ರಷ್ಟು ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ. ಅದರೆ, ಕಲಬುರಗಿ ಮಹಾನಗರ ಪಾಲಿಕೆ ಮತ್ತು ಕೆಲ ಸ್ಥಳೀಯ ಸಂಸ್ಥೆಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ಇನ್ನು ಗುತ್ತಿಗೆ ಪದ್ಧತಿ ಮುಂದುವರಿದಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಪಾಲಿಕೆ ಪೌರ ಕಾರ್ಮಿಕರ ನೇರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಆದರೆ, ನೇಮಕ ಕುರಿತಂತೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನೇರ ನೇಮಕಾತಿ ಇನ್ನೂ ಮಾಡಿಲ್ಲ. ಒಮ್ಮೆ ನೇಮಕಾತಿಯಾದರೆ ಗುತ್ತಿಗೆ ಪದ್ಧತಿ ನಿವಾರಣೆಯಾಗಲಿದೆ ಎಂದು ತಿಳಿಸಿದರು.
ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಕರ್ನಾಟಕ ರಾಜ್ಯ ಸಲಹಾ ಸಮಿತಿ ಸದಸ್ಯ ವಿಜಯ ಕುಮಾರ ಅಡಕಿ ಮಾತನಾಡಿ, ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವುದನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.