ಆಲ್ಬನಿ: ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ಅ.27ರಂದು ನಡೆದ ಸುಮಾರು 30 ದೇಶಗಳು ಭಾಗವಹಿಸಿದ್ದ “ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್’ ಸ್ಪರ್ಧೆಯಲ್ಲಿ “ಮಿಸ್ ಇಂಡಿಯಾ’ ಜೀವಿಕಾ ಬೆಂಕಿ ಮೊದಲ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. “ಮಿಸ್ ಬೋಸ್ನಿಯಾ’ ಆಜ್ರಾ ಕ್ಲಾಫಿಜಾ ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್ 2024ರ ಕಿರೀಟವನ್ನು ಗೆದ್ದಿದ್ದಾರೆ.
53 ವರ್ಷಗಳ ಇತಿಹಾಸವಿರುವ ಫೆಸ್ಟಿವಲ್ ಆಫ್ ನೇಶನ್‌ನಲ್ಲಿ ಇಷ್ಟು ದೊಡ್ಡ ಸಾಧನೆ ಮಾಡಿದ ಮೊದಲ ಹೆಮ್ಮೆಯ ಕನ್ನಡಿಗ ಹುಡುಗಿಯಾಗಿದ್ದಾಳೆ 16 ವರ್ಷದ ಜೀವಿಕಾ ಬೆಂಕಿ.
ಮೊದಲು “ಮಿಸ್ ಇಂಡಿಯಾ’ ಸ್ಪರ್ಧೆಯನ್ನು ಗೆದ್ದು ಅನಂತರ ಒಂದು ರೀತಿಯ ಸಣ್ಣ ಪ್ರಮಾಣದ “ಮಿಸ್ ಯುನಿವರ್ಸ್’ ತರಹ ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್‌ನಲ್ಲಿ ಟಾಪ್ ಫೈವ್ ಫೈನಲ್‌ಲಿಸ್ಟ್‌ಗೆ ಬಂದು ಮತ್ತೆ ಕೊನೆ ಹಂತದ ರೋಚಕ ಸ್ಪರ್ಧೆಯಲ್ಲಿ ಅತೀ ಸ್ವಲ್ಪ ಅಂತರದಲ್ಲಿ ಮೊದಲ ಸ್ಥಾನವನ್ನು ತಪ್ಪಿಸಿಕೊಂಡು ಫಸ್ಟ್ ರನ್ನರ್ ಸ್ಥಾನವನ್ನು ಪಡೆದಿದ್ದಾಳೆ.
ಇದಕ್ಕೂ ಮೊದಲು ನಡೆದ ಎಲ್ಲ ದೇಶಗಳ ಮೆರವಣಿಗೆಯಲ್ಲಿ ಮಿಸ್ ಇಂಡಿಯಾ ಜೀವಿಕಾ ಬೆಂಕಿ ಭಾರತ ತಂಡದ ನೇತೃತ್ವವನ್ನು ವಹಿಸಿದ್ದಳು. ಮಿನಿ ವಿಶ್ವಸಂಸ್ಥೆಯ ತರಹ ಕಂಡುಬಂದ ಇಂದಿನ ಅದ್ದೂರಿ ಕಾರ್ಯಕ್ರಮದಲ್ಲಿ ಅಂದಾಜು 30 ದೇಶಗಳ ಸುಮಾರು 3,000 ಜನರು ಭಾಗವಹಿಸಿದ್ದರು. ಇದರಲ್ಲಿ ಎಲ್ಲ ದೇಶಗಳ ವಿವಿಧ ಭಕ್ಷ್ಯಗಳ ಆಹಾರಗಳ ಅಂಗಡಿಗಳನ್ನು ಹಾಕಲಾಗಿತ್ತು.
ಮಿಸ್ ಫೆಸ್ಟಿವಲ್ ಆಪ್ ನೇಶನ್ಸ್ ಫಸ್ಟ್ ರನ್ನರ್ ಅಪ್ ಜೀವಿಕಾ ಮಾತನಾಡಿ, “ನನ್ನ ಈ ಪ್ರಶಸ್ತಿಯನ್ನು ಕೆಲವು ದಿನಗಳ ಹಿಂದೆಯಷ್ಟೇ ನಿಧನರಾದ ನನ್ನ ತಾತನಿಗೆ ( ತಾಯಿಯ ತಂದೆ) ಅರ್ಪಿಸುತ್ತಿದ್ದೇನೆ. ನಿಧನದ ವಿಷಯ ತಿಳಿದ ತತ್‌ಕ್ಷಣ ನನ್ನ ತಾಯಿ ಉಮಾ ಇಂಡಿಯಾಕ್ಕೆ ಧಾವಿಸಿ ಹೋಗಿದ್ದಾರೆ. ಇವತ್ತು ನನ್ನ ತಾಯಿಯನ್ನು ತುಂಬಾ ಮಿಸ್ ಮಾಡಿಕೊಂಡೆ. ನನ್ನ ತಂದೆ ಬೆಂಕಿ ಬಸಣ್ಣ ನನಗೆ ಎಲ್ಲ ರೀತಿಯ ಪ್ರೋತ್ಸಾಹಗಳನ್ನು ಕೊಟ್ಟಿದ್ದಾರೆ. ನನ್ನನ್ನು ಪ್ರೋತ್ಸಾಹಿಸಿದೆಲ್ಲರಿಗೂ ನಾನು ಚಿರಋಣಿಯಾಗಿದ್ದೇನೆ. ಪ್ರಶಸ್ತಿ ಗೆದ್ದ “ಮಿಸ್ ಬೋಸ್ನಿಯಾ”ಗೆ ನನ್ನ ತುಂಬು ಹೃದಯದ ಅಭಿನಂದನೆಗಳನ್ನು ಹೇಳು ತ್ತೇನೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅನುಭವವೇ ಒಂದು ರೋಚಕ ಹಾಗೂ ಗೌರವದ ವಿಷಯವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಸಂಗೀತ, ಕಲೆ, ನೃತ್ಯಗಳನ್ನು ಆಯೋಜಿಸಲಾಗಿತ್ತು.
ಈಗ ನಿಸ್ಕಯೂನ ಹೈಸ್ಕೂಲ್‌ನಲ್ಲಿ 11ನೇ ತರಗತಿ ಓದುತ್ತಿರುವ ಜೀವಿಕಾ ಬೆಂಕಿ, ವೀಕೆಂಡ್‌ಗಳಲ್ಲಿ ಫ್ಲೆ„ಟ್ ಸ್ಕೂಲ್‌ನಲ್ಲಿ ವಿಮಾನ ಹಾರಾಟದ ಪೈಲೆಟ್ ತರಬೇತಿ ಪಡೆಯುತ್ತಿದ್ದಾಳೆ. ಟೆನ್ನಿಸ್ ಮತ್ತು ಲಕ್ರಾಸ್ ತಂಡಗಳ ಕ್ಯಾಪ್ಟನ್ ಆಗಿದ್ದಾಳೆ. ಆಲ್ಬನಿ ಕನ್ನಡ ಸಂಘದ ಯೂಥ್ ವಿಂಗ್‌ನ ಸೆಕ್ರೆಟರಿ ಆಗಿ ಸೇವೆ ಸಲ್ಲಿಸುತ್ತಿದ್ದಾಳೆ.