ಮೈಸೂರು: ಹನುಮಂತೋತ್ಸವ ಸಮಿತಿವತಿಯಿಂದ ಹನುಮ ಜಯಂತಿ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಆಂಜನೇಯ ಸ್ವಾಮಿಯ ಭವ್ಯ ಮೆರವಣಿಗೆ ನಡೆಯಿತು. ಆಂಜನೇಯ ಸ್ವಾಮಿಯ ಮೂರ್ತಿಗಳು ಹಾಗೂ ಉತ್ಸವ ಮೂರ್ತಿಗಳು, ನಂದಿಕಂಬ, ವೀರಗಾಸೆ, ಕಂಸಾಳೆ ತಮಟೆ, ನಗಾರಿ, ಕೀಲು ಕುದುರೆ ಮುಂತಾದ ಕಲಾತಂಡಗಳ ಜೊತೆಗೆ ವೈಭವದ ಮೆರವಣಿಗೆ ನಡೆಯಿತು.
ಎಲ್ಲರಿಗೂ ಒಳಿತು ಮಾಡಲಿ: ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಹನುಮ ಜಯಂತಿ ಮೆರವಣಿಗೆಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬೆಳ್ಳಿ ರಥದಲ್ಲಿದ್ದ ಆಂಜನೇಯ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ನಾಡಿನ ಸಮಸ್ತ ಜನತೆಗೆ ಹನುಮಜಯಂತಿಯ ಶುಭಾಶಯಗಳು. ಹನುಮಾನ್ ಸ್ವಾಮಿ ಎಲ್ಲರಿಗೂ ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ, ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹಾರೈಸಿದರು.
ತುಂಬಾ ಖುಷಿ ತಂದಿದೆ: ಚಲನಚಿತ್ರ ನಟ ವಸಿಷ್ಠ ಮಾತನಾಡಿ, ಮೈಸೂರು ಮಹಾರಾಜರಿಂದ ಹನುಮಜಯಂತಿ ಮೆರವಣಿಗೆಗೆ ಚಾಲನೆ ಸಿಕ್ಕಿರುವುದು ಬಹಳ ಖುಷಿ ನೀಡಿದೆ. ಈ ರೀತಿಯ ಕಾರ್ಯಕ್ರಮ ಹುಣಸೂರಿನಲ್ಲಿ ನಡೆದಿತ್ತು. ಇದೀಗ ಮೈಸೂರಿನಲ್ಲಿ ನಡೆಯುತ್ತಿರುವುದು ತುಂಬಾ ಖುಷಿ ನೀಡಿದೆ ಎಂದರು.
ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆಯು ಅಶೋಕ ರಸ್ತೆ, ನ್ಯೂ ಸಯ್ನಾಜಿ ರಾವ್ ರಸ್ತೆ, ಇರ್ವಿನ್ ರಸ್ತೆ, ದೇವರಾಜ ಅರಸು ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ ಮೂಲಕ ಸಾಗಿ ಮಹಾರಾಜ ಕಾಲೇಜು ಮೈದಾನದ ಬಳಿ ಸಮಾಪ್ತಿಗೊಂಡಿತು.
ಮೆರವಣಿಗೆಯಲ್ಲಿ ಕೇಸರಿ ಬಾವುಟಗಳನ್ನು ಹಿಡಿದಿದ್ದ ಯುವ ಜನರು ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆಗಳನ್ನು ಮೊಳಗಿಸಿದರು. ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಬಿಜೆಪಿಯ ಶಾಸಕರು, ನಗರಪಾಲಿಕೆ ಸದಸ್ಯರು, ಮಾಜಿ ಸದಸ್ಯರು ಸೇರಿದಂತೆ ವಿವಿಧ ಪಕ್ಷಗಳ-ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಮೈಸೂರು ಹನುಮಂತೋತ್ಸವ ಸಮಿತಿಯ ಮುಖಂಡರು, ಸದಸ್ಯರುಗಳು ಭಾಗವಹಿಸಿದ್ದರು.
ಮೆರವಣಿಗೆ ಸಾಗುವ ಮಾರ್ಗ ಹಾಗೂ ವೃತ್ತಗಳನ್ನು ಕೇಸರಿ ತೋರಣ ಹಾಗೂ ಧ್ವಜಗಳಿಂದ ಸಿಂಗರಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.