ನವದೆಹಲಿ: ಉತ್ತರ ಪ್ರದೇಶದಲ್ಲಿನ ಮದರಸಾಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಗೊಂದಲಗಳಿಗೆ ಪರಿಹಾರ ಸಿಕ್ಕಿದೆ. “ಉತ್ತರ ಪ್ರದೇಶದ ಮದರಸಾ ಕಾಯ್ದೆ-2004’ರ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ. ತನ್ಮೂಲಕ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.
ಮದರಸಾ ಕಾಯ್ದೆ ಜಾತ್ಯತೀತತೆಗೆ ವಿರುದ್ಧವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಈ ಕಾಯ್ದೆಯನ್ನು ರದ್ದು ಮಾಡಿತ್ತು. ಅಲ್ಲದೇ ಮದರಸಾಗಳನ್ನು ಮುಚ್ಚಿ, ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರ್ಯಾಯ ಶಾಲೆಗಳಲ್ಲಿ ಅವಕಾಶ ಕಲ್ಪಿಸಲು ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್rಗೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಅವರಿದ್ದ ಪೀಠ ಹೈಕೋರ್ಟ್ ಆದೇಶ ರದ್ದುಗೊಳಿಸಿದೆ. ಹೀಗಾಗಿ, ಸುಮಾರು 16 ಸಾವಿರ ಮದರಸಾಗಳಲ್ಲಿ ಓದುತ್ತಿದ್ದ 17 ಲಕ್ಷ ವಿದ್ಯಾರ್ಥಿಗಳಿಗೆ ಈಗ ರಿಲೀಫ್ ಸಿಕ್ಕಂತಾಗಿದೆ.
“ಮದರಸಾಗಳಲ್ಲಿ ಸೂಚಿಸಲಾದ ಶಿಕ್ಷಣ ಮಟ್ಟವನ್ನು ಪ್ರಮಾಣೀಕರಿಸುವುದು ಕಾಯ್ದೆಯ ಉದ್ದೇಶವಾಗಿದೆಯೇ ಹೊರತು, ಮದರಸಾಗಳ ದೈನಂದಿನ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಈ ಕಾಯ್ದೆಯು ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಸಕಾರಾತ್ಮಕ ಬಾಧ್ಯತೆಗೆ ಅನುಗುಣವಾಗಿರುತ್ತದೆ. ಜತೆಗೆ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಮತ್ತು ಯೋಗ್ಯವಾದ ಜೀವನವನ್ನು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಈ ಕಾಯ್ದೆ ಮೂಲಭೂತ ನಿಯಮಗಳನ್ನು ಉಲ್ಲಂ ಸಿದರೆ ಮಾತ್ರ ಕಾಯ್ದೆಯನ್ನು ರದ್ದು ಮಾಡಬಹುದು’ ಎಂದು ಸಿಜೆಐ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.
ಫಾಜಿಲ್, ಕಾಮಿಲ್ ಶಿಕ್ಷಣ ಅಸಾಂವಿಧಾನಿಕ: ನ್ಯಾಯಪೀಠ
ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ಮದರಸಾಗಳು ಮುನ್ಷಿ (10ನೇ ತರಗತಿಗೆ ಸಮ), ಆಲಿಮ್ (12ನೇ ತರಗತಿಗೆ ಸಮ) ಶಿಕ್ಷಣವನ್ನು ನೀಡಬಹುದು. ಆದರೆ ಪದವಿ ಎಂದು ಪರಿಗಣಿಸುವ ಫಾಜಿಲ್ ಮತ್ತು ಕಾಮಿಲ್ ಶಿಕ್ಷಣ ನೀಡುವಂತಿಲ್ಲ. ಇದು ಯುಜಿಸಿ ನಿಯಮಕ್ಕೆ ವಿರುದ್ಧವಾದ ಕಾರಣ ಇದನ್ನು ಅಸಾಂವಿಧಾನಿಕ ಎನ್ನಲಾಗುತ್ತದೆ. ಕಾಮಿಲ್‌ನಲ್ಲಿ ಪರ್ಷಿಯನ್, ಅರೇಬಿಕ್ ಸಾಹಿತ್ಯ ಸೇರಿದಂತೆ ಇಸ್ಲಾಮಿಕ್ ನ್ಯಾಯಶಾಸ್ತ್ರಗಳನ್ನು ಬೋಧಿಸಲಾಗುತ್ತದೆ.